ಕೆಪಿಎಸ್ಸಿ ತಿದ್ದುಪಡಿ ವಿಧೇಯಕ ಮುಖ್ಯಮಂತ್ರಿಗಳಿಂದ ಮಂಡನೆ : ನಿಯಮಾವಳಿ ರೂಪಿಸುವುದು ಸುಲಭ

Published : Mar 13, 2025, 11:17 AM IST
KPSC New 01

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದ ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕ 2025ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಡಿಸಿದರು.

  ವಿಧಾನಸಭೆ : ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದ ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕ 2025ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಡಿಸಿದರು.

ನೂತನ ತಿದ್ದುಪಡಿ ಪ್ರಕಾರ ಈವರೆಗೆ ಕೆಪಿಎಸ್ಸಿ ಕುರಿತು ಯಾವುದೇ ನಿಯಮ ರೂಪಿಸಲು ಸರ್ಕಾರ ಕೆಪಿಎಸ್ಸಿ ಜತೆ ಸಮಾಲೋಚನೆ ಮಾಡಬೇಕೆಂಬ ನಿಯಮವಿತ್ತು. ಅದಕ್ಕೆ ಬದಲಾವಣೆ ತಂದು, ಕೆಪಿಎಸ್ಸಿಗೆ ನಿಯಮಾವಳಿ ರೂಪಿಸುವುದು ಅಥವಾ ತಿದ್ದುಪಡಿ ತರಲು ಸರ್ಕಾರ ಕೆಪಿಎಸ್ಸಿ ಜತೆಗೆ ಸಮಾಲೋಚನೆ ಅಗತ್ಯವಿಲ್ಲ ಎಂದು ತಿದ್ದುಪಡಿ ವಿಧೇಯಕದಲ್ಲಿ ತಿಳಿಸಲಾಗಿದೆ.

ಅದರ ಜತೆಗೆ, ಕೆಪಿಎಸ್ಸಿಯಲ್ಲಿ ಸ್ವಜನಪಕ್ಷಪಾತಕ್ಕೆ ಬ್ರೇಕ್‌ ಹಾಕಲು ಈವರೆಗೆ ಆಯೋಗಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನದ ಪ್ರಶ್ನೆ ಬಂದರೂ ಅಧ್ಯಕ್ಷರು ಸಭೆ ನಡೆಸಿ ತೀರ್ಮಾನಿಸಬಹುದಿತ್ತು. ಈ ನಿಯಮವನ್ನು ಬದಲಿಸಿ ಆಯೋಗದ ಸಭೆಗೆ ಅಧ್ಯಕ್ಷರನ್ನು ಸೇರಿಸಿ ಒಟ್ಟು ಸದಸ್ಯರ ಶೇ.50 ರಷ್ಟು ಕೋರಂ ಅಗತ್ಯ ಎಂದು ಮಾಡಲಾಗಿದೆ.

ಇನ್ನು ಸಭೆಯಲ್ಲಿ ಎಲ್ಲಾ ತೀರ್ಮಾನ ಹಾಗೂ ನಡಾವಳಿಗಳನ್ನು ಕಾರ್ಯದರ್ಶಿಗಳೇ ಖುದ್ದಾಗಿ ದಾಖಲಿಸಬೇಕು ಎಂದೂ ಉಲ್ಲೇಖಿಸಲಾಗಿದೆ. ಆಯೋಗವು ಸದಸ್ಯರ ಆಕ್ಷೇಪದ ಹೊರತಾಗಿಯೂ ಯಾವುದಾದರೂ ತೀರ್ಮಾನ ತೆಗೆದುಕೊಂಡರೆ ಅಂಥ ತೀರ್ಮಾನದ ಬಗ್ಗೆ ಭಿನ್ನಾಭಿಪ್ರಾಯ ನಮೂದಿಸಲು ಸದಸ್ಯರಿಗೆ ಅವಕಾಶವಿದೆ. ಯಾಕೆ ತೀರ್ಮಾನ ವಿರೋಧಿಸಲಾಗುತ್ತಿದೆ ಎಂಬ ಕಾರಣಗಳ ಸಹಿತ ತಮ್ಮ ವಿರೋಧವನ್ನು ಉಲ್ಲೇಖಿಸಬಹುದು ಎಂಬ ಅಂಶ ವಿಧೇಯಕದಲ್ಲಿ ಸೇರಿಸಲಾಗಿದೆ.

ಸಂದರ್ಶನ ನಿಯಮಾವಳಿಗೂ ತಿದ್ದುಪಡಿ ಪ್ರಸ್ತಾಪಿಸಲಾಗಿದ್ದು, ಈವರೆಗೆ ಆಯೋಗ ನಿಯೋಜಿಸಿದ ಇಬ್ಬರು ಅಥವಾ ಹೆಚ್ಚು ಸದಸ್ಯರು ಅಭ್ಯರ್ಥಿಗಳ ಸಂದರ್ಶನ ನಡೆಸಬಹುದು. ಈ ಸಂದರ್ಶನದ ಫಲಿತಾಂಶಗಳನ್ನು ಆಯೋಗದ ಮುಂದೆ ಮಂಡಿಸಿ, ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬ ನಿಯಮ ಇತ್ತು.

ಇದನ್ನು ಬದಲಿಸಿ ಸಂದರ್ಶನ ಮಂಡಳಿಯಲ್ಲಿ ಆಯೋಗವು ನಿಯೋಜಿಸಬಹುದಾದ ಒಬ್ಬ ಸದಸ್ಯ ಮಾತ್ರ ಇರಬೇಕು. ಆದರೆ ಗೆಜೆಟೆಡ್‌ ಪ್ರೊಬೆಷನರ್ಸ್ ನೇಮಕಾತಿ ನಿಯಮದಲ್ಲಿರುವಂತೆ ಸಂದರ್ಶನ ನಡೆಸಬೇಕು ಎಂದು ಬದಲಿಸಲಾಗಿದೆ.

ಪರಿಷತ್ತಲ್ಲಿ ಗಿರವಿ ತಿದ್ದುಪಡಿ ವಿಧೇಯಕ ಅಂಗೀಕಾರ

ವಿಧಾನಪರಿಷತ್: ವಿಧಾನಸಭೆಯಲ್ಲಿ ಅಂಗೀಕೃತವಾಗಿರುವ ‘ಕರ್ನಾಟಕ ಗಿರವಿದಾರರ (ತಿದ್ದುಪಡಿ ) ವಿಧೇಯಕ 2025‘, ‘ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ)ವಿಧೇಯಕ 2025’ ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ವಿಧೇಯಕ 2025’ ಹಾಗೂ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ 2025 ವಿಧಾನ ಪರಿಷತ್ ಅಂಗೀಕಾರ ನೀಡಿತು. ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಅವರು ವಿಧೇಯಕ ಮಂಡಿಸಿದರು. ಕೆಲ ಕಾಲ ಚರ್ಚೆ ನಂತರ ಯಾವುದೇ ತಿದ್ದುಪಡಿ ಇಲ್ಲದೇ ಸದನ ಒಪ್ಪಿಗೆ ನೀಡಿತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು