ಗಡಿನಾಡಿನಲ್ಲಿ ಕೇರಳ ಸರ್ಕಾರ ಕನ್ನಡ ವಿರೋಧಿ ನೀತಿ-ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವ ಕನ್ನಡ ಅವಗಣನೆ

Published : Dec 02, 2024, 10:37 AM IST
Kannada flag

ಸಾರಾಂಶ

ಗಡಿನಾಡಿನಲ್ಲಿ ಕೇರಳ ಸರ್ಕಾರ ಕನ್ನಡ ವಿರೋಧಿ ನೀತಿ ಮತ್ತೆ ಮುಂದುವರಿದಿದೆ. ಕಾಸರಗೋಡಿನ ಹೊಸದುರ್ಗದ ಉದಿನೂರಿನಲ್ಲಿ ನಡೆದ ಮೂರು ದಿನಗಳ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕನ್ನಡವನ್ನು ಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮಂಗಳೂರು : ಗಡಿನಾಡಿನಲ್ಲಿ ಕೇರಳ ಸರ್ಕಾರ ಕನ್ನಡ ವಿರೋಧಿ ನೀತಿ ಮತ್ತೆ ಮುಂದುವರಿದಿದೆ. ಕಾಸರಗೋಡಿನ ಹೊಸದುರ್ಗದ ಉದಿನೂರಿನಲ್ಲಿ ನಡೆದ ಮೂರು ದಿನಗಳ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕನ್ನಡವನ್ನು ಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. 

ಈಗಾಗಲೇ ಕನ್ನಡ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರ ನೇಮಕ, ಕಚೇರಿಗಳಲ್ಲಿ ಕನ್ನಡ ಬದಲು ಮಲಯಾಳಿ ಭಾಷೆಯಲ್ಲಿ ಕಡತ ವಿಲೇವಾರಿ ಮಾಡುತ್ತಿರುವ ಆರೋಪಗಳು ವ್ಯಕ್ತವಾಗುತ್ತಿರುವ ನಡುವೆಯೇ ಈಗ ಕಲೋತ್ಸವಗಳಲ್ಲೂ ಕನ್ನಡದ ಕಡೆಗಣನೆ ಆರೋಪ ಸೇರ್ಪಡೆಯಾಗಿದೆ.

ಒಟ್ಟು 12 ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆದಿದ್ದು, ಯಾವುದೇ ವೇದಿಕೆಯಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕ ಸ್ಥಾಪಿಸಿರಲಿಲ್ಲ. ಕನ್ನಡದ ಸ್ಪರ್ಧೆ ನಡೆಯುವ ಕೇವಲ ಒಂದೆಡೆ ಮಾತ್ರ ವೇದಿಕೆ ಸಮೀಪ ‘ಪ್ಲಾಸ್ಟಿಕ್ ಮುಕ್ತ ಆವರಣವೇ ಉದಿನೂರಿಗೆ ಸ್ವರ್ಣಾಭರಣ’ ಎಂದು ಬರೆದಿರುವುದನ್ನು ಹೊರತುಪಡಿಸಿದರೆ, ಬೇರೆಲ್ಲೂ ಕನ್ನಡ ಭಾಷೆ ಕಂಡುಬಂದಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಕಾಸರಗೋಡು ಜಿಲ್ಲೆಯ ಒಟ್ಟು ಏಳು ಉಪ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ ಕಾಸರಗೋಡು, ಕುಂಬಳೆ, ಮಂಜೇಶ್ವರ ಉಪಜಿಲ್ಲೆಗಳಿಂದ ಭಾಗವಹಿಸುವ ವಿದ್ಯಾರ್ಥಿಗಳ ಪೈಕಿ ಬಹುಪಾಲು ಕನ್ನಡ ಭಾಷಿಕ ಮಕ್ಕಳೇ ಆಗಿದ್ದಾರೆ. ಹಾಗಿರುವಾಗ ಯಾವುದಾದರೂ ವೇದಿಕೆಗೆ ಕನ್ನಡ ಭಾಷೆಯಲ್ಲಿ ಹೆಸರಿಡಲು ಅಥವಾ ಸೂಚನೆಗಳನ್ನು ಮಲೆಯಾಳದ ಜತೆಗೆ ಕನ್ನಡದಲ್ಲೂ ಬರೆಯಲು ಸಂಬಂಧಪಟ್ಟವರು ಆಸಕ್ತಿ ವಹಿಸಿಲ್ಲ ಎಂಬುದು ಕನ್ನಡಿಗರ ಆರೋಪ.

ಮಕ್ಕಳ ಹಕ್ಕು ಆಯೋಗಕ್ಕೂ ದೂರು:

ಎರಡು ವರ್ಷಗಳ ಹಿಂದೆ ಕನ್ನಡದಲ್ಲಿ ಸಾಂಸ್ಕೃತಿಕ ವೈವಿಧ್ಯಗಳಿಗೆ ಅವಕಾಶ ನೀಡದ ಕಾರಣ ಕನ್ನಡ ಅಧ್ಯಾಪಕರ ಸಂಘಟನೆ ನೇತೃತ್ವದಲ್ಲಿ ಕೇರಳದ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿತ್ತು. ಆಯೋಗದ ಅಧ್ಯಕ್ಷರು ಜಿಲ್ಲಾ ವಿದ್ಯಾಂಗ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ನಡೆಸಿದ್ದರು. ಬಳಿಕ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಕನ್ನಡದಲ್ಲೇ ಕಾರ್ಯಕ್ರಮ ನಡೆಸಲು ಅವಕಾಶ ನೀಡಬೇಕು. ಈ ಬಗ್ಗೆ ಯಾವುದೇ ಅಡ್ಡಿ ಆತಂಕ ಸಲ್ಲದು ಎಂದಿತ್ತು. ನಂತರ ಕನ್ನಡದಲ್ಲೂ ಕಲೋತ್ಸವದಲ್ಲಿ ಅವಕಾಶ ನೀಡುವುದು ಮುಂದುವರಿಯಿತು ಎನ್ನುತ್ತಾರೆ ಸಂಘಟನೆಯ ಪದಾಧಿಕಾರಿಗಳು.

ರಾಜ್ಯ ಮಟ್ಟದ ಕಲೋತ್ಸವದಲ್ಲಿ ಕಾವ್ಯಾಲಾಪನೆ ಕಂಠಪಾಠ ಮತ್ತು ಕವಿತಾ ರಚನೆ ಈ ಎರಡು ವಿಭಾಗದಲ್ಲಿ ಮಾತ್ರ ಕನ್ನಡ ಭಾಷೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸೀಮಿತ ವಿಭಾಗದ ಯಾವುದೇ ಕಟ್ಟುಪಾಡು ಇಲ್ಲ. ಆದರೆ ಕಾಸರಗೋಡು ಹಾಗೂ ಮಂಜೇಶ್ವರ ಹೊರತುಪಡಿಸಿ ಬೇರೆ ಕಂದಾಯ ವಿಭಾಗಗಳಲ್ಲಿ ನಡೆಯುವ ಕಲೋತ್ಸವಗಳಲ್ಲಿ ಮಲಯಾಳಿ ಭಾಷೆಗೆ ಒತ್ತು ನೀಡಲಾಗುತ್ತಿದೆ. ಈ ಪ್ರದೇಶಗಳಲ್ಲಿ ಕನ್ನಡಿಗರ ಸಂಖ್ಯೆ ತೀರಾ ವಿರಳ. ಇದನ್ನೇ ವಿದ್ಯಾಂಗ ಇಲಾಖೆ ಅಧಿಕಾರಿಗಳು ಮಲಯಾಳಿ ಭಾಷೆ ಪ್ರಸರಣ ಉಪಯೋಗಕ್ಕೆ ಬಳಕೆ ಮಾಡುತ್ತವೆ ಎನ್ನುವುದು ಕನ್ನಡಿಗರ ಆರೋಪ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ
569 ಲೈಸೆನ್ಸ್‌ ಇ-ಹರಾಜಿಗೆ ಮುಂದಾದ ಅಬಕಾರಿ ಇಲಾಖೆ