ಮೆಟ್ರೋ ದರ ಏರಿಕೆ ಏರಿಕೆ ಅರ್ಜಿ ವಜಾ - ಕಾಯ್ದೆಯ ಪ್ರಕಾರ ದರ ಏರಿಕೆ : ಹೈಕೋರ್ಟ್‌

ಸಾರಾಂಶ

ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿ ಆದೇಶಿಸಿದೆ.

 ಬೆಂಗಳೂರು : ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿ ಆದೇಶಿಸಿದೆ.

ಕಾನೂನು ಬಾಹಿರವಾಗಿ ನಮ್ಮ ಮೆಟ್ರೋ ರೈಲು ಪ್ರಯಾಣ ದರವನ್ನು ಶೇ.71ರವರೆಗೆ ಏರಿಕೆ ಮಾಡಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ಆದೇಶಿಸಿಸಿರುವುದನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಸನತ್ ಕುಮಾರ್ ಶೆಟ್ಟಿ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ, ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ-2002ರ ಸೆಕ್ಷನ್ 33 ಅಡಿಯಲ್ಲಿ ಶುಲ್ಕ ನಿಗದಿ ಮತ್ತು ಪರಿಷ್ಕರಣೆಗೆ ಅವಕಾಶವಿದೆ. ಇದೇ ಕಾಯ್ದೆಯಡಿ ಪ್ರಸ್ತುತ ದರ ಏರಿಕೆ‌ ಮಾಡಲಾಗಿದೆ. ಮೆಟ್ರೋ ಆಡಳಿತ ಕಾಲಕಾಲಕ್ಕೆ ದರವನ್ನು ನಿಗದಿಪಡಿಸಲು ಅಧಿಕಾರ ಹೊಂದಿದೆ. ದರ ನಿಗದಿಗೆ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿ ಎಲ್ಲ ಆಯಾಮಗಳಲ್ಲಿ ಅಧ್ಯಯನ ಮಾಡಿ ಏರಿಕೆಗೆ ಶಿಫಾರಸು ಮಾಡಿದೆ. ಅದನ್ನು ಆಧರಿಸಿಯೇ ದರ ಏರಿಕೆ ಮಾಡಿರುವುದರಿಂದ ನ್ಯಾಯಾಲಯ ಮತ್ತೆ ಮರು ಪರಿಶೀಲನೆ ನಡೆಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಇದಕ್ಕೂ ಮುನ್ನ ಅರ್ಜಿ‌ದಾರ ಪರ ವಕೀಲರು, ಪ್ರಸ್ತುತ ಜಾರಿಯಲ್ಲಿರುವ ಪ್ರಯಾಣದರವನ್ನು ಶೇ.25ಕ್ಕಿಂತ ಹೆಚ್ಚಳ ಮಾಡದಂತೆ ಕೋರಿ ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಿದ್ದರು. ಹಾಲಿ ನಿಯಮಗಳ ಪ್ರಕಾರ ಬಿಎಂಆರ್‌ಸಿಎಲ್ ಶೇ.15 ರಿಂದ 20 ರಷ್ಟು ದರ ಏರಿಕೆಯನ್ನು ಪರಿಗಣಿಸಬೇಕಾಗಿತ್ತು. ಆದರೆ, ಶೇ.71 ರಷ್ಟು ಹೆಚ್ಚಳ ಮಾಡಿದೆ. ಶೇ.25ಕ್ಕಿಂತ ಹೆಚ್ಚು ಪ್ರಯಾಣ ದರ ಹೆಚ್ಚಿಸಲು ಅವಕಾಶವಿಲ್ಲ. ಆದ್ದರಿಂದ ಶೇ.71ರವರೆಗೆ ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಿಸಿರುವ ಬಿಎಂಆರ್‌ಸಿಎಲ್‌ ಕ್ರಮ ರದ್ದುಪಡಿಸಬೇಕು. ನಿಯಮಾನುಸಾರ ಹೊಸದಾಗಿ ದರ ಪರಿಷ್ಕರಣೆ ಪ್ರಕ್ರಿಯೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿದರು.

Share this article