ಅರ್ಧ ಮಳೆಗಾಲ ಅಂತ್ಯ: ಅಲ್ಲಲ್ಲಿ ಬರ, ಅಲ್ಲಲ್ಲಿ ಮಳೆ - ಕೆಆರ್‌ಎಸ್‌, ಕಬಿನಿಗೆ ಒಳಹರಿವು ಏರಿಕೆ

Published : Aug 01, 2026, 05:21 AM IST
KRS Dam

ಸಾರಾಂಶ

ದೇಶದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿಯಾದ ಮುಂಗಾರು ಮಾರುತಗಳು ಪ್ರಸಕ್ತ ಹಂಗಾಮಿನಲ್ಲಿ ತಮ್ಮ ಅರ್ಧಪ್ರಯಾಣ ಮುಗಿಸಿದ್ದು, ಈ ಅವಧಿಯಲ್ಲಿ ಅಲ್ಲಲ್ಲಿ ಉತ್ತಮ ಮಳೆ ಆಗಿದ್ದರೆ, ಅಲ್ಲಲ್ಲಿ ಬರವೂ ಕಂಡುಬಂದಿದೆ.

ನವದೆಹಲಿ/ ಬೆಂಗಳೂರು: ದೇಶದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿಯಾದ ಮುಂಗಾರು ಮಾರುತಗಳು ಪ್ರಸಕ್ತ ಹಂಗಾಮಿನಲ್ಲಿ ತಮ್ಮ ಅರ್ಧಪ್ರಯಾಣ ಮುಗಿಸಿದ್ದು, ಈ ಅವಧಿಯಲ್ಲಿ ಅಲ್ಲಲ್ಲಿ ಉತ್ತಮ ಮಳೆ ಆಗಿದ್ದರೆ, ಅಲ್ಲಲ್ಲಿ ಬರವೂ ಕಂಡುಬಂದಿದೆ.

ಈ ನಡುವೆ ಮುಂಗಾರು ಹಂಗಾಮಿನ ಮೊದಲ 2 ತಿಂಗಳಲ್ಲಿ ದೇಶಾದ್ಯಂತ ಶೇ.13ರಷ್ಟು ಮಳೆ ಕೊರತೆ ದಾಖಲಾಗಿದ್ದರೆ, ಇದೀಗ ಎರಡನೇ ಭಾಗದಲ್ಲೂ ದೀರ್ಘಕಾಲೀನ ಸರಾಸರಿಯ ಶೇ.94ರಷ್ಟು ಮಾತ್ರವೇ ಮಳೆಯ ಸಾಧ್ಯತೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದು ಈಗಾಗಲೇ ಭಾರೀ ಮಳೆಯ ಕೊರತೆ ಎದುರಿಸುತ್ತಿರುವ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಭಾರೀ ಆತಂಕಕಾರಿಯಾಗಿ ಹೊರಹೊಮ್ಮಿದೆ.

ರಾಜ್ಯದಲ್ಲಿ ಚುರುಕಾದ ಮುಂಗಾರು:

ಈ ಆತಂಕದ ಸುದ್ದಿಯ ನಡುವೆಯೂ ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು ಕೊಡಗು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಕೇರಳದ ವೈಯನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳ ಹರಿವು 10000 ಕ್ಯುಸೆಕ್‌ ತಲುಪಿದೆ. ಜಲಾಶಯದ ನೀರಿನ ಮಟ್ಟ (ಗರಿಷ್ಠ ಮಟ್ಟ 2284 ಅಡಿ) 2278.38 ಅಡಿಗಳಿಗೆ ಏರಿದೆ. ಜಲಾಶಯದಿಂದ 500 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಮಳೆ ಹಿನ್ನೆಲೆಯಲ್ಲಿ ಕೊಡಗಿನ ಹಾರಂಗಿ ಜಲಾಶಯದಿಂದ 13 ಸಾವಿರ ಕ್ಯುಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಮತ್ತೊಂದೆಡೆ ಕೆಆರ್‌ಎಸ್‌ ಒಳಹರಿವು 10,504 ಸಾವಿರ ಕ್ಯುಸೆಕ್‌ಗೆ ತಲುಪಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ, ಸುಬ್ರಹ್ಮಣ್ಯ ಜಳಕದ ಕಟ್ಟೆ ಜಲಾವೃತಗೊಂಡಿದೆ. ಶೃಂಗೇರಿ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ತುಂಗಾ ಪ್ರವಾಹದಿಂದಾಗಿ ಶೃಂಗೇರಿಯ ಕಪ್ಪೆಶಂಕರ ದೇಗುಲ ಮುಳುಗಡೆಯಾಗಿದೆ.

ಈ ನಡುವೆ ಮಂಗಳೂರಿನ ಕುಂತೂರು ಸಮೀಪ ಅಡಕೆ ಮರ ಬಿದ್ದು ಕೃಷಿ ಕಾರ್ಮಿಕ ಯಾದವ ಗೌಡ (66) ಎಂಬುವರು ಮೃತಪಟ್ಟಿದ್ದಾರೆ. ಭಾರೀ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗಿನ ಸೋಮವಾರ ಪೇಟೆ ಹಾಗೂ ಮಡಿಕೇರಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

ಉತ್ತರ ಕರ್ನಾಟಕ:

ಇನ್ನು ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಆಲಮಟ್ಟಿ, ನಾರಾಯಣಪುರ ಸೇರಿ ಕೃಷ್ಣಾ ಕೊಳ್ಳದ ಜಲಾಶಯಗಳು ಭರ್ತಿಯಾಗಿವೆ. ಕೃಷ್ಣಾ ನದಿಯ ಒಳಹರಿವು 1 ಲಕ್ಷ ಕ್ಯುಸೆಕ್‌ಗೆ ಏರಿದೆ. ಇದರಿಂದಾಗಿ ಬೆಳಗಾವಿಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತವಾಗಿವೆ. ಇದೇ ವೇಳೆ, ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದ ನೀರಿನ ಮಟ್ಟ 1703 ಅಡಿಗಳಿಗೆ (ಗರಿಷ್ಠ 1704.81) ತಲುಪಿದೆ. ಜಲಾಶಯದ ಎಲ್ಲಾ 26 ಗೇಟ್‌ಗಳನ್ನು ತೆರೆದು 1.10 ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಯಾದಗಿರಿ ಜಿಲ್ಲೆ ನಾರಾಯಣಪುರ ಜಲಾಶಯದ ನೀರಿನ ಮಟ್ಟ 1612 ಅಡಿಗಳಿಗೆ (ಗರಿಷ್ಠ 1615) ಏರಿದ್ದು, 24 ಕ್ರಸ್ಟ್‌ಗೇಟ್‌ಗಳ ಮೂಲಕ 1.11 ಲಕ್ಷ ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಮಳೆಯಿಂದಾಗಿ ಬೀದರ್‌ ತಾಲೂಕಿನ ಬಾಲೂರ(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೊದಲನೆ ಅಂತಸ್ತಿನ ಮೂರು ಕೋಣೆಗಳು ಗುರುವಾರ ರಾತ್ರಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕೆಲವೆಡೆ ಬರ:

ಮತ್ತೊಂದೆಡೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಸೇರಿ ರಾಜ್ಯದ ಬಹುತೇಕ ಕಡೆ ಮಳೆ ಕೊರತೆ ಮುಂದುವರಿದಿದ್ದು, ಬರದ ಛಾಯೆ ಮುಂದುವರಿದಿದೆ.

ಮತ್ತಷ್ಟು ಮಳೆ ಕೊರತೆ:

ಮುಂಗಾರಿನ ಮೊದಲ ತಿಂಗಳಾದ ಜೂನ್‌ನಲ್ಲಿ ದೇಶದಲ್ಲಿ ಮಳೆ ಕೊರತೆ ಶೇ.35.4ರಷ್ಟಿತ್ತು. ಆದರೆ ಜುಲೈ ತಿಂಗಳಲ್ಲಿ ಕೆಲವು ರಾಜ್ಯಗಳಲ್ಲಿ ಉತ್ತಮ ಮಳೆಯಾದ ಕಾರಣ ಒಟ್ಟಾರೆ ಮಳೆ ಕೊರತೆ ಶೇ.13ಕ್ಕೆ ಇಳಿಕೆಯಾಗಿತ್ತು. ಆದರೆ ಮುಂಗಾರಿನ ಉಳಿದ ಎರಡು ತಿಂಗಳಾದ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಇರಲಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ.

ಎಷ್ಟು ಮಳೆ?:

ದೀರ್ಘಕಾಲ ಸರಾಸರಿ ಅನ್ವಯ (1971-2020) ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ಸರಾಸರಿ 422.8 ಮಿ.ಮೀನಷ್ಟು ಮಳೆಯಾಗುತ್ತದೆ. ಇದೀಗ ಇದರ ಶೇ.94ರಷ್ಟು ಅಂದರೆ 397 ಮಿ.ಮೀ.ನಷ್ಟು ಮಳೆಯ ನಿರೀಕ್ಷೆ ಇದೆ. ಅಂದರೆ ಕನಿಷ್ಠ 25 ಮಿ.ಮೀನಷ್ಟು ಮಳೆ ಕೊರತೆ ಸಾಧ್ಯತೆ ಇದೆ. ಇನ್ನು ಆಗಸ್ಟ್‌ ತಿಂಗಳಲ್ಲಿ ದೀರ್ಘಕಾಲೀನ ಸರಾಸರಿ ಮಳೆಯ ಪ್ರಮಾಣ 254.9 ಮಿ.ಮೀನಷ್ಟು ಇದೆ. ಇದು ಕೂಡಾ ಇಳಿಕೆಯಾಗಲಿದೆ.

ಎಲ್ಲೆಲ್ಲಿ ಮಳೆ? ಕೊರತೆ?:

ಕಾಶ್ಮೀರ, ಉತ್ತರಾಖಂಡ, ಗುಜರಾತ್‌, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ, ಸಿಕ್ಕಿಂ ಸೇರಿ ಕೆಲ ರಾಜ್ಯಗಳಲ್ಲಿ ಭಾರೀ ಮಳೆಯಾಗಿದ್ದರೆ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಬಿಹಾರ, ಹರ್ಯಾಣ, ಉತ್ತರಪ್ರದೇಶ, ಕೇರಳ, ಮೇಘಾಲಯ ಮೊದಲ ರಾಜ್ಯಗಳು ಮಳೆ ಕೊರತೆ ಎದುರಿಸುತ್ತಿವೆ. ಒಡಿಶಾ, ಅಸ್ಸಾಂನಲ್ಲಿ ಮಳೆಯಿಂದ ಪ್ರವಾಹ ಸ್ಥಿತಿ ಸೃಷ್ಟಿಯಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕಾವೇರಿಗಾಗಿ 13ಕ್ಕೆ ಕರ್ನಾಟಕ ಬಂದ್‌
ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಸಲ್ಲದು