ನಂದಿನಿ ಜತೆ ಅಮೂಲ್‌ ದರ ಸಮರ - ಮೊಸರು 10 ರು. ಇಳಿಕೆ

Published : Nov 07, 2026, 06:53 AM IST
Amul Price

ಸಾರಾಂಶ

ರಾಜ್ಯದ ಹೆಮ್ಮೆಯ ಕೆಎಂಎಫ್‌ ಒಡೆತನದ ನಂದಿನಿಗೆ ನೇರ ಸ್ಪರ್ಧೆ ನೀಡಲು ಗುಜರಾತ್‌ ಮೂಲದ ಅಮೂಲ್‌ ಮುಂದಾಗಿದ್ದು, ಮೊಸರಿನ ದರ ಇಳಿಸುವ ಮೂಲಕ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ ಸಮರಕ್ಕೆ ಮುಂದಾಗಿದೆ.

ಬೆಂಗಳೂರು : ರಾಜ್ಯದ ಹೆಮ್ಮೆಯ ಕೆಎಂಎಫ್‌ ಒಡೆತನದ ನಂದಿನಿಗೆ ನೇರ ಸ್ಪರ್ಧೆ ನೀಡಲು ಗುಜರಾತ್‌ ಮೂಲದ ಅಮೂಲ್‌ ಮುಂದಾಗಿದ್ದು, ಮೊಸರಿನ ದರ ಇಳಿಸುವ ಮೂಲಕ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ ಸಮರಕ್ಕೆ ಮುಂದಾಗಿದೆ. ನಂದಿನಿಗಿಂತ ಅಮೂಲ್‌ ತನ್ನ ಮೊಸರಿನ ದರವನ್ನು 10 ರು.ನಷ್ಟು ಇಳಿಸಿದೆ.

ನ.1ರಿಂದ ಕೆಎಂಎಫ್‌ ಹಾಲಿನ ದರವನ್ನು 8ರಿಂದ 12 ರು.ನಷ್ಟು ಮತ್ತು ಮೊಸರಿನ ದರವನ್ನು ಬರೋಬ್ಬರಿ 14 ರು. ಏರಿಕೆ ಮಾಡಿತ್ತು. ಕೆಎಂಎಫ್‌ ಹಾಲಿನ ಗುಣಮಟ್ಟದ ಮೇಲೆ (ಜಿಡ್ಡಿನಾಂಶ) ದರ ಏರಿಕೆ ಮಾಡಿರುವುದಾಗಿ ಹೇಳಲಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದರ ಬೆನ್ನಲ್ಲೇ ಕರ್ನಾಟಕದ ಡೈರಿ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆ ಗುರುತು ವಿಸ್ತರಿಸಲು ಕಾಯುತ್ತಿದ್ದ ಅಮೂಲ್‌ ಸಂಸ್ಥೆ, ನಂದಿನಿ ಗ್ರಾಹಕರನ್ನು ಸೆಳೆಯಲು ಮೊಸರಿನ ಬೆಲೆ ಕಡಿತ ಮಾಡುವ ತಂತ್ರಗಾರಿಕೆ ರೂಪಿಸಿ, 900 ಗ್ರಾಂ. ಪ್ಯಾಕೇಟ್‌ ಮೊಸರಿಗೆ ಕೇವಲ 58 ರು.ನಿಗದಿ ಮಾಡಿದೆ. ಈ ಕುರಿತು ಜಾಹೀರಾತು ನೀಡುವ ಮೂಲಕ ನೇರ ಬೆಲೆ ಸಮರಕ್ಕೂ ಮುಂದಾಗಿದೆ. ನಗರ ಪ್ರದೇಶಗಳಲ್ಲಿ ಹಾಗೂ ಆನ್‌ಲೈನ್‌ ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಅಮೂಲ್‌ ಮೊಸರಿನ ಲಭ್ಯತೆ ಹೆಚ್ಚುತ್ತಿದ್ದು, ಕಡಿಮೆ ದರದ ಆಫರ್‌ಗಳ ಮೂಲಕ ನಂದಿನಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಕೆಎಂಎಫ್‌ ಮೊಸರಿನ ದರ ಲೀಟರ್‌ಗೆ 68 ರು.ವರೆಗೆ ಏರಿಕೆ ಆಗಿದೆ.

ಗ್ರಾಹಕರಿಂದ ಭಾರೀ ಅಸಮಾಧಾನ

ಇದರಿಂದ ಸಹಜವಾಗಿಯೇ ಗ್ರಾಹಕರಿಂದ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಇದರ ಪರಿಣಾಮ ರಾಜ್ಯ ಸರ್ಕಾರ ಮತ್ತು ಕೆಎಂಎಫ್‌ ಆಡಳಿತ ಮಂಡಳಿ ಮಧ್ಯಪ್ರವೇಶಿಸಿ, ಮೊಸರಿನ ದರದಲ್ಲಿ ಪ್ರತಿ ಲೀಟರ್‌ಗೆ 2 ರು.ಇಳಿಕೆ ಮಾಡಲು ತೀರ್ಮಾನ ಕೈಗೊಂಡಿತ್ತು. ಹೀಗಿದ್ದರೂ ಖಾಸಗಿ ಹಾಗೂ ಹೊರ ರಾಜ್ಯದ ಬ್ರಾಂಡ್‌ಗಳು ಅಮೂಲ್‌, ಹಟ್ಸನ್‌, ಸಿದ್ಸ್‌ ಫಾರ್ಮಾ, ಕಂಟ್ರಿ ಡಿಲೈಟ್ಸ್‌, ಮಿಲ್ಕಿಮಿಸ್ಟ್‌ ನಂತಹ ಸಂಸ್ಥೆಗಳು ನಂದಿನಿಯ ದರ ಏರಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ತಮ್ಮ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಲು ಬೆಲೆ ಕಡಿತಕ್ಕೆ ಮುಂದಾಗಿವೆ.

ಹೋಟೆಲ್‌ಗಳು ಹಾಗೂ ಕ್ಯಾಟರಿಂಗ್‌ ಉದ್ಯಮಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ಮೊಸರು ಬಳಕೆಯಾಗುವುದರಿಂದ ಈ ದರ ವ್ಯತ್ಯಾಸ ಅವರ ಖರೀದಿ ನಿರ್ಧಾರದ ಮೇಲೆ ಪ್ರಭಾವ ಬೀರಲಿದೆ. ನಿತ್ಯ ಮೊಸರು ಬಳಸುವ ಮಧ್ಯಮ ವರ್ಗದ ಗ್ರಾಹಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಮೊಸರಿನ ಆಯ್ಕೆಗಳು ಸಿಗುವುದರಿಂದ ಸಹಜವಾಗಿ ಕಡಿಮೆ ದರ ಇರುವ ಬ್ರಾಂಡ್‌ನತ್ತ ಆಕರ್ಷಿತರಾಗುವ ಸಾಧ್ಯತೆ ಹೆಚ್ಚಿದ್ದು, ನಂದಿನಿ ಬ್ರಾಂಡ್‌ಗೆ ಮುಂದಿನ ದಿನಗಳಲ್ಲಿ ದೊಡ್ಡ ಸವಾಲು ಎದುರಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಮೊಸರಿನ ಬ್ರಾಂಡ್‌ಗಳು ತೂಕದ ಪ್ರಮಾಣ ದರ ಪಟ್ಟಿ

ನಂದಿನಿ 500ಗ್ರಾಂ 34ರು.

ನಂದಿನಿ 1000ಗ್ರಾಂ 68

ಅಮೂಲ್‌ 450 ಗ್ರಾಂ 29 ರು.

ಅಮೂಲ್‌ 900ಗ್ರಾಂ 58 ರು.

ಸಿದ್ಸ್‌ ಫಾರ್ಮಾ ಬಫೆಲ್ಲೋ ಕರ್ಡ್‌ 500 ಗ್ರಾಂ 36 ರು.

ಸಿದ್ಸ್‌ ಫಾರ್ಮಾ ಎಮ್ಮೆ ಮೊಸರು 1 ಲೀಟರ್‌ 62ರು.

ಮಿಲ್ಕಿಮಿಸ್ಟ್‌ 400 ಗ್ರಾಂ 39 ರು.

ಮಸ್ತಿ 450 ಗ್ರಾಂ 40 ರು.

ಹಟ್ಸನ್‌ 500 ಗ್ರಾಂ 38 ರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗಳೂರು : ಮೇಕ್ರಿ ಸರ್ಕಲ್‌ ರಸ್ತೇಲಿ 1.5 ವರ್ಷ ಸಂಚಾರ ಬಂದ್!
ಬೆಳ್ತಂಗಡಿ : ಸಿಬ್ಬಂದಿಗೆ 1ಕೋಟಿ ಮೌಲ್ಯದ ಇವಿ ಕಾರು, ಬೈಕ್‌ ದೀಪಾವಳಿ ಗಿಫ್ಟ್‌ ಕೊಟ್ಟ ಕಂಪನಿ