;Resize=(412,232))
ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದದ ಸಹಶಿಕ್ಷಕರಿಗೆ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಾಲನೆ ನೀಡಿದೆ. ಜನವರಿ 1, 2026 ರಲ್ಲಿದ್ದಂತೆ ಸಿದ್ಧಪಡಿಸಲಾದ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ಬಡ್ತಿ ನೀಡಲಾಗುತ್ತದೆ.
ಅಂಗವಿಕಲ ಅಭ್ಯರ್ಥಿಗಳಿಗೆ ನಿಯಮಾನುಸಾರ ಶೇ.4ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣಪತ್ರ ಅಥವಾ ಯುಡಿಐಡಿ ಕಾರ್ಡ್ ಸಲ್ಲಿಸುವುದು ಕಡ್ಡಾಯ. ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಅರ್ಹ ಅಂಗವಿಕಲ ಅಭ್ಯರ್ಥಿಗಳಿಗೆ ಜೇಷ್ಠತೆ ಆಧಾರದ ಮೇಲೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಾಲ್ಕರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಬಡ್ತಿ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳಾಗದಂತೆ ಆಯಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಎಚ್ಚರಿಕೆ ವಹಿಸಬೇಕು. ಯಾವುದೇ ತಪ್ಪುಗಳಾದಲ್ಲಿ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಬಡ್ತಿ ಪಡೆಯಲು ಇಚ್ಛಿಸದ ಅಥವಾ ಮುಂದೂಡಲು ಬಯಸುವ ಶಿಕ್ಷಕರು ಕಡ್ಡಾಯವಾಗಿ ಮುಚ್ಚಳಿಕೆ ಪತ್ರ ನೀಡಬೇಕಾಗುತ್ತದೆ. ಸುಳ್ಳು ದಾಖಲೆಗಳನ್ನು ನೀಡಿ ಬಡ್ತಿ ಪಡೆದರೆ ಅಂತಹ ಶಿಕ್ಷಕರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಿ ಬಡ್ತಿಯನ್ನು ರದ್ದುಗೊಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.