;Resize=(412,232))
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ರಾಜ್ಯದಲ್ಲಿ ಶಾಸಕರ ಶಿಫಾರಸು ಪತ್ರಗಳಿಲ್ಲದೆ (ಮಿನಿಟ್) ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಮಾದರಿಯಲ್ಲೇ ಪೊಲೀಸ್ ಇಲಾಖೆಯಲ್ಲೂ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಗೃಹ ಇಲಾಖೆ ಗಂಭೀರ ಚಿಂತನೆ ಆರಂಭಿಸಿದೆ.
ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ವರ್ಗಾವಣೆ ವ್ಯವಸ್ಥೆ ಸುಧಾರಣೆ ಬಗ್ಗೆ ನೂತನ ಗೃಹ ಸಚಿವ ಪ್ರಿಯಾಂಕ ಖರ್ಗೆ ಚರ್ಚಿಸಿದ್ದು, ಹೊಸ ನೀತಿ ರೂಪಿಸಲು ಇರುವ ತಾಂತ್ರಿಕ ತೊಡಕು ನಿವಾರಣೆ ಬಗ್ಗೆ ಅವರು ಅಭಿಪ್ರಾಯ ಪಡೆದಿದ್ದಾರೆ ಎನ್ನಲಾಗಿದೆ.
ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಮುಂದಾದರೆ ಆಡಳಿತಾತ್ಮಕವಾಗಿ ಮಾತ್ರವಲ್ಲ ರಾಜಕೀಯ ವಲಯದಲ್ಲಿ ಕೂಡ ಭಾರಿ ಸಂಚಲನ ಆಗುವ ಸಾಧ್ಯತೆಗಳಿವೆ. ಈ ಬಗ್ಗೆ ಅರಿತಿರುವ ಸಚಿವರು, ಪೊಲೀಸರ ವರ್ಗಾವಣೆ ವಿಷಯದಲ್ಲಿ ಸ್ವಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವ್ಯವಸ್ಥೆ ರೂಪಿಸಲು ಯೋಜಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
2011ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯದಲ್ಲಿ ಪೊಲೀಸ್ ವರ್ಗಾವಣೆ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್ (ಪಿಇಬಿ) ರಚಿಸಲಾಗಿದೆ. ಆದರೆ, ಆಡಳಿತ ಪಕ್ಷದ ಶಿಫಾರಸಿಗೆ ಠಸ್ಸೆ ಒತ್ತುವುದಕ್ಕೆ ಮಾತ್ರ ಮಂಡಳಿ ಇದೆ ಎಂಬ ಆರೋಪವಿದೆ.
ಹೀಗಾಗಿ ವರ್ಗಾವಣೆ ವಿಚಾರ ಸ್ವತಂತ್ರ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ರೂಪಿಸುವ ಬಗ್ಗೆ ಒತ್ತಾಯವಿದೆ. ಅದರಲ್ಲೂ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್ಪಿ-ಎಸಿಪಿಗಳ ವರ್ಗಾವಣೆಗೆ ವಿಪರೀತ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಇತ್ತೀಚಿಗೆ 9 ತಿಂಗಳ ಹಗ್ಗಾಜಗ್ಗಾಟದ ಬಳಿಕ ಪಿಐ ಹಾಗೂ ಡಿವೈಎಸ್ಪಿಗಳ ಸಾಮೂಹಿಕ ವರ್ಗಾವಣೆ ಉದಾಹರಣೆಯಾಗಿದೆ. ಹೀಗಾಗಿ ರಾಜಕೀಯ ಶಿಫಾರಸುಗಳಿಲ್ಲದೆ ವರ್ಗಾವಣೆಗೆ ಅರ್ಹತೆ ಮಾನದಂಡವಾಗಿಸುವ ಸಲುವಾಗಿ ಕೌನ್ಸೆಲಿಂಗ್ ವ್ಯವಸ್ಥೆಗೆ ಗೃಹ ಸಚಿವ ಪ್ರಿಯಾಂಕ ಖರ್ಗೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಸುತ್ತ ಬೆಂಗಳೂರು ಕಮೀಷನರೇಟ್ ಸೇರಿದಂತೆ ಕೆಲ ವಲಯ ಮತ್ತು ಕಮೀಷನರ್ ಮಟ್ಟದಲ್ಲಿ ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನ್‌ಸ್ಟೇಬಲ್‌ಗಳ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಅದೇ ರೀತಿ ಪಿಡಿಓ ಹಾಗೂ ಶಿಕ್ಷಕರ ಮಾದರಿಯಲ್ಲೇ ರಾಜ್ಯ ಮಟ್ಟದಲ್ಲಿ ಪೊಲೀಸ್ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ಬಗ್ಗೆ ಇಲಾಖೆ ಮುಂದಾಗಿದೆ.
ಹಲವು ವರ್ಷಗಳಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಿಓಡಿ ವರ್ಗಾವಣೆ ದೊಡ್ಡ ತಲೆ ನೋವಾಗಿತ್ತು. ಅಲ್ಲೂ ಸಹ ರಾಜಕಾರಣಿಗಳ ಹಸ್ತಕ್ಷೇಪವು ವರ್ಗಾವಣೆ ಮೇಲೆ ಪರಿಣಾಮ ಬೀರಿತ್ತು. ಆದರೆ ತಮ್ಮ ಪಕ್ಷದ ಶಾಸಕರ ವಿರೋಧವನ್ನು ಲೆಕ್ಕಿಸದೆ ಪಿಡಿಓಗಳ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅನುಷ್ಠಾನಗೊಳಿಸಿದ್ದರು. ಅದೇ ಮಾದರಿಯಲ್ಲೇ ಪೊಲೀಸರ ವರ್ಗಾವಣೆ ಸುಧಾರಣೆಗೆ ಚಿಂತಿಸಿದ್ದಾರೆ ಎನ್ನಲಾಗಿದೆ.
ಪಿಇಬಿ ಕಾಯ್ದೆ ತಿದ್ದುಪಡಿ ಸಾಧ್ಯತೆ?
ಪೊಲೀಸರ ವರ್ಗಾವಣೆ ಸಲುವಾಗಿ ಪಿಇಬಿ ಕಾಯ್ದೆಗೆ ತಿದ್ದುಪಡಿ ತರಬಹುದು. ಪ್ರಸುತ್ತ ಪಿಐ ಹಾಗೂ ಎಸಿಪಿಗಳಿಗೆ ಎರಡು ವರ್ಷಗಳ ಆಡಳಿತಾವಧಿ ನಿಗದಿಪಡಿಸಲಾಗಿದೆ. ಹೊಸ ನೀತಿ ಜಾರಿಗೆ ಮುನ್ನ ಪಿಇಬಿ ಕಾಯ್ದೆ ಪರಿಷ್ಕರಣೆ ಮಾಡಬಹುದು ಎಂದು ತಿಳಿದು ಬಂದಿದೆ.
ಹೊಸ ನೀತಿಗೆ ಶಾಸಕರು ಒಪ್ಪುವರೇ?
ಪೊಲೀಸರ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ಶಾಸಕರು ಸಮ್ಮತಿಸುವವರೇ ಎಂದು ಪ್ರಶ್ನೆ ಮೂಡಿದೆ. ತಮ್ಮ ಕ್ಷೇತ್ರಗಳಿಗೆ ಪಿಎಸ್‌ಐ, ಪಿಐ ಹಾಗೂ ಡಿವೈಎಸ್ಪಿ-ಎಸಿಪಿಗಳ ಆಯ್ಕೆಯಲ್ಲಿ ಆಡಳಿತ ಪಕ್ಷದ ಶಾಸಕರ ಶಿಫಾರಸಿಗೆ ಇಲಾಖೆ ಮನ್ನಣೆ ನೀಡುತ್ತಿದೆ. ಅಲ್ಲದೆ ತಮಗೆ ಬೇಕಾದ ಪೊಲೀಸ್ ಅಧಿಕಾರಿಗಳಿದ್ದರೆ ರಾಜಕೀಯವಾಗಿ ಬಲ ಎಂಬುದು ಶಾಸಕರ ನಂಬಿಕೆಯಾಗಿದೆ. ಹೀಗಾಗಿ ಹೊಸ ನೀತಿಗೆ ಶಾಸಕರು ಒಪ್ಪುವರೇ ಎಂಬ ಮಾತು ಕೇಳಿ ಬಂದಿದೆ.