ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಲಕ್ಕಪ್ಪನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಲಕ್ಕಪ್ಪನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಲಕ್ಕಪ್ಪನಹಳ್ಳಿ ಡೇರಿ ಕಾರ್ಯದರ್ಶಿ ಹಾಗೂ ಬಮೂಲ್ ನಿರ್ದೇಶಕ ಭವಾನಿಶಂಕರ್ ಬೈರೇಗೌಡರ ವಿರುದ್ಧ ರೈತರು, ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಡೇರಿ ಕಾರ್ಯದರ್ಶಿ ನಾಗಮ್ಮ ಏಕಪಕ್ಷೀಯ ನಿರ್ಧಾರಗಳಿಂದ 21 ಲಕ್ಷಕ್ಕೂ ಹೆಚ್ಚು ಅವ್ಯವಹಾರ ನಡೆದಿದೆ. ಕಾರ್ಯದರ್ಶಿಯನ್ನು ವಜಾಗೊಳಿಸುವವರೆಗೂ ಡೇರಿಗೆ ಹಾಲು ಹಾಕುವುದಿಲ್ಲ, ಡೇರಿ ಕಾರ್ಯದರ್ಶಿಗೆ ಸಹಕರಿಸುತ್ತಿರುವ ಬಮೂಲ್ ನಿರ್ದೇಶಕ ಬೈರೇಗೌಡರೇ ರೈತ ವಿರೋಧಿ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದರು.

ಡೇರಿ ಅಧ್ಯಕ್ಷೆ ಸಿದ್ದಗಂಗಮ್ಮ ಮಾತನಾಡಿ, ಗ್ರಾಮದಲ್ಲಿ ಮಹಿಲಾ ಡೇರಿಯೇ ಬೇಡ, ಕಾರ್ಯದರ್ಶಿ ಹಾಲಿಗೆ ನೀರು ಬೆರೆಸುತ್ತಿರುವುದು ಸಾಕ್ಷಿ ಸಮೇತ ನೋಡಿದ್ದೇವೆ. ಕಳೆದ ಐದಾರು ವರ್ಷಗಳ ಹಿಂದೆಯೇ ಅವ್ಯವಹಾರ ನಡೆದಿತ್ತು. ಆಗ ತಪ್ಪನ್ನು ತಿದ್ದುಕೊಳ್ಳುತ್ತೇನೆಂದು ಹೇಳಿ, ಮತ್ತೆ ಅವ್ಯವಹಾರ ಮಾಡುತ್ತಿದ್ದಾರೆ. ನಾವು ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಆದ್ದರಿಂದ ಮಹಿಳಾ ಡೇರಿಯನ್ನು ಮುಚ್ಚಿ ಸಾಮಾನ್ಯ ಡೇರಿಯನ್ನೇ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

ವಕೀಲ ನಾಗೇಂದ್ರ ಮಾತನಾಡಿ, ಡೇರಿ ಕಾರ್ಯದರ್ಶಿ ನಾಗಮ್ಮನವರು ಡೇರಿಗೆ 1.5 ಲೀಟರ್ ಹಾಲು ಹಾಕಿದರೆ ಪುಸ್ತಕದಲ್ಲಿ 6 ಲೀಟರ್ ಎಂದು ಬರೆಯುತ್ತಾರೆ. ಸಾಮಾನ್ಯ ಸಭೆಗಳಿಗೆ ಇಬ್ಬರೇ ಸೇರಿದರೂ 6000 ಖರ್ಚು ಬರೆಯುತ್ತಾರೆ. ಕೇಳಿದರೆ ನನ್ನಿಷ್ಟವೆನ್ನುತ್ತಾರೆ. ಅಲ್ಲದೆ, ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡರು ರೈತರ ಪರ ಎಂದು ಭಾಷಣ ಬಿಗಿಯುವರು. ಡೇರಿಯಲ್ಲಿ ಅವ್ಯವಹಾರ ಮಾಡುವರು ಎಂದರು.

ಇನ್ನೂ ಪ್ರತಿಯೊಂದು ಡೇರಿಯಲ್ಲಿ ಕಾರ್ಯದರ್ಶಿ, ಹಾಲು ಪರೀಕ್ಷಕಿ, ಸ್ವಚ್ಛಗಾರರು ಪ್ರತ್ಯೇಕವಾಗಿ ಇರುತ್ತಾರೆ. ಆದರೆ ಈ ಡೇರಿಯಲ್ಲಿ ಡೇರಿ ಕಾರ್ಯದರ್ಶಿಯೇ ಎಲ್ಲರ ಕೆಲಸ ಮಾಡಿ ಒಬ್ಬರೇ ಸಂಬಳ ಪಡೆಯುವುದಲ್ಲದೆ ಹಾಲನ್ನು ಬೇರೆಡೆಗೆ ಸಾಗಿಸುವ ವಾಹನ, ಕಟ್ಟಡದ ಬಾಡಿಗೆ ಸೇರಿದಂತೆ ಎಲ್ಲ ಕೆಲಸ ನಿರ್ವಹಿಸುತ್ತಿದ್ದಾರೆ. ಡೇರಿ ಮೀಟಿಂಗ್ ಆಗಲಿ, ಲೆಟರ್ ಪ್ಯಾಡ್ ಗಳಿಗೆ ಅಧ್ಯಕ್ಷೆ ಸೇರಿದಂತೆ ನಿರ್ದೇಶಕಿಯರ ನಕಲಿ ಸಹಿ ಮಾಡಿದ್ದಾರೆಂದು ನಿರ್ದೇಶಕರು ಹಾಗೂ ರೈತರು ಗಂಭೀರ ಆರೋಪ ಮಾಡಿದರು.

ಡೇರಿ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ನಮ್ಮ ಡೇರಿಯಲ್ಲಿ ರೈತರಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ, ಲಕ್ಷಾಂತರ ರು.ಗಳ ಅವ್ಯವಹಾರವಾಗಿದೆ ಎಂದು ನೆಲಮಂಗಲ ಬಮೂಲ್ ಅಧಿಕಾರಿಗಳಿಗೆ ಹಾಗೂ ದೊಡ್ಡಬಳ್ಳಾಪುರದ ಸಹಕಾರ ಸಂಘಕ್ಕೆ ದೂರು ನೀಡಿದರೂ ಯಾವೊಬ್ಬ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಗ್ರಾಪಂ ಮಾಜಿ ಅಧ್ಯಕ್ಷ ನರಸಿಹಮೂರ್ತಿ ಮಾತನಾಡಿ, ಡೇರಿ ಅವ್ಯವಹಾರವನ್ನು ಶಾಸಕ ಎನಿವಾಸ್ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಗಮನಕ್ಕೆ ತಂದು ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಡೇರಿ ನಿರ್ದೇಶಕಿಯರು, ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪೋಟೋ 1 :

ತ್ಯಾಮಗೊಂಡ್ಲು ಹೋಬಳಿಯ ಲಕ್ಕಪ್ಪನಹಳ್ಳಿ ಡೇರಿಯಲ್ಲಿ ಅವ್ಯವಹಾರ ಖಂಡಿಸಿ ರೈತರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.