ಗೋವಿಂದರಾಜು ತಲೆದಂಡ ಗುಪ್ತಚರದಿಂದ ಹೇಮಂತ್‌ ವರ್ಗ

Published : Jun 07, 2025, 08:04 AM IST
Govindaraju K.

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಪರಿಷತ್‌ ಸದಸ್ಯ ಕೆ.ಗೋವಿಂದರಾಜು ಅವರನ್ನು ಕೈಬಿಡಲಾಗಿದೆ.

 ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ್ದ ಕಾಲ್ತುಳಿತ ದುರಂತ ಸಂಬಂಧ ತಲೆದಂಡ ಪರ್ವ ಮುಂದುವರೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಪರಿಷತ್‌ ಸದಸ್ಯ ಕೆ.ಗೋವಿಂದರಾಜು ಅವರನ್ನು ಕೈಬಿಡಲಾಗಿದೆ.

ಮತ್ತೊಂದೆಡೆ, ದುರಂತಕ್ಕೆ ಗುಪ್ತಚರ ಇಲಾಖೆಯ ವೈಫಲ್ಯವೂ ಕಾರಣ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರನ್ನು ಗುಪ್ತಚರ ಇಲಾಖೆ ಎಡಿಜಿಪಿ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ ಎಡಿಜಿಪಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರ ಹುದ್ದೆಯಲ್ಲಿ ಮುಂದುವರೆಸಲಾಗಿದೆ.

ಗೋವಿಂದರಾಜುಗೆ ಕೊಕ್‌:

ವಿಧಾನಸೌಧದಲ್ಲಿ ಆರ್‌ಸಿಬಿ ತಂಡಕ್ಕೆ ಸನ್ಮಾನ ಕಾರ್ಯಕ್ರಮದ ಮುಖ್ಯ ರೂವಾರಿಯಾಗಿದ್ದ ವಿಧಾನಪರಿಷತ್‌ ಸದಸ್ಯ ಕೆ.ಗೋವಿಂದರಾಜು ಅವರನ್ನು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿ ಆದೇಶಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರಾಸಕ್ತಿ ಹೊರತಾಗಿಯೂ ಅವರನ್ನು ಮನವೊಲಿಸಿ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಅನುಮತಿ ಕೊಡಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಹೇಮಂತ್‌ ನಿಂಬಾಳ್ಕರ್‌ ಬದಲಾವಣೆ:

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಐದು ಮಂದಿ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿದ್ದ ಸರ್ಕಾರವು ಶುಕ್ರವಾರ ಗುಪ್ತಚರ ಇಲಾಖೆ ಎಡಿಜಿಪಿ ಹುದ್ದೆಯಿಂದ ಹೇಮಂತ್‌ ನಿಂಬಾಳ್ಕರ್‌ ಅವರನ್ನು ವರ್ಗಾವಣೆ ಮಾಡಿದೆ.

ಪ್ರಕರಣದಲ್ಲಿ ಗುಪ್ತಚರ ವೈಫಲ್ಯದ ಆರೋಪ ಹಿನ್ನೆಲೆಯಲ್ಲಿ ಅವರನ್ನು ಬದಲಿಸಿದ್ದು, ತೆರವಾದ ಗುಪ್ತಚರ ಇಲಾಖೆ ಎಡಿಜಿಪಿ ಹುದ್ದೆಗೆ ಹಿರಿಯ ಐಪಿಎಸ್‌ ಅಧಿಕಾರಿ ಹಾಗೂ ಗೃಹ ಇಲಾಖೆ ಪ್ರಧಾನಕಾರ್ಯದರ್ಶಿ ಆಗಿದ್ದ ಎಸ್‌.ರವಿ ಅವರನ್ನು ನೇಮಿಸಿ ಸರ್ಕಾರ ಆದೇಶ ಮಾಡಿದೆ.

ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹಿರಿಯ ಐಪಿಎಸ್‌ ಅಧಿಕಾರಿ ಕೆ.ವಿ.ಶರತ್‌ ಚಂದ್ರ ಅವರನ್ನು ನೇಮಿಸಲಾಗಿದೆ. ಜತೆಗೆ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ಸಹ ಶರತ್‌ ಚಂದ್ರ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

ಜತೆಗೆ ಎಡಿಜಿಪಿ ಆರ್‌.ಹಿತೇಂದ್ರ ಅವರಿಗೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಹಾಗೂ ಪೊಲೀಸ್‌ ಸಂವಹನ, ಸಾರಿಗೆ ಮತ್ತು ಆಧುನೀಕರಣ, ಎಸ್‌. ಮುರುಗನ್ ಅವರಿಗೆ ಪೊಲೀಸ್‌ ನೇಮಕಾತಿ ಎಡಿಜಿಪಿ ಹುದ್ದೆಯ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್