5 ತಿಂಗಳ ಬಳಿಕ ಜೈಲಿಂದ ಮುರುಘಾಶ್ರೀ ಬಿಡುಗಡೆ - ಚಿತ್ರದುರ್ಗ ಮಠಕ್ಕೆ ಪ್ರವೇಶವಿಲ್ಲ

Published : Oct 08, 2024, 05:32 AM IST
Muruga Mutt

ಸಾರಾಂಶ

ಪೋಕ್ಸೋ ಪ್ರಕರಣದಲ್ಲಿ ಐದು ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದ ಬಸವಕೇಂದ್ರ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸೋಮವಾರ ಬಿಡುಗಡೆಯಾಗಿ ದಾವಣಗೆರೆ ಆಶ್ರಮಕ್ಕೆ ತೆರಳಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚಿತ್ರದುರ್ಗ ನ್ಯಾಯಾಲಯ ಬಂಧನ ಮುಕ್ತಿ ನೀಡಿದೆ.

ಚಿತ್ರದುರ್ಗ : ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತು ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಸವಕೇಂದ್ರ ಮುರುಘಾಮಠದ ಶಿವಮೂರ್ತಿ ಮುರುಘಾಶರಣರು ಐದು ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸೋಮವಾರ ಅಪರಾಹ್ನ ಮೂರೂವರೆ ಸುಮಾರಿಗೆ ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದರೂ ಮುರುಘಾಮಠ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ಶರಣರು ನೇರವಾಗಿ ದಾವಣಗೆರೆ ಶಿವಯೋಗ ಆಶ್ರಮದತ್ತ ಪ್ರಯಾಣ ಬೆಳೆಸಿದರು.

ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿದ್ದ ಮುರುಘಾಶ್ರೀ 2ನೇ ಬಾರಿಗೆ ಬಿಡುಗಡೆಯಾಗುತ್ತಿದ್ದಾರೆ. ಈ ಮೊದಲು 14 ತಿಂಗಳು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಹೈಕೋರ್ಟ್ ಜಾಮೀನು ನೀಡಿದ್ದರಿಂದ ಹೊರ ಬಂದಿದ್ದರು. ಇದನ್ನು ಪ್ರಶ್ನಿಸಿ ಮೈಸೂರಿನ ಒಡನಾಡಿ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.

ಇಬ್ಬರು ಸಂತ್ರಸ್ತೆಯರು ಸೇರಿ ಒಟ್ಟು 13 ಮುಖ್ಯ ಸಾಕ್ಷ್ಯಗಳ ವಿಚಾರಣೆ ಆಗುವ ತನಕ ಮುರುಘಾಶ್ರೀ ನ್ಯಾಯಾಂಗ ಬಂಧನದಲ್ಲಿರುವಂತೆ ಆಗ ಸೂಚಿಸಿದ್ದ ಸುಪ್ರೀಂ ಕೋರ್ಟ್‌, ವಿಚಾರಣೆಗೆ ಕಾಲ ಮಿತಿ ನಿಗದಿಪಡಿಸಿತ್ತು. ಆ ಬ‍‍ಳಿಕ ಮತ್ತೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಶ್ರೀಗಳ ವಿರುದ್ಧದ ಎಲ್ಲ 13 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಂಧನದಿಂದ ಸೋಮವಾರ ಮುಕ್ತಿ ನೀಡಿತು.

ಸೆ.1, 2022 ರಂದು ಬಂಧನಕ್ಕೆ ಒಳಗಾಗಿದ್ದ ಮುರುಘಾಶ್ರೀ ಹೆಚ್ಚು ಕಡಿಮೆ ಸುಮಾರು 19 ತಿಂಗಳಷ್ಟು ದೀರ್ಘ ಅವಧಿವರೆಗೆ ಚಿತ್ರದುರ್ಗ ಬಂಧಿಖಾನೆಯಲ್ಲಿದ್ದರು.

ನಗುತ್ತಲೇ ಹೊರ ಬಂದ ಮುರುಘಾಶ್ರೀ:

ಬಿಡುಗಡೆ ಆದೇಶ ಚಿತ್ರದುರ್ಗ ಬಂಧೀಖಾನೆಗೆ ತಲುಪುತ್ತಿದ್ದಂತೆ ಅಲ್ಲಿಂದ ಹೊರ ಬಂದ ಮರುಘಾಶ್ರೀ ಮೊಗದಲ್ಲಿ ಸಂತಸದ ಗೆರೆಗಳು ಮೂಡಿದ್ದವು. ಬಿಡುಗಡೆ ವಿಷಯ ತಿಳಿದು ಜೈಲಿನ ಬಳಿ ಆಗಮಿಸಿದ್ದ ಭಕ್ತರಿಗೆ ನಗೆ ಬೀರಿದ ಶರಣರು, ಎಲ್ಲ ಮುರುಗೇಶನ ಇಚ್ಛೆ. ಆತನ ಕೃಪೆಯಿಂದಾಗಿ ಬಿಡುಗಡೆ ಹೊಂದಿದ್ದೇನೆ ಎಂದರು.

ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಹಾಗೂ ಮುರುಘಾಮಠದ ಉತ್ತರಾಧಿಕಾರಿ ಬಸವಾನಂದ ಮುರುಘಾಶ್ರೀ ಕಾಲಿಗೆರಗಿ ಭಕ್ತಿ ಸಮರ್ಪಣೆ ಮಾಡಿದರು. ಈ ವೇಳೆ ಎದುರಾದ ಸುದ್ದಿಗಾರರಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಮುರುಘಾಶ್ರೀ ನಿರಾಕರಿಸಿದರು. ಇದು ಮಾತನಾಡುವ ಸಮಯವಲ್ಲ. ಮೌನವಾಗಿರುವ ಸಮಯ. ಕಾನೂನಿನ ಮೂಲಕ ಎಲ್ಲವನ್ನೂ ಎದುರಿಸುವೆ. ಮುಂದಿನ ದಿನಗಳಲ್ಲಿ ಪ್ರತಿಕ್ರಿಯಿಸುವೆ ಎಂದರು. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!