ಇನ್ನೊಂದು ಸಾರಿ ನಮ್ಮ ತಂಟೆಗೆ ಬಾರದ ಹಾಗೆ ಮಾಡಬೇಕಿತ್ತು ಎಂದು ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಬಾಗಲಕೋಟೆ : ಪದೇ ಪದೇ ನಮ್ಮ ಕೈಗೆ ವೈರಿಗಳು ಸಿಗೋದಿಲ್ಲ, ಕೈಗೆ ಸಿಕ್ಕಿದಾಗ ಬಡಿಬೇಕು. ಮೊನ್ನೆ ಸಿಕ್ಕಿಹಾಕಿಕೊಂಡಿದ್ದರು. ಇನ್ನೊಂದು ಸಾರಿ ನಮ್ಮ ತಂಟೆಗೆ ಬಾರದ ಹಾಗೆ ಮಾಡಬೇಕಿತ್ತು ಎಂದು ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ ವಿಷಯದಲ್ಲಿ ಇಡೀ ದೇಶ ಅಷ್ಟೇ ಅಲ್ಲ ಮುಸ್ಲಿಂ ರಾಷ್ಟ್ರದವರು ಭಾರತಕ್ಕೆ ಬೆಂಬಲವಾಗಿದ್ದರು. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ಅನವಶ್ಯಕವಾಗಿತ್ತು. ಸಿಮ್ಲಾ ಪ್ರಕರಣದ ವೇಳೆ ಯಾರು ಮಧ್ಯಸ್ಥಿಕೆ ಬೇಡ ಎಂದು ತೀರ್ಮಾನವಾಗಿತ್ತು. ಟ್ರಂಪ್ ಮಾತಿಗೆ ಬೆಲೆ ಕೊಟ್ಟಿದ್ದು ತಪ್ಪು. ಮತ್ತೆ ಇಂತಹ ಅವಕಾಶ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ಉಗ್ರಗಾಮಿಗಳನ್ನು ಮಟ್ಟ ಹಾಕಬೇಕು ಹೊಡೆದು ಸಾಯಿಸಬೇಕು. ನಾವು ಬುದ್ಧಿ ಕಲಿಸದಿದ್ದರೆ ಹೊಸ ಉಗ್ರರನ್ನು ಹುಟ್ಟು ಹಾಕಿ ಅವರು ಗಲಾಟೆ ಮಾಡಿಸುತ್ತಾರೆ. ಆದ್ದರಿಂದ ಅವರ ಬೆನ್ನು ಮೂಳೆ ಮುರಿದು ಹಾಕಬೇಕಿತ್ತು ಎಂದರು.
ಆಪರೇಷನ್ ಸಿಂದೂರ ಕದನ ವಿರಾಮ ಪ್ರಸ್ತಾಪಿಸಿದ ಸಚಿವರು, ನೆಹರು ಕಾಲದಿಂದ ಹಿಡಿದು ಇಂದಿರಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರಧಾನಿ ಇದ್ದಾಗಲೂ ಭಾರತ-ಪಾಕ್ ಯುದ್ಧ ನಡೆದಿದೆ. ನನ್ನ ಅಭಿಪ್ರಾಯದಲ್ಲಿ ಪಾಕಿಸ್ತಾನ ಪದೆ ಪದೆ ಚೇಷ್ಟೆ ಮಾಡುತ್ತಲೇ ಇರುತ್ತದೆ. ಭಾರತದ ಮೇಲೆ ನಡೆದ ಬಹುತೇಕ ಎಲ್ಲ ಭಯೋತ್ಪಾದಕರಿಗೆ ಪಾಕಿಸ್ತಾನದ ರಾಜಕಾರಣಿಗಳು, ಸೇನೆ ಬೆಂಬಲ ಕೊಟ್ಟಿದೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ವಿಚಾರದಲ್ಲಿ ಎಲ್ಲರೂ ಕೇಂದ್ರಕ್ಕೆ ಬೆಂಬಲ ಕೊಟ್ಟಿದ್ದರು. ಟ್ರಂಪ್ ಅನವಶ್ಯಕವಾಗಿ ಮಧ್ಯ ಪ್ರವೇಶ ಮಾಡಿದ್ದರಿಂದ ನಮಗೆ ಮುಜುಗರವಾಗಿದೆ ಎಂದರು.