ವಿಧಾನಸೌಧದ ಪ್ರವೇಶದ್ವಾರದಲ್ಲಿ 25.76 ಲಕ್ಷ ರು. ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಪುಟ್ಟರಂಗ ಶೆಟ್ಟಿ ಸೇರಿ ಆರು ಮಂದಿಗೆ ಲೋಕಾಯುಕ್ತ ಪೊಲೀಸರು ನೊಟೀಸ್ ಜಾರಿಗೊಳಿಸಿದೆ.
ಬೆಂಗಳೂರು : ವಿಧಾನಸೌಧದ ಪ್ರವೇಶದ್ವಾರದಲ್ಲಿ 25.76 ಲಕ್ಷ ರು. ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಪುಟ್ಟರಂಗ ಶೆಟ್ಟಿ ಸೇರಿ ಆರು ಮಂದಿಗೆ ಲೋಕಾಯುಕ್ತ ಪೊಲೀಸರು ನೊಟೀಸ್ ಜಾರಿಗೊಳಿಸಿದೆ.
ಪುಟ್ಟರಂಗ ಶೆಟ್ಟಿ, ಮಂಜುನಾಥ್, ಕೃಷ್ಣಮೂರ್ತಿ, ಶ್ರೀನಿಧಿ, ಅನಂತಶಂಕರ್, ನಂದನ್ ಅವರಿಗೆ ನೊಟೀಸ್ ನೀಡಿ ವಿಚಾರಣೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆ ಅಪೂರ್ಣಗೊಂಡಿದೆ ಎಂದು ಹೇಳಿ, ಈ ಮೊದಲು ಸಲ್ಲಿಕೆ ಮಾಡಿದ್ದ ಆರೋಪಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ, ಪ್ರಕರಣದ ಹೆಚ್ಚಿನ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಲೋಕಾಯುಕ್ತ ಪೊಲೀಸರು, ನೊಟೀಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
2019ರ ಜನವರಿ ತಿಂಗಳಲ್ಲಿ ವಿಧಾನಸೌಧ ಪ್ರವೇಶದ್ವಾರದಲ್ಲಿ ಮಾಜಿ ಸಚಿವ ಪುಟ್ಟರಂಗಶೆಟ್ಟಿ ಆಪ್ತಸಹಾಯಕ ಮೋಹನ್ ಕುಮಾರ್ ಎಂಬುವರಿಂದ 25.76 ಲಕ್ಷ ರು. ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪ್ರಕರಣ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಎಸಿಬಿಗೆ ವರ್ಗಾವಣೆಗೊಂಡಿತ್ತು. ಎಸಿಬಿ ರದ್ದುಗೊಂಡ ಹಿನ್ನೆಲೆಯಲ್ಲಿ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದೆ.