ಸರ್ಕಾರದ ವಿರುದ್ಧ ದೋಸ್ತಿಗಳ ವಾರ್‌ : ಕಾಲ್ತುಳಿತ ಕೇಸಲ್ಲಿ ಸಿಎಂ, ಡಿಸಿಎಂ ವಜಾಕ್ಕೆ ಒತ್ತಾಯ

Published : Jun 07, 2025, 07:41 AM IST
BY Vijayendra

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರನ್ನು ಕಿತ್ತೆಸೆಯಬೇಕು’ ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಒತ್ತಾಯಿಸಿದ್ದಾರೆ.

 ಬೆಂಗಳೂರು : ‘ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರ್ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಕಾಂಗ್ರೆಸ್ ಹೈಕಮಾಂಡ್‌ಗೆ ಮಾನ-ಮರ್ಯಾದೆ, ಕನ್ನಡಿಗರ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರನ್ನು ಕಿತ್ತೆಸೆಯಬೇಕು’ ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಒತ್ತಾಯಿಸಿದ್ದಾರೆ.

ದಕ್ಷ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಸೇರಿ ಐವರು ಪೊಲೀಸ್ ಅಧಿಕಾರಿಗಳ ಅಮಾನತು ಮೂಲಕ ಸರ್ಕಾರ ಜನತೆಗೆ ಕೆಟ್ಟ ಸಂದೇಶ ರವಾನಿಸಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಹುದಿನಗಳ ನಂತರ ಬಿಜೆಪಿ ಮತ್ತು ಜೆಡಿಎಸ್ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್‌ ಅವರು ಒಂದೇ ವೇದಿಕೆಯಲ್ಲಿ ಕುಳಿತು ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ದುರಂತಕ್ಕೆ ಮುಖ್ಯಮಂತ್ರಿ ಮತ್ತವರ ಕಚೇರಿಯೇ ನೇರ ಕಾರಣ. ಎರಡ್ಮೂರು ಕಡೆ ವಿಜಯೋತ್ಸವ ಮಾಡಲು ಸಾಧ್ಯವಿಲ್ಲ. ಭದ್ರತೆ ಕೊಡಲು ಕಷ್ಟ ಆಗುತ್ತದೆ ಎಂದು ಪೊಲೀಸರು ಪರಿಪರಿಯಾಗಿ ಹೇಳಿದರೂ ವಿಜಯೋತ್ಸವ ಆಗಲೇಬೇಕು ಎಂದು ಮುಖ್ಯಮಂತ್ರಿಗಳು ಪಟ್ಟು ಹಿಡಿದರು. ಅಲ್ಲದೆ, ಪೊಲೀಸರಿಗೆ ತಾಕೀತು ಮಾಡಿ ಬೆದರಿಕೆ ಹಾಕಿದ್ದರು ಎಂದು ಆಪಾದಿಸಿದರು.

ವಿಜಯೋತ್ಸವ ಆಚರಣೆಗೆ ಮೊದಲೇ ಆರ್‌ಸಿಬಿ ಪೊಲೀಸರ ಅನುಮತಿ ಕೇಳಿತ್ತು. ಆ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ದರು. ಹಾಗಿದ್ದರೂ ವಿಜಯೋತ್ಸವ ಆಗಲೇಬೇಕು ಎಂದು ಮುಖ್ಯಮಂತ್ರಿಗಳು ತಾಕೀತು ಮಾಡಿದ್ದು ಯಾಕೆ? ಹನ್ನೊಂದು ಜನರ ಸಾವಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರೇ ಕಾರಣ. ಮಾತೆತ್ತಿದರೆ ಮುಖ್ಯಮಂತ್ರಿಗಳು ಗೋವಿಂದ.. ಗೋವಿಂದ.. ಎನ್ನುತ್ತಾರಲ್ಲ. ಈ ದುರಂತಕ್ಕೆ ಮೂಲ ಪುರುಷನೇ ಆತ ಎಂದು ಆರೋಪಿಸಿದರು.

ಗೋವಿಂದರಾಜು ಎಂಬ ವ್ಯಕ್ತಿ ಇಷ್ಟೆಲ್ಲಾ ಸಾವು-ನೋವುಗಳಿಗೆ ಕಾರಣ. ಅವರ ಬಗ್ಗೆ ಏನೇನೋ ಕಥೆಗಳನ್ನು ಹೇಳುತ್ತಾರೆ. ಸುತ್ತಲೂ ಮುಖ್ಯಮಂತ್ರಿಗಳು ಎಂಥ ವ್ಯಕ್ತಿಗಳನ್ನು ಇಟ್ಟುಕೊಂಡಿದ್ದಾರೆ ಎಂಬುದು ಪ್ರಶ್ನಾರ್ಹ. ರಾಜ್ಯದಲ್ಲಿ ಈ ಸರ್ಕಾರದ ಮಾನ ಮರ್ಯಾದೆ ಉಳಿಯಬೇಕು ಎನ್ನುವುದಾದರೆ ತಮ್ಮ ಸುತ್ತಮುತ್ತ ಇರುವ ಇಂತಹ ಕೆಟ್ಟ ಹುಳಗಳನ್ನು ಮೊದಲು ಕಿತ್ತು ಬಿಸಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

ತಪ್ಪು ಮಾಡಿದ್ದು ಸರ್ಕಾರ. ಆದರೆ, ಶಿಕ್ಷೆಗೆ ಗುರಿಯಾಗಿದ್ದು ಅಧಿಕಾರಿಗಳು. ದಯಾನಂದ್ ಅವರು ಹೊಸ ವರ್ಷದ ಆಚರಣೆ, ಅನೇಕ ಕ್ರಿಕೆಟ್ ಪಂದ್ಯಗಳು ಸೇರಿ ಅನೇಕ ಸಂದರ್ಭಗಳಲ್ಲಿ ನಗರದ ಪೊಲೀಸ್ ಕಮಿಷನರ್ ಅಗಿದ್ದರು. ಹೊಸ ವರ್ಷದ ಹಿಂದಿನ ದಿನ ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಲಕ್ಷಾಂತರ ಜನ ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ವ್ಯವಸ್ಥೆ ಮಾಡಿದ್ದರು, ಅಂಥ ಅಧಿಕಾರಿಯನ್ನು ಅಮಾನತುಗೊಳಿಸಿ ಇವರು ಯಾವ ರೀತಿಯ ಸಂದೇಶ ನೀಡಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ಕಾಂಗ್ರೆಸ್ ಹೈಕಮಾಂಡ್ ಎನ್ನುವುದು ಇದ್ದರೆ, ಅದಕ್ಕೆ ಸಂಕೋಚ, ನಾಚಿಕೆ ಎನ್ನುವುದು ಇದ್ದರೆ ಮೊದಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ತೆಗೆದು ಅವರ ಜಾಗಕ್ಕೆ ಸಭ್ಯರನ್ನು ತರಬೇಕು. ವರ್ಚಸ್ಸು ಹೆಚ್ಚಿಸಿಕೊಳ್ಳುವ, ಪ್ರಚಾರದ ಹಪಾಹಪಿಗೆ ಸಿಕ್ಕಿ ಇಬ್ಬರೂ ಈ ದುರ್ಘಟನೆಗೆ ಕಾರಣರಾಗಿದ್ದಾರೆ.

ಡಿ.ಕೆ.ಶಿವಕುಮಾರ್ ಶೋ ಕೊಡಲು ಹೋಗಿ ತಗುಲಿಕೊಂಡಿದ್ದಾರೆ. ಅವರು ಒಂದು ಕೇಸಿನ ನಿಮಿತ್ತ ಕನಕಪುರದ ಕೋರ್ಟ್‌ನಲ್ಲಿದ್ದರು. ರಾಯಲ್ ಚಾಲೆಂಜರ್ಸ್ ತಂಡ ಬೆಂಗಳೂರಿಗೆ ಬರುತ್ತಿದೆ, ಆ ತಂಡವನ್ನು ಸ್ವಾಗತಿಸಲು ಮುಖ್ಯಮಂತ್ರಿ ಮತ್ತವರ ಪಟಾಲಂ ಸಜ್ಜಾಗಿದೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ತಂಡಕ್ಕೆ ಸನ್ಮಾನ ಮಾಡಲು ಮುಖ್ಯಮಂತ್ರಿಗಳ ಟೀಮ್ ನಿರ್ಧಾರ ಮಾಡಿದೆ ಎಂಬ ಮಾಹಿತಿ ಶಿವಕುಮಾರ್‌ ಅವರಿಗೆ ಹೋಗುತ್ತದೆ. ಇದರಿಂದ ಕೋರ್ಟ್‌ನಲ್ಲಿಯೇ ಕಕ್ಕಾಬಿಕ್ಕಿಯಾದ ಅವರು ಅಲ್ಲಿಂದಲೇ ನೇರವಾಗಿ ಕೈಯ್ಯಲ್ಲಿ ಆರ್‌ಸಿಬಿ ಬಾವುಟ ಹಿಡಿದು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದರು ಎಂದು ವಿವರಿಸಿದರು.

ಸಿಎಂ-ಡಿಸಿಎಂ ರಾಜೀನಾಮೆ ನೀಡಲಿ- ಬಿವೈವಿ:

ಬಿ.ವೈ.ವಿಜಯೇಂದ್ರ ಮಾತನಾಡಿ, ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಕಾಲ್ತುಳಿತ ಹಾಗೂ 11 ಜನ ಅಮಾಯಕರ ಸಾವಿನ ಸಂಬಂಧ ಕೊನೆಗೂ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ಕೇಸ್ ತೆಗೆದುಕೊಂಡು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ ನಂತರ ಸರ್ಕಾರ ಎಚ್ಚತ್ತುಕೊಂಡಿದೆ ಎಂದು ವಿಶ್ಲೇಷಿಸಿದರು. ಮುಖ್ಯಮಂತ್ರಿಗಳು, ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡುವ ಬದಲು ತಾವೇ ಜವಾಬ್ದಾರಿ, ನೈತಿಕ ಹೊಣೆ ಹೊತ್ತು ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ ಎಂದು ಮತ್ತೊಮ್ಮೆ ಒತ್ತಾಯಿಸಿದರು.

ಆರ್‌.ಅಶೋಕ್ ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಡೆದ ಕಾಲ್ತುಳಿತದ ಘಟನೆಯಲ್ಲಿ ಸರ್ಕಾರವೇ ಅಪರಾಧಿ. ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನಾವು ಹೋರಾಟ ಮಾಡುತ್ತೇವೆ. ಈ ಘಟನೆಯಲ್ಲಿ ಪೊಲೀಸರನ್ನು ಹರಕೆ ಕುರಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್‌ ಆಯುಕ್ತ ದಯಾನಂದ್ ಸೇರಿ ಪೊಲೀಸರ ಸಸ್ಪೆಂಡ್‌ಗೆ ಆಕ್ರೋಶ

ವಿಜಯೋತ್ಸವ ಆಚರಣೆಗೆ ಮೊದಲೇ ಆರ್‌ಸಿಬಿ ಪೊಲೀಸರ ಅನುಮತಿ ಕೇಳಿತ್ತು. ಆ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ದರು

2 ಕಡೆ ವಿಜಯೋತ್ಸವ ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದರೂ, ಸಿಎಂ ಪಟ್ಟಿನ ಕಾರಣ ಕಾರ್ಯಕ್ರಮ ಆಯೋಜನೆ ಅರೋಪ

11 ಜನರ ಸಾವಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರೇ ಕಾರಣ

ಕಾಲ್ತುಳಿತ ಕೇಸಲ್ಲಿ ಸರ್ಕಾರವೇ ಅಪರಾಧಿ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಹೋರಾಟ ಖಚಿತ: ವಿಪಕ್ಷಗಳ ಎಚ್ಚರಿಕೆ

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್‌ರಿಂದ ಸರ್ಕಾರದ ಮೇಲೆ ವಾಗ್ದಾಳಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!