ಕರ್ನಾಟಕ ಬಜೆಟ್ 2025 : ಜಾನುವಾರುಗಳ ಆಕಸ್ಮಿಕ ಸಾವಿಗೆ ‘ಅನುಗ್ರಹ’ದಡಿ ಹೆಚ್ಚು ಪರಿಹಾರ

Published : Mar 08, 2025, 10:23 AM IST
cow science university

ಸಾರಾಂಶ

 ದೇಶೀಯ ತಳಿಗಳ ರಕ್ಷಣೆಗೆ 2 ಕೋಟಿ ರು. ಅನುದಾನ, ಜಾನುವಾರುಗಳ ಆಕಸ್ಮಿಕ ಸಾವಿಗೆ ನೀಡುತ್ತಿದ್ದ ಪರಿಹಾರ ಮೊತ್ತ ಹೆಚ್ಚಳ, 50 ನೂತನ ಪಶು ಚಿಕಿತ್ಸಾಲಯ ಸ್ಥಾಪನೆ, ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ಮತ್ತು ಹೈಟೆಕ್‌ ಮತ್ಸ್ಯದರ್ಶಿನಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ   ಘೋಷಿಸಿದ್ದಾರೆ.

ಬೆಂಗಳೂರು :  ರಾಜ್ಯದ ದೇಶೀಯ ತಳಿಗಳ ರಕ್ಷಣೆಗೆ 2 ಕೋಟಿ ರು. ಅನುದಾನ, ಜಾನುವಾರುಗಳ ಆಕಸ್ಮಿಕ ಸಾವಿಗೆ ನೀಡುತ್ತಿದ್ದ ಪರಿಹಾರ ಮೊತ್ತ ಹೆಚ್ಚಳ, 50 ನೂತನ ಪಶು ಚಿಕಿತ್ಸಾಲಯ ಸ್ಥಾಪನೆ, ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ಮತ್ತು ಹೈಟೆಕ್‌ ಮತ್ಸ್ಯದರ್ಶಿನಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಪಶು ಸಂಗೋಪನೆ ಮತ್ತು ಮೀನುಗಾರಿಕೆಗೆ ಬಜೆಟ್‌ನಲ್ಲಿ ಒಟ್ಟಾರೆ 3977 ಕೋಟಿ ರು. ಅನುದಾನ ನೀಡಲಾಗಿದೆ. ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ನೀಡುತ್ತಿದ್ದ ‘ಅನುಗ್ರಹ’ ಯೋಜನೆಯ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಹಸು, ಎಮ್ಮೆ, ಎತ್ತುಗಳಿಗೆ ನೀಡುತ್ತಿದ್ದ ಪರಿಹಾರವನ್ನು ಕ್ರಮವಾಗಿ 10 ರಿಂದ 15 ಸಾವಿರ ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಕುರಿ, ಮೇಕೆಗಳ ಪರಿಹಾರ ಮೊತ್ತವನ್ನು 5 ರಿಂದ 7,500 ರು. ಹಾಗೂ 3 ರಿಂದ 6 ತಿಂಗಳ ಕುರಿ, ಮೇಕೆ ಮರಿಗಳಿಗೆ ನೀಡುತ್ತಿದ್ದ ಪರಿಹಾರವನ್ನು 3,500 ರಿಂದ 5 ಸಾವಿರಕ್ಕೆ ಏರಿಕೆ ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ 50 ನೂತನ ಪಶು ಚಿಕಿತ್ಸಾಲಯ ಮತ್ತು ನಬಾರ್ಡ್‌ ಸಹಯೋಗದೊಂದಿಗೆ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಮೃತ್ ಮಹಲ್ ಕಾವಲುಗಳ ಭೂ ಒತ್ತುವರಿ ತಡೆ ಹಾಗೂ ರಾಸುಗಳಿಗೆ ಮೇವು ಲಭ್ಯವಾಗಲು ಅರಣ್ಯ ಇಲಾಖೆ, ನರೇಗಾ ಸಹಯೋಗದೊಂದಿಗೆ ಮೇವಿನ ಮರಗಳ ನೆಡುತೋಪು ಅಭಿವೃದ್ಧಿಗೊಳಿಸಲು ಸರ್ಕಾರ ಮುಂದಾಗಿದೆ.

ರಾಜ್ಯದ ದೇಶಿ ದನದ ತಳಿಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್ ಹಾಗೂ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಎರಡು ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಆಧುನಿಕ ಕುರಿ ಸಾಕಾಣಿಕೆ ಪದ್ಧತಿ ಮತ್ತು ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತು ವಲಸೆ ಕುರಿಗಾರರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ.

ಮೀನುಗಾರಿಕಾ ನೀತಿ

ಸುಸ್ಥಿರ ಮೀನುಗಾರಿಕೆ, ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿ ರೂಪಿಸುವುದು, ಮಂಗಳೂರಿನಲ್ಲಿರುವ ಮೀನುಗಾರಿಕೆ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಳಿಸುವುದು. ಕರಾವಳಿ ಜಿಲ್ಲೆಗಳ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್ ಸಹಯೋಗದೊಂದಿಗೆ 30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು, ಪರಿಶಿಷ್ಟ ಜಾತಿ, ಪಂಗಡದ ಆಯ್ದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50 ಅಥವಾ ಗರಿಷ್ಠ 3 ಲಕ್ಷ ರು. ಆರ್ಥಿಕ ನೆರವು ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ರಾಜ್ಯದಲ್ಲಿ ನೋಂದಣಿಯಾಗಿ 15 ವರ್ಷ ಮೀರಿದ ಮೋಟರೀಕೃತ ದೋಣಿಗಳಿಗೆ ಹೊಸ ಎಂಜಿನ್ ಖರೀದಿಸಲು ಶೇ.50 ರಷ್ಟು ಅಥವಾ ಒಂದು ಲಕ್ಷ ರು. ಮಿತಿಗೊಳಪಟ್ಟು ಸಹಾಯಧನ ನೀಡಲಾಗುವುದು. ಮೈಸೂರಿನಲ್ಲಿ ಹೈಟೆಕ್ ಮತ್ಸ್ಯದರ್ಶಿನಿ ಪ್ರಾರಂಭಿಸಲಾಗುವುದು. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟಣೆ ನಿರ್ವಹಿಸಲು ‘ಮಲ್ಟಿ-ಲೆವೆಲ್ ಪಾರ್ಕಿಂಗ್’ ನಿರ್ಮಿಸಲಾಗುವುದು. ಆಳ ಸಮುದ್ರ ಮೀನುಗಾರಿಕೆ ಪ್ರೋತ್ಸಾಹಿಸಲು ಪ್ರಸ್ತುತ ಇರುವ ಮೀನುಗಾರಿಕೆ ದೋಣಿಗಳ ಉದ್ದದ ಮಿತಿಯನ್ನು ಸಡಿಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ರಾಮನಗರ, ಶಿಡ್ಲಘಟ್ಟ ಮಾರುಕಟ್ಟೆಗೆ 250 ಕೋಟಿ

ರಾಮನಗರ ಮತ್ತು ಶಿಡ್ಲಘಟ್ಟ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಎರಡನೇ ಹಂತದ ಕಾಮಗಾರಿಗೆ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರು. ಅನುದಾನ, ನಬಾರ್ಡ್‌ ಸಹಯೋಗದೊಂದಿಗೆ ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ಸ್ಥಾಪನೆ, ಮಧ್ಯಮ ವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 120 ಕೊನೆಗಳ ಸ್ವಯಂಚಾಲಿತ ರೀಲಿಂಗ್ ಘಟಕ ಸ್ಥಾಪಿಸಲು ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿದೆ.

ರೈತರು ಉತ್ಪಾದಿಸುವ ರೇಷ್ಮೆಗೂಡುಗಳಿಗೆ ಸೂಕ್ತ ಬೆಲೆ ದೊರಕಿಸಲು, ಅಂತಾರಾಷ್ಟ್ರೀಯ ಗುಣಮಟ್ಟಕ್ಕಾಗಿ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣೀಕರಣದ ಕಾರ್ಯಕ್ಕಾಗಿ ಮೌಲ್ಯಮಾಪಕರ ನಿಯೋಜನೆ, ರಾಜ್ಯದಲ್ಲಿ ರೇಷ್ಮೆ ಬೆಳೆ ವಿಸ್ತರಣೆ, ಗೂಡಿನ ಪೂರ್ವ ಮತ್ತು ನಂತರದ ಚಟುವಟಿಕೆಗೆ ಪ್ರೋತ್ಸಾಹಿಸಲು ರೇಷ್ಮೆ ಅಭಿವೃದ್ಧಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 55 ಕೋಟಿ ರು. ಅನುದಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ರೇಷ್ಮೆ ಉದ್ಯಮಕ್ಕೆ ಉತ್ತಮ ಬಜೆಟ್‌

ರೇಷ್ಮೆ ಉದ್ಯಮದ ಬೆಳವಣಿಗೆ ದೃಷ್ಟಿಯಿಂದ ಇದೊಂದು ಉತ್ತಮ ಬಜೆಟ್‌ ಆಗಿದೆ. ರೇಷ್ಮೆ ಉತ್ಪಾದನೆಯಲ್ಲಿ ದೇಶದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು ಇದಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯೋನ್ಮುಖವಾಗಿದ್ದಾರೆ. ನಬಾರ್ಡ್‌ ಸಹಯೋಗದೊಂದಿಗೆ ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ಸ್ಥಾಪನೆ ಮಾಡುವುದರಿಂದ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ರಾಮನಗರ ಮತ್ತು ಶಿಡ್ಲಘಟ್ಟ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಎರಡನೇ ಹಂತದ ಕಾಮಗಾರಿಗೂ ಸೂಕ್ತ ಅನುದಾನ ನೀಡಲಾಗಿದೆ.

-ಎ.ನಾರಾಯಣಸ್ವಾಮಿ, ಸಿಲ್ಕ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಗೌರವಾಧ್ಯಕ್ಷ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ