;Resize=(412,232))
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದಲ್ಲಿ ಭಾರತವನ್ನು ಬೇಡುವ ಸ್ಥಿತಿಯಿಂದ ಕೊಡುವ ಸ್ಥಿತಿಗೆ ಬದಲಿಸಿದ್ದಾರೆ. ಜಗತ್ತಿನ ಆರ್ಥಿಕತೆ ಸಂಕಷ್ಟದಲ್ಲಿದ್ದರೆ ಭಾರತವನ್ನು ಆರ್ಥಿಕತೆಯಲ್ಲಿ 14ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಸ್ವಚ್ಛ, ಸುಂದರ ಹಾಗೂ ಸುರಕ್ಷಿತ ದೇಶವನ್ನಾಗಿ ಮಾಡಿದ್ದಾರೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಕೊಂಡಾಡಿದ್ದಾರೆ.
ಭಾನುವಾರ ಆರ್ಟ್ ಆಫ್ ಲಿವಿಂಗ್‌ನ ನೂತನ ಧ್ಯಾನ ಮಂದಿರ ಉದ್ಘಾಟನೆ ಹಾಗೂ ಆರ್ಟ್ ಆಫ್ ಲಿವಿಂಗ್‌ನ 45ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದರು.
ಮೋದಿ ಅವರು ಭಾರತಮಾತೆಯ ಶ್ರೇಷ್ಠ, ಅಮೂಲ್ಯ ಪುತ್ರ. ದೇಶದ ನಿಜ ಯೋಗಿ. ಗಲೀಜು, ಬಡತನ ಮತ್ತು ಅವ್ಯವಸ್ಥೆಯಿಂದ ಕೂಡಿದ್ದ ದೇಶಕ್ಕೆ ಮೋದಿ ಅವರು ‘ಸ್ವಚ್ಛ ಭಾರತ’ ಅಭಿಯಾನದ ಮೂಲಕ ಹೊಸ ರೂಪ ನೀಡಿದ್ದಾರೆ. ಈ ಹಿಂದೆ ದೇಶದಲ್ಲಿದ್ದ ಭಯೋತ್ಪಾದನೆಯ ಆತಂಕ ದೂರ ಮಾಡಿ ದೇಶವನ್ನು ಸುರಕ್ಷಿತವನ್ನಾಗಿ ಮಾಡಿದ್ದಾರೆ. ಹಿಂಸೆಯಿಂದ ಮುಕ್ತ ಮಾಡಿ ಹೊಸ ಭರವಸೆ ನೀಡಿದ್ದು, ದೇಶವನ್ನು ಸ್ವಚ್ಛ, ಸುಂದರ ಹಾಗೂ ಸುರಕ್ಷಿತ ದೇಶವನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಟೆಂಟ್‌ನಲ್ಲಿದ್ದ ರಾಮನಿಗೆ ಭವ್ಯ ಮಂದಿರ:
ಹಲವು ವರ್ಷಗಳಿಂದ ಟೆಂಟ್‌ನಲ್ಲಿದ್ದ ಅಯೋಧ್ಯ ರಾಮನಿಗೆ ಭವ್ಯ ಮಂದಿರ ನಿರ್ಮಾಣ ಮಾಡಿದ್ದೀರಿ. ರಾಮಲಲ್ಲಾನ ಮೂರ್ತಿ ಕೆತ್ತನೆಗೆ ಬಳಸಿದ ಶಿಲೆ ಹಾಗೂ ಅದನ್ನು ಕೆತ್ತಿದ ಶಿಲ್ಪಿ (ಅರುಣ್ ಯೋಗಿರಾಜ್) ಇಬ್ಬರೂ ಕರ್ನಾಟಕದವರು ಎಂಬುದು ಹೆಮ್ಮೆಯ ವಿಷಯ. ಹನುಮನ ನಾಡಿನಿಂದ ಶಿಲೆ ಹೋಗಿದ್ದು ನಮ್ಮೆಲ್ಲೆರಿಗೂ ಸಂತಸದ ವಿಚಾರ ಎಂದು ಹೇಳಿದರು.
ಯೋಗವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದೀರಿ. ಹರ್ ಘರ್ ಧ್ಯಾನ ಅಭಿಯಾನ ಮಾಡಿದ್ದೀರಿ. ವಿಶ್ವದಲ್ಲಿ ಭಾರತ ಬದಲಾಗುವುದಿಲ್ಲ ಎಂಬ ಮಾತು ಆಡುತ್ತಿದ್ದ ಜನರ ಮಾತು ಸುಳ್ಳಾಗಿಸಿದ್ದೀರಿ. ಪರಂಪರೆ, ಆಧ್ಯಾತ್ಮಕ್ಕೆ ಆದ್ಯತೆ ನೀಡಿರುವ ನೀವು ಆಯುರ್ವೇದಕ್ಕಾಗಿ ಆಯುಷ್ ಇಲಾಖೆಯನ್ನೇ ಸ್ಥಾಪಿಸಿದ್ದೀರಿ ಎಂದು ಕೊಂಡಾಡಿದರು.
ಮೂಲಸೌಕರ್ಯ, ತಂತ್ರಜ್ಞಾನ, ಕೈಗಾರಿಕೆ ಸೇರಿ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ದೊರೆತಿದೆ. ಮಕ್ಕಳ ಶಿಕ್ಷಣ ವಿಚಾರದಲ್ಲೂ ತಂದೆ-ತಾಯಿ ತಲೆ ಕೆಡಿಸಿಕೊಳ್ಳುತ್ತಾರೋ ಇಲ್ಲವೋ? ಆದರೆ ನೀವು ಗಮನ ನೀಡಿ ಪರೀಕ್ಷಾ ಪೆ ಚರ್ಚಾ ಮಾಡುತ್ತಿದ್ದೀರಿ. ನಿಮ್ಮ ನಾಯಕತ್ವದಲ್ಲಿ ಇಂದು ಜನತೆ ಸುರಕ್ಷಿತ ಭಾವನೆಯಲ್ಲಿದ್ದಾರೆ ಎಂದು ಹೇಳಿದರು.
ಕಾಶಿಯ ಅಭಿವೃದ್ಧಿ ಅದ್ಭುತವಾಗಿದೆ. ಹಿಂದೆ ಕರ್ನಾಟಕದಲ್ಲಿ ಒಂದು ಸಂಪ್ರದಾಯವಿತ್ತು. ವರ ಕಾಶಿಯಾತ್ರೆಗೆ ಹೊರಟಂತೆ ಮಾಡಿದರೆ ಮಾವ, ಅತ್ತೆ ಕರೆದು ನಮ್ಮ ಮಗಳನ್ನು ಮದುವೆ ಮಾಡಿಸುತ್ತೇವೆ ಕಾಶಿಗೆ ಹೋಗಬೇಡ ಎನ್ನುತ್ತಿದ್ದರು. ಈಗ ಕಾಲ ಬದಲಾಗಿದೆ. ಅಲ್ಲಿನ ಅಭಿವೃದ್ಧಿ ನೋಡಲು ಅತ್ತೆ ಮಾವ, ನವ ವಧು-ವರರೂ ಕಾಶಿಗೆ ಹೋಗುವಂತಾಗಿದೆ ಎಂದರು.
ಕೊನೆಯದಾಗಿ ನಮ್ಮವರಿಗೆ ನಾವು ಧನ್ಯವಾದಗಳನ್ನು ಹೇಳುವುದಿಲ್ಲ. ಏಕೆಂದರೆ ಧನ್ಯವಾದ ಹೇಳಿದರೆ ಅವರು ಪರಕೀಯರಾಗುತ್ತಾರೆ. ಮೋದಿ ಅವರು ನಮ್ಮವರು ಎಂದು ರವಿಶಂಕರ್ ಗುರೂಜಿ ಹೇಳಿದರು.
ತಮ್ಮ ಆಶೀರ್ವಚನದಲ್ಲಿ ರವಿಶಂಕರ್ ಗುರೂಜಿ ಅವರು, ಮನುಷ್ಯನು ಬಾಹ್ಯ ಸುಖಗಳಿಗಿಂತ ಒಳಗಿನ ಶಾಂತಿ ಕಂಡುಕೊಳ್ಳಬೇಕು. ಧ್ಯಾನ ಎಂಬುದು ಕೇವಲ ಕಣ್ಣು ಮುಚ್ಚಿ ಕೂರುವುದಲ್ಲ, ಅದು ನಮ್ಮ ಆತ್ಮದೊಂದಿಗೆ ನಾವು ಅನುಸಂಧಾನ ಮಾಡುವ ಪ್ರಕ್ರಿಯೆ. ಜಗತ್ತು ಇಂದು ಯುದ್ಧ ಮತ್ತು ಆತಂಕಗಳ ಸುಳಿಯಲ್ಲಿದೆ, ಇಂತಹ ಸಮಯದಲ್ಲಿ ಪ್ರೀತಿ ಮತ್ತು ಕರುಣೆ ಮಾತ್ರ ನಮ್ಮನ್ನು ರಕ್ಷಿಸಬಲ್ಲವು ಎಂದರು.
ಆರ್ಟ್ ಆಫ್ ಲಿವಿಂಗ್ ಟ್ರಸ್ಟ್‌ನ ಮಧು ರಾವ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶಾಲು ಹಾಗೂ ಧ್ಯಾನಮಂದಿರದ ಭಾವಚಿತ್ರ ನೀಡಿ ಸನ್ಮಾನಿಸಿದರು. ಟ್ರಸ್ಟಿ ಅಜಯ್ ಬಗ್ಗಾ ಅವರು ಸ್ವಾಗತ ಕೋರಿದರು.
ಆರ್ಟ್ ಆಫ್ ಲಿವಿಂಗ್‌ನಲ್ಲಿ ಕಮಲದ ಆಕಾರದ ವಿಶೇಷ ವಿನ್ಯಾಸದೊಂದಿಗೆ ಬೃಹತ್ ಧ್ಯಾನ ಮಂದಿರ ತಲೆ ಎತ್ತಿದ್ದು, ಭಾನುವಾರ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದೆ.
ಮೂಲಗಳ ಪ್ರಕಾರ ಧ್ಯಾನ ಮಂದಿರದಲ್ಲಿ 20,000 ಆಸನ ವ್ಯವಸ್ಥೆ ಇರಲಿದೆ. 1.06 ಲಕ್ಷ ಚದರಡಿ ವಿಸ್ತೀರ್ಣದ ಧ್ಯಾನ ಮಂದಿರದ ಮೇಲೆ 65,000 ಚದರಡಿ ವಿಸ್ತೀರ್ಣದ ಉದ್ಯಾನ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಇದೆ.