ಪ್ರಶಾಂತ್ ನಾತು
ಏಷ್ಯಾನೆಟ್ ಸುವರ್ಣನ್ಯೂಸ್
ಬೇಕೋ- ಬೇಡವೋ, ಕಷ್ಟವೋ- ನಷ್ಟವೋ, ಟೀಕೆಯೋ- ಟಿಪ್ಪಣಿಯೋ, ವರವೋ- ಶಾಪವೋ ಭಾರತದ ರಾಜಕಾರಣ ಮತ್ತು ರಾಜಕಾರಣಿಗಳಿಗೆ ಬೇಕಾಬಿಟ್ಟಿ ಗ್ಯಾರಂಟಿ ಘೋಷಣೆ ಮಾಡುವುದು ಮಂತ್ರ ದಂಡವಾಗಿ ಕಾಣತೊಡಗಿದೆ.
ಬರೀ ಜಾತಿ ಗಣಿತ, ಜಾತಿ ಅಸ್ಮಿತೆ, ಜಾತಿ ಸಂಘರ್ಷದ ಮೇಲೆ ರಾಜಕಾರಣ ನಡೆಯುತ್ತಿದ್ದ ದೇಶದ ಅತ್ಯಂತ ಹಿಂದುಳಿದ ರಾಜ್ಯ ಬಿಹಾರದಲ್ಲೂ ಈಗ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ನಡುವೆ ಯಾರು ಹೆಚ್ಚು ಗ್ಯಾರಂಟಿ ಘೋಷಣೆ ಮಾಡುತ್ತಾರೆ ಎನ್ನುವ ಪೈಪೋಟಿ ಶುರುವಾಗಿದೆ. ಚುನಾವಣೆಗೆ ಮೂರು ತಿಂಗಳ ಮುಂಚೆ ತೇಜಸ್ವಿ ಯಾದವ್ ‘ನಾನು ಅಧಿಕಾರಕ್ಕೆ ಬಂದರೆ 100 ಯೂನಿಟ್ ವಿದ್ಯುತ್ ಫ್ರೀ’ ಎಂದ ಒಂದೇ ವಾರಕ್ಕೆ ನಿತೀಶ್ ಮತ್ತು ಬಿಜೆಪಿ ಜಂಟಿ ಸರ್ಕಾರ 1.67 ಕೋಟಿ ಕುಟುಂಬಗಳಿಗೆ 125 ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಿ, ಜುಲೈ ಬಿಲ್‌ನಿಂದ ಜಾರಿ ಎಂದು ಘೋಷಣೆ ಮಾಡಿದೆ.
ಅದಾದ ಒಂದೇ ವಾರದಲ್ಲಿ ಜುಲೈ ತಿಂಗಳಿಂದ ಜಾರಿಗೆ ಬರುವಂತೆ ವೃದ್ಧರು, ಅಂಗವಿಕಲರು, ವಿಧವೆಯರು ಸೇರಿದಂತೆ 1 ಕೋಟಿ 9 ಲಕ್ಷ ಜನರ ಪಿಂಚಣಿಯನ್ನು 400 ರು.ನಿಂದ 1100 ರು.ಗೆ ಏರಿಸುವ ಘೋಷಣೆ ಮಾಡಿದೆ. ಘೋಷಣೆಗಳು ಇಷ್ಟಕ್ಕೇ ನಿಂತಿಲ್ಲ. ‘ಮೇರಿ ಬೆಹನಾ’ ಹೆಸರಿನ, ಕರ್ನಾಟಕದ ‘ಗೃಹಲಕ್ಷ್ಮಿ’ ಮಾದರಿಯ, ತಿಂಗಳಿಗೆ 2500 ರು. ಕೊಡುವ ಯೋಜನೆಯು ಆಗಸ್ಟ್ 15 ರ ಆಸುಪಾಸಿನಲ್ಲಿ ಘೋಷಣೆ ಆಗುವುದು ಬಾಕಿಯಿದೆ. ಇದನ್ನು ಗಮನಿಸಿದರೆ ಯಾರು ಎಷ್ಟು ಘೋಷಣೆ ಮಾಡುತ್ತಾರೆ, ಯಾರು ಬೊಕ್ಕಸವನ್ನು ಮುಕ್ತ ಮುಕ್ತ ಮುಕ್ತ ಮಾಡುತ್ತಾರೆ ಎಂಬುದು ನಿರ್ಣಾಯಕ ಎನ್ನುವ ರೀತಿ ಆಗುವಂತೆ ಕಾಣುತ್ತಿದೆ. ಇದಕ್ಕೆ ಕಾರಣ ಯಾರು? ರಾಜಕಾರಣಿಗಳೋ ಅಥವಾ ಜನರೋ ಎಂಬ ಪ್ರಶ್ನೆಗೆ ಉತ್ತರ ಬರೀ ಅಕಾಡೆಮಿಕ್ ಚರ್ಚೆ ಅಷ್ಟೆ.
ಪೈಪೋಟಿ ಪೊಲಿಟಿಕ್ಸ್‌ಗೆ ಹಣ ಎಲ್ಲಿಂದ?
ಅತೀ ಹೆಚ್ಚು ಕೈಗಾರಿಕೆಗಳು ಇರುವ, ಅತೀ ಹೆಚ್ಚು ತೆರಿಗೆ ಸಂಗ್ರಹವಾಗುವ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಂಥ ರಾಜ್ಯಗಳೇ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಆರ್ಥಿಕವಾಗಿ ಒದ್ದಾಡುತ್ತಿರುವಾಗ ತೆರಿಗೆ ಸಂಗ್ರಹದ ಪ್ರಮಾಣವೇ ಅತ್ಯಂತ ಕಡಿಮೆ ಇರುವ ಬಿಹಾರದಂಥ ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟು ಸರ್ಕಾರಗಳು ಹೇಗೆ ಆರ್ಥಿಕತೆಯನ್ನು ಸಂಭಾಳಿಸುತ್ತವೆ ಅನ್ನೋದು ಬರೀ ಆ ರಾಜ್ಯದ ಪ್ರಶ್ನೆಯಲ್ಲ ದೇಶದ ಪ್ರಶ್ನೆಯು ಕೂಡ ಹೌದು. ಏಕೆಂದರೆ ಪಶ್ಚಿಮ ಮತ್ತು ದಕ್ಷಿಣ ಭಾರತದ ರಾಜ್ಯಗಳು ಹೆಚ್ಚು ತೆರಿಗೆ ಸಂಗ್ರಹವನ್ನು ಮಾಡಿಯು ಕೂಡ ವಾಪಸ್ ಪಡೆಯುವಾಗ ಕಡಿಮೆ ಪಾಲನ್ನು ಪಡೆಯುತ್ತವೆ.
ಅದೇ ಉತ್ತರ ಪ್ರದೇಶ ಮತ್ತು ಬಿಹಾರದಂಥ ರಾಜ್ಯಗಳಿಗೆ ಜನಸಂಖ್ಯೆ ಆಧಾರಿತ ತೆರಿಗೆ ಹಂಚಿಕೆ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ಜಾಸ್ತಿ ಪಾಲು ಹೋಗುತ್ತದೆ ಎನ್ನುವುದು ವಾಸ್ತವ. ದೇಶದ ಹಿಂದುಳಿದ ರಾಜ್ಯಗಳು ಆರ್ಥಿಕವಾಗಿ ಮುಖ್ಯ ವಾಹಿನಿಗೆ ಬರಬೇಕು, ಮೂಲಭೂತ ಸೌಕರ್ಯ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ಹೆಚ್ಚು ಹಣ ಬೇಕು ಆ ಕಾರಣದಿಂದ ಕೇಂದ್ರ ಸರ್ಕಾರ ಈ ರಾಜ್ಯಗಳಿಗೆ ಸ್ವಲ್ಪ ಧಾರಾಳಿತನ ತೋರಬೇಕು ಎನ್ನುವುದನ್ನು ಮುಂದುವರಿದ ರಾಜ್ಯಗಳ ಸರ್ಕಾರಗಳು ಮತ್ತು ಜನರು ಅರ್ಥ ಮಾಡಿಕೊಳ್ಳಬೇಕು ಅನ್ನುವ ವಾದದಲ್ಲಿ ಅರ್ಥವಿದೆ ಎಂದೇ ಒಪ್ಪಿಕೊಳ್ಳೋಣ. ಆದರೆ ನಮ್ಮ ತೆರಿಗೆ ದುಡ್ಡು ಬಿಹಾರದ ರಾಜಕೀಯ ಪಾರ್ಟಿಗಳ ಪೈಪೋಟಿ ರಾಜಕಾರಣಕ್ಕೆ ನೀರಿನಂತೆ ಹರಿದು ಹಂಚಬೇಕಾ ಅನ್ನುವ ಪ್ರಶ್ನೆ ಉದ್ಭವವಾಗುವುದು ಸ್ವಾಭಾವಿಕ.
ಬಿಹಾರಕ್ಕೆ ತೆರಿಗೆ ಪಾಲು ಹೇಗೆ? ಜನಸಂಖ್ಯೆ ಆಧಾರದ ಮೇಲೆಯೇ ತೆರಿಗೆ ಪಾಲು ಹಂಚಿಕೆ ಆಗುವುದರಿಂದ ಸ್ವಾತಂತ್ರ್ಯ ಬಂದಾಗಿನಿಂದಲೂ ದಕ್ಷಿಣದ ರಾಜ್ಯಗಳು ಕೊಟ್ಟಿದ್ದು ಹೆಚ್ಚು, ತೆಗೆದುಕೊಂಡಿದ್ದು ಕಡಿಮೆಯೇ. 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದ ಮೇಲಿನ ಹಂಚಿಕೆ ನೋಡಿದರೆ ಪ್ರತಿ ನೂರು ರುಪಾಯಿಗೆ ಕರ್ನಾಟಕಕ್ಕೆ 13.9 ರು. ಬಂದರೆ ತಮಿಳುನಾಡಿಗೆ 29.7 ರು., ಆಂಧ್ರಪ್ರದೇಶಕ್ಕೆ 46 ರು., ಕೇರಳಕ್ಕೆ 63.4 ರು., ತೆಲಂಗಾಣಕ್ಕೆ 49.8 ರು. ವಾಪಸ್ ಬರುತ್ತದೆ. ಆದರೆ ಅದೇ ಜನ ಸಂಖ್ಯೆ ಜಾಸ್ತಿ ಇರುವ ಉತ್ತರ ಪ್ರದೇಶಕ್ಕೆ 333.2 ರು., ಮಧ್ಯಪ್ರದೇಶಕ್ಕೆ 279.1 ರು. ಹೋದರೆ ‘ಬಿಮಾರು’ ರಾಜ್ಯವಾದ
ಬಿಹಾರಕ್ಕೆ ಸಿಗೋದು ಬರೋಬ್ಬರಿ 922.5 ರು.ನಷ್ಟು ಹಣ! 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ಉತ್ತರ ಪ್ರದೇಶಕ್ಕೆ31,962 ಕೋಟಿ ತೆರಿಗೆ ಪಾಲು ಹಣ ಬಂದರೆ, ಕರ್ನಾಟಕಕ್ಕೆ 6,498 ಕೋಟಿ ದೊರೆಯುತ್ತದೆ. ಆದರೆ ಬಿಹಾರಕ್ಕೆ ಸಿಗೋದು 17,921 ಕೋಟಿ ರುಪಾಯಿ ಹಣ. ಹೀಗಿರುವಾಗ ಸಹಜವಾಗಿ ನಮ್ಮ ರಾಜ್ಯಗಳಿಂದ ತೆರಿಗೆ ಸಂಗ್ರಹಿಸಿ ತೆಗೆದುಕೊಳ್ಳುವ ಹಣ ಬಿಹಾರದಂಥ ರಾಜ್ಯದ ರಾಜಕೀಯ ಪಾರ್ಟಿಗಳ ಹುಚ್ಚಾಟಕ್ಕೆ ಬಳಕೆ ಆಗಬೇಕಾ ಅನ್ನುವ ಪ್ರಶ್ನೆ ಮನಸ್ಸಿನಲ್ಲಿ ಏಳೋದು ಸರ್ವೇ ಸಾಮಾನ್ಯ.
ಬಿಹಾರ ಅಭಿವೃದ್ಧಿ ಆಗಬೇಕು, ಅಲ್ಲಿನ ಜನರಿಗೂ ಅವಕಾಶಗಳು ಸಿಗಬೇಕು, ಉದ್ಯೋಗ ಸೃಷ್ಟಿ ಆಗಬೇಕು, ಅಲ್ಲಿನ ಬಡವರ ಸ್ಥಿತಿಗತಿ ಸುಧಾರಣೆ ಆಗಬೇಕು, ಒಂದು ದೇಶವಾಗಿ ಅದು ನಮ್ಮೆಲ್ಲರ ಕರ್ತವ್ಯ ಎನ್ನುವುದು ನಿಸ್ಸಂದೇಹವಾಗಿ ಹೌದು. ಆದರೆ ಪ್ರಶ್ನೆ ಇರೋದು ಅಲ್ಲಿನ ಉಳ್ಳವರ ವೋಟಿನ ಆಸೆಗೋಸ್ಕರ ಇಲ್ಲಿನ ತೆರಿಗೆದಾರನ ಹಣ ಬಳಕೆ ಆಗಬೇಕಾ? ಅನ್ನುವುದು. ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಅನ್ನುವ ಗಾದೆ ಬಿಹಾರದ ಎಲ್ಲಾ ರಾಜಕೀಯ ಪಾರ್ಟಿಗಳಿಗೆ ಅನ್ವರ್ಥಕ.