ಸರ್ಕಾರದ ನಿರ್ಧಾರಗಳ ಫೈನಲ್‌ಗೆ ರಾಜಕೀಯ ವ್ಯವಹಾರಗಳ ಸಮಿತಿ

Published : Jun 27, 2026, 07:31 AM IST
vidhan soudha

ಸಾರಾಂಶ

ಇಡೀ ರಾಜ್ಯ ಸರ್ಕಾರದ ಮೇಲೆ ಜನಾಭಿಪ್ರಾಯ ಸೃಷ್ಟಿಸುವಂಥ ನೀತಿ, ನಿರ್ಧಾರಗಳನ್ನು ಇಲಾಖೆ ಮಟ್ಟದ ಬದಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಜಾರಿಗೆ ತರುವ ಉದ್ದೇಶದಿಂದ ‘ರಾಜಕೀಯ ವ್ಯವಹಾರಗಳ ಸಮಿತಿ’ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

 ಬೆಂಗಳೂರು :  ಇಡೀ ರಾಜ್ಯ ಸರ್ಕಾರದ ಮೇಲೆ ಜನಾಭಿಪ್ರಾಯ ಸೃಷ್ಟಿಸುವಂಥ ನೀತಿ, ನಿರ್ಧಾರಗಳನ್ನು ಇಲಾಖೆ ಮಟ್ಟದ ಬದಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಜಾರಿಗೆ ತರುವ ಉದ್ದೇಶದಿಂದ ‘ರಾಜಕೀಯ ವ್ಯವಹಾರಗಳ ಸಮಿತಿ’ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಹಿಂದೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ಬಳಿಕ ಸರ್ಕಾರ ತೀರ್ಮಾನಿಸುತ್ತಿತ್ತು. ಇತ್ತೀಚೆಗೆ ಇದು ಬದಲಾಗಿ ಇಲಾಖೆ ಮಟ್ಟದಲ್ಲೇ ಪ್ರಮುಖ ತೀರ್ಮಾನಗಳು ನಡೆದಿದ್ದವು.

ಸಚಿವರು ಮಹತ್ವದ ತೀರ್ಮಾನಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸದೆ ಕೈಗೊಳ್ಳುತ್ತಿರುವ ಪರಿಪಾಠ ಇತ್ತೀಚೆಗೆ ಬೆಳೆದಿದೆ. ಇಂಥ ತೀರ್ಮಾನಗಳಿಂದ ಇಡೀ ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂಬ ಭಾವನೆ ಹಿನ್ನೆಲೆಯಲ್ಲಿ, ಇನ್ನು ಮುಂದೆ ಯಾವುದೇ ಮಹತ್ವದ ತೀರ್ಮಾನವನ್ನು ಸಚಿವರು ಏಕಾಏಕಿ ಕೈಗೊಳ್ಳುವಂತಿಲ್ಲ.

ಬದಲಾಗಿ, ರಾಜಕೀಯ ವ್ಯವಹಾರಗಳ ಸಮಿತಿ ಮುಂದೆ ಇಂಥ ವಿಚಾರಗಳನ್ನು ತಂದು ಕೂಲಂಕಷವಾಗಿ ಚರ್ಚಿಸಿ ನಂತರ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂಬ ಉದ್ದೇಶದಿಂದ ಈ ಸಮಿತಿ ರಚನೆಗೆ ಸರ್ಕಾರ ಮುಂದಾಗಿದೆ.

ಕಾರ್ಮಿಕ ಇಲಾಖೆ ತೀರ್ಮಾನ ಪುನರ್ ಪರಿಶೀಲನೆ:

ಈ ಹಿಂದೆ ಕಾರ್ಮಿಕ ಇಲಾಖೆ ಕನಿಷ್ಠ ವೇತನವನ್ನು ಶೇ.70 ರಷ್ಟು ಹೆಚ್ಚಳ ಮಾಡಿ ತೀರ್ಮಾನಿಸಿತ್ತು. ಇದರಿಂದ ಔದ್ಯಮಿಕ ವಲಯಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಸರ್ಕಾರಕ್ಕೂ ಅನಾನುಕೂಲ ಉಂಟಾಗಿದೆ. ಹೀಗಾಗಿ ಇಂತಹ ತೀರ್ಮಾನಗಳನ್ನು ಮಾಡುವ ಮೊದಲು ಚರ್ಚಿಸಲು ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಮಿಕ ಇಲಾಖೆಯ ಈ ತೀರ್ಮಾನದಂತೆ ಇನ್ನೂ ಕೆಲ ಇಲಾಖೆಗಳಲ್ಲಿ ಸಚಿವರೇ ತೀರ್ಮಾನ ಮಾಡಿರುವ ನೀತಿಗಳನ್ನು ಪುನರ್‌ ಪರಿಶೀಲಿಸಲು ಸಾಧ್ಯವೇ ಎಂದೂ ಸಹ ಸರ್ಕಾರ ಚಿಂತನೆ ನಡೆಸಿದೆ.

ಯಾಕೆ ಸಮಿತಿ ರಚನೆ?

- ಹಿಂದೆ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಕಾಂಗ್ರೆಸ್‌ ಸಿಎಲ್ಪಿ ಸಭೆಯಲ್ಲಿ ಚರ್ಚಿಸಿ ಬಳಿಕ ಸರ್ಕಾರ ತೀರ್ಮಾನಿಸುತ್ತಿತ್ತು.

- ಇತ್ತೀಚೆಗೆ ಆಯಾ ಇಲಾಖೆ ಮಟ್ಟದಲ್ಲೇ ಪ್ರಮುಖ ತೀರ್ಮಾನಗಳು ನಡೆದಿದ್ದವು. ಸಚಿವರೇ ಪ್ರಮುಖ ನಿರ್ಧಾರ ಕೈಗೊಳ್ಳುತ್ತಿದ್ದರು.

- ಇಂಥ ತೀರ್ಮಾನಗಳಿಂದ ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂಬ ಭಾವನೆ ಹಿನ್ನೆಲೆಯಲ್ಲಿ ಈ ಕ್ರಮ

- ಹಿಂದೆ ಕಾರ್ಮಿಕ ಇಲಾಖೆ ಕನಿಷ್ಠ ವೇತನ ಶೇ.70 ರಷ್ಟು ಹೆಚ್ಚಿಸಿತ್ತು. ಇದರಿಂದ ಔದ್ಯಮಿಕ ವಲಯಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಸರ್ಕಾರಕ್ಕೂ ಸಮಸ್ಯೆ ಆಗಿತ್ತು.

- ಇಂತಹ ತೀರ್ಮಾನಗಳನ್ನು ಕೈಗೊಳ್ಳುವ ಮೊದಲು ಚರ್ಚೆ ನಡೆಸಲೆಂದೇ ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೆ ನಿರ್ಧಾರ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಓಮಿನಿ ಹಿಂಬದಿ ಬಾಗಿಲು ತೆರೆದು ಕೆಳಗೆ ಬಿದ್ದ ನಾಲ್ಕು ವಿದ್ಯಾರ್ಥಿಗಳು
ಒಣಗಿದ ಮರದ ಕೊಂಬೆ ತಲೆಗೆ ಬಿದ್ದು ಬೈಕ್‌ ಸವಾರ ಐಸಿಯುಗೆ ದಾಖಲು