ಹಂಪಿ ಬಳಿ ಮತ್ತಷ್ಟು ಸಂಗೀತ ಕಲ್ಲುಗಳು ಪತ್ತೆ! ಕರೆಕಲ್ಲು ಗುಡ್ಡದಲ್ಲಿ ಸಂಗೀತದ ನಾದ ಹೊರಹೊಮ್ಮಿಸುವ ಕಲ್ಲುಗಳ ಶೋಧ

Published : Mar 29, 2025, 11:08 AM IST
Hampi

ಸಾರಾಂಶ

ಹಂಪಿ ವಿಠ್ಠಲ ಮಂಟಪದಲ್ಲಿನ ಕಲ್ಲಿನ ಕಂಬಗಳನ್ನು ನಿಧಾನವಾಗಿ ತಟ್ಟಿದಾಗ ಸಂಗೀತ ನಾದ ಕೇಳಿ ಬರುವಂತೆಯೇ ಸಂಗೀತ ನಾದ ಮೊಳಗಿಸುವ ಕಲ್ಲುಗಳನ್ನು ಹೊಸಪೇಟೆ ಧರ್ಮಸಾಗರ ಗ್ರಾಮದ ಸಮೀಪದಲ್ಲಿರುವ ದೇವಲಾಪುರದ ಕರೆಕಲ್ಲು ಗುಡ್ಡದಲ್ಲಿ ವಿಜಯನಗರ ತಿರುಗಾಟ ಸಂಶೋಧನಾ ತಂಡ ಪತ್ತೆ ಹಚ್ಚಿದೆ.

 ಹೊಸಪೇಟೆ :  ಹಂಪಿ ವಿಠ್ಠಲ ಮಂಟಪದಲ್ಲಿನ ಕಲ್ಲಿನ ಕಂಬಗಳನ್ನು ನಿಧಾನವಾಗಿ ತಟ್ಟಿದಾಗ ಸಂಗೀತ ನಾದ ಕೇಳಿ ಬರುವಂತೆಯೇ ಸಂಗೀತ ನಾದ ಮೊಳಗಿಸುವ ಕಲ್ಲುಗಳನ್ನು ಹೊಸಪೇಟೆ ಧರ್ಮಸಾಗರ ಗ್ರಾಮದ ಸಮೀಪದಲ್ಲಿರುವ ದೇವಲಾಪುರದ ಕರೆಕಲ್ಲು ಗುಡ್ಡದಲ್ಲಿ ವಿಜಯನಗರ ತಿರುಗಾಟ ಸಂಶೋಧನಾ ತಂಡ ಪತ್ತೆ ಹಚ್ಚಿದೆ.

ಕರೆಕಲ್ಲು ಗುಡ್ಡ ಸಮೂಹದ ಮಧ್ಯಭಾಗದಲ್ಲಿರುವ ನಾಲ್ಕೈದು ಕಲ್ಲುಗುಂಡುಗಳಿಗೆ ಕಲ್ಲಿನಿಂದ ಕುಟ್ಟಿದಾಗ ಸಂಗೀತದ ನಾದವು ಹೊರ ಹೊಮ್ಮುತ್ತಿದೆ. ವಿಜಯನಗರ ತಿರುಗಾಟ ಸಂಶೋಧನಾ ತಂಡದ ಡಾ.ಗೋವಿಂದ, ಡಾ. ಎಚ್.ತಿಪ್ಪೇಸ್ವಾಮಿ, ಡಾ. ಗೋವರ್ಧನ್, ಡಾ. ಕೃಷ್ಣೇಗೌಡ, ಡಾ. ವೀರಾಂಜನೇಯ, ಕೆ. ವೀರಭದ್ರ ಗೌಡ, ರವಿ, ಮಂಜು ಅವರು ಭೈರಪ್ಪ, ಶಂಕರ ಅವರ ಸಹಕಾರದಿಂದ ಈ ಕಲ್ಲುಗಳನ್ನು ಪತ್ತೆ ಹಚ್ಚಿದ್ದಾರೆ.

ಕಲ್ಲುಗಳ ವಿಶೇಷತೆ:

ಈ ಕಲ್ಲುಗಳಲ್ಲಿ ಒಂದು ಕಲ್ಲು ಚಪ್ಪಟೆಯಾಕಾರವಾಗಿದ್ದು, ಅದು ಎಂಟು ಅಡಿ ಎತ್ತರ ನಾಲ್ಕು ಅಡಿ ಅಗಲವಾಗಿದೆ. ಅದರ ಪಕ್ಕದ ಇನ್ನಿತರ ಮೂರು ಹಾಸು ಗುಂಡು ಕಲ್ಲುಗಳಿಂದಲೂ ಸಂಗೀತದ ನಿನಾದ ಕೇಳುತ್ತದೆ. ಈ ಸಂಗೀತ ನಾದ ಮೊಳಗುವುದನ್ನು ಆದಿ ಮಾನವರು ಗುರುತಿಸಿ, ಅವರು ಕುಟ್ಟಿದ ಗುರುತು ಈಗಲೂ ಕಾಣಿಸುತ್ತದೆ. ಇದೇ ರೀತಿ ಈಗಾಗಲೇ ಪ್ರಾಗೈತಿಹಾಸಿಕ ಸ್ಥಳವೆಂಬ ಖ್ಯಾತಿಗೆ ಗುರಿಯಾಗಿರುವ ಸಂಗನಕಲ್ಲಿನಲ್ಲಿ ಸಹ ಇದೇ ರೀತಿ ಸಂಗೀತ ನಾದ ಹೊರಹೊಮ್ಮುವ ಕಲ್ಲುಗಳು ಕಂಡು ಬರುತ್ತವೆ. ಆದರೂ ಈ ಕರೆಕಲ್ಲು ಗುಡ್ಡದ ಕಲ್ಲುಗಳು ತುಂಬಾ ವಿಶೇಷವಾಗಿವೆ. ರಸ್ತೆ ಪಕ್ಕದಲ್ಲಿರುವ ಈ ಗುಂಡುಕಲ್ಲುಗಳ ಸುತ್ತಲೂ ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಡಾ. ತಿಪ್ಪೇಸ್ವಾಮಿ, ಡಾ. ಕೃಷ್ಣೇಗೌಡ ಹಾಗೂ ತಂಡದ ಇತರ ಸದಸ್ಯರು ತಿಳಿಸಿದ್ದಾರೆ.

ಕುಟ್ಟು ಚಿತ್ರಗಳ ಶೋಧ:

ಈ ಕರೆಕಲ್ಲು ಗುಡ್ಡದಲ್ಲಿ ಸಂಗೀತದ ಕಲ್ಲುಗಳೊಂದಿಗೆ ಕ್ರಿ.ಪೂ. 3000 ಕಾಲಮಾನದ ಆದಿಮಾನವ ನೆಲೆಸಿದ್ದರ ಕುರುಹಾಗಿ ಅಲ್ಲಿನ ಬಹುತೇಕ ಗುಂಡುಕಲ್ಲುಗಳಿಗೆ ಆದಿಮಾನವರು ಕುಟ್ಟಿದ ಕುಟ್ಟುಚಿತ್ರಗಳಿವೆ. ಇದರಲ್ಲಿ ವಿಶೇಷವಾಗಿ ಸುಂದರವಾದ ಗೂಳಿ ಚಿತ್ರವಿದ್ದು, ಆರು ಇಂಚು ಉದ್ದ, ನಾಲ್ಕು ಇಂಚು ಅಗಲದ ಆ ಗೂಳಿಯ ಹಿಂದೆ ಮಾನವನ ಚಿತ್ರವಿದೆ. ಅಲ್ಲದೇ ಗುಡ್ಡದ ಬಹುತೇಕ ಕಲ್ಲುಗಳಲ್ಲಿ ಇತರ ಪ್ರಾಣಿಗಳ ಚಿತ್ರಗಳಿವೆ. ಅದರಲ್ಲೂ ಹುಲಿಯನ್ನು ತುಂಬಾ ಸುಂದರವಾಗಿ ಚಿತ್ರಿಸಿದ್ದಾರೆ. ಇವು ಅಲ್ಲದೇ ಆದಿ ಮಾನವ ಬೇಟೆಯಾಡುವ ಹಾಗೂ ಎತ್ತರದ ಮನುಷ್ಯನ ಚಿತ್ರಗಳನ್ನು ಕುಟ್ಟಿರುವುದು ಕಂಡು ಬಂದಿವೆ. ಇನ್ನಿತರ ಗುಂಡು ಕಲ್ಲುಗಳಿಗಿರುವ ಕುಟ್ಟುಚಿತ್ರಗಳು ಗಾಳಿ, ಮಳೆ, ಬಿಸಿಲಿನಿಂದ ಸವೆದು ಹೋಗಿವೆ. ಇವುಗಳನ್ನು ಪುರಾತತ್ವ ಇಲಾಖೆ ಇಲ್ಲವೇ ಆಡಳಿತಾಂಗ ಸಂರಕ್ಷಣೆ ಮಾಡಬೇಕೆಂದು ಡಾ. ಗೋವಿಂದ ಒತ್ತಾಯಿಸಿದ್ದಾರೆ. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ