ಸಾರಿಗೆ ನೌಕರರ ವೇತನ 12.5% ಹೆಚ್ಚಳಕ್ಕೆ ಆದೇಶ

Published : May 13, 2026, 07:17 AM IST
KSRTC employees salary hike

ಸಾರಾಂಶ

ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೌಕರ ಸಂಘಟನೆಗಳೊಂದಿಗಿನ ಹಗ್ಗಜಗ್ಗಾಟಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾರಿಗೆ ನೌಕರರ ವೇತನವನ್ನು 2025ರ ಏ. 1ರಿಂದ ಅನ್ವಯವಾಗುವಂತೆ ಶೇ. 12.50ರಷ್ಟು ಹೆಚ್ಚಿಸಿ ಆದೇಶಿಸಿದೆ.

 ಬೆಂಗಳೂರು :  ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೌಕರ ಸಂಘಟನೆಗಳೊಂದಿಗಿನ ಹಗ್ಗಜಗ್ಗಾಟಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾರಿಗೆ ನೌಕರರ ವೇತನವನ್ನು 2025ರ ಏ. 1ರಿಂದ ಅನ್ವಯವಾಗುವಂತೆ ಶೇ. 12.50ರಷ್ಟು ಹೆಚ್ಚಿಸಿ ಆದೇಶಿಸಿದೆ.

ಆದರೆ, ಸರ್ಕಾರದ ಈ ಆದೇಶವನ್ನು ವಿರೋಧಿಸಿರುವ ಕೆಎಸ್ಸಾರ್ಟಿಸಿ ನೌಕರ ಸಂಘಟನೆಗಳ ಜಂಟಿ ಕ್ರಿಯಾಸಮಿತಿ, ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ಶೇ. 25ರಷ್ಟು ವೇತನ ಹೆಚ್ಚಳಕ್ಕೆ ಪರಿಷ್ಕೃತ ಆದೇಶ ಹೊರಡಿಸುವಂತೆ ಆಗ್ರಹಿಸಿದೆ. ಇಲ್ಲದೆ ಹೋದರೆ, ಮೇ 20ರಿಂದ ನಡೆಸಲುದ್ದೇಶಿಸಿರುವ ಅನಿರ್ದಿಷ್ಟಾವಧಿ ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಎಚ್ಚರಿಕೆ ನೀಡಿದೆ.

ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರಿಗೆ ನಿಗಮಗಳು ಮತ್ತು ನೌಕರ ಸಂಘಟನೆಗಳ ನಡುವೆ ಒಮ್ಮತದ ನಿರ್ಧಾರ ಮೂಡದೆ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ನಿಗಮಗಳ ಅಧಿಕಾರಿಗಳು ಹಾಗೂ ನೌಕರ ಸಂಘಟನೆ ಪ್ರಮುಖರೊಂದಿಗೆ ಮೂರು ಸಭೆಗಳು ನಡೆದಿದ್ದವು. ಜತೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೂ ಸಭೆ ನಡೆಸಿ, ಶೇ. 7ರಷ್ಟು ವೇತನ ಹೆಚ್ಚಳದ ಪ್ರಸ್ತಾವವನ್ನು ನೌಕರ ಸಂಘಟನೆಗಳ ಮುಂದಿಟ್ಟಿದ್ದರು. ಅದಕ್ಕೊಪ್ಪದ ನೌಕರ ಸಂಘಟನೆಗಳು ಶೇ. 25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಹಠ ಹಿಡಿದಿದ್ದವು.

ಅಂತಿಮವಾಗಿ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಶೇ. 12.50ರಷ್ಟು ವೇತನ ಹೆಚ್ಚಳಕ್ಕೆ ಮುಖ್ಯಮಂತ್ರಿ ಅವರನ್ನು ಒಪ್ಪಿಸಿದ್ದರು.

ಅದರ ಆಧಾರದ ಮೇಲೆ 2025ರ ಏ. 1ರಿಂದ ಅನ್ವಯವಾಗುವಂತೆ ನಾಲ್ಕೂ ನಿಗಮಗಳ ನೌಕರರಿಗೆ ಶೇ. 12.50ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಮಂಗಳವಾರ ಆದೇಶಿಸಿದೆ. ಈ ಪರಿಷ್ಕೃತ ವೇತನವನ್ನು ಜುಲೈ ತಿಂಗಳ ವೇತನದಲ್ಲಿ ನೌಕರರಿಗೆ ಪಾವತಿಸಲಾಗುತ್ತದೆ. 2025ರ ಏ. 1ರಿಂದ 2026ರ ಜೂ. 30ರವರೆಗಿನ ವೇತನ ಹೆಚ್ಚಳ ಹಿಂಬಾಕಿಯನ್ನು ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನಾಧರಿಸಿ ಹಂತಹಂತವಾಗಿ ಪಾವತಿಸುವುದಾಗಿ ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ವಾರ್ಷಿಕ 873.64 ಕೋಟಿ ರು. ಹೊರೆ:

ರಾಜ್ಯ ಸರ್ಕಾರದ ಆದೇಶದಂತೆ ಒಟ್ಟಾರೆ 1.5 ಲಕ್ಷ ಸಿಬ್ಬಂದಿಗೆ ವೇತನ ಪರಿಷ್ಕರಣೆಯಾಗಲಿದೆ. ಇನ್ನು, ಸಾರಿಗೆ ನೌಕರರಿಗೆ ಶೇ. 12.50ರಷ್ಟು ವೇತನ ಹೆಚ್ಚಳದಿಂದಾಗಿ ನಾಲ್ಕೂ ಸಾರಿಗೆ ನಿಗಮಗಳಿಗೆ ಮಾಸಿಕ 72.80 ಕೋಟಿ ರು. ಹಾಗೂ ವಾರ್ಷಿಕ 873.64 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ.

ಸಂಘಟನೆಗಳ ವಿರೋಧ

ರಾಜ್ಯ ಸರ್ಕಾರ ಶೇ. 12.50ರಷ್ಟು ವೇತನ ಹೆಚ್ಚಳ ಮಾಡಿದ್ದನ್ನು ಸಾರಿಗೆ ನೌಕರ ಸಂಘಟನೆಗಳು ವಿರೋಧಿಸಿವೆ. 2024ರ ಜ.1ರಿಂದ ಅನ್ವಯವಾಗುವಂತೆ ಶೇ. 25ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸಲಾಗಿತ್ತು. ಆದರೆ, ಸರ್ಕಾರ ನಮ್ಮೊಂದಿಗೆ ಚರ್ಚೆ ನಡೆಸದೆಯೇ 2025ರ ಏ.1ರಿಂದ ಅನ್ವಯವಾಗುವಂತೆ ಶೇ. 12.50ರಷ್ಟು ವೇತನ ಹೆಚ್ಚಳ ಮಾಡಿದೆ. ಇದರಿಂದ ಸಾರಿಗೆ ನೌಕರರಿಗೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರದ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ. ಸರ್ಕಾರ ತನ್ನ ಆದೇಶದಲ್ಲಿ ಬದಲಾವಣೆ ಮಾಡಿ ಶೇ. 25ರಷ್ಟು ವೇತನ ಹೆಚ್ಚಳದ ಪರಿಷ್ಕೃತ ಆದೇಶ ಹೊರಡಿಸಿದರೆ ಮಾತ್ರ ಮುಷ್ಕರದಿಂದ ಹಿಂದೆ ಸರಿಯಲಾಗುವುದು ಎಂದು ತಿಳಿಸಿವೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮೋದಿ ಆಗಮನಕ್ಕೆ ಆತಂಕಸೃಷ್ಟಿಸಲು ಶಂಕಿತರಿಂದ ಕೃತ್ಯ
ಯುವಜನತೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಲು ಮಂಜು ಸಲಹೆ