3 ದಿನದಲ್ಲಿ 60 ಸ್ಟಾರ್‌ ಹೋಟೆಲ್‌ಗಳ ಮೇಲೆ ದಾಳಿ : 640 ಕೇಜಿ ಆಹಾರ ಜಪ್ತಿ

Published : Aug 11, 2026, 08:20 AM IST
bengaluru five star hotels raid

ಸಾರಾಂಶ

ಜಿಬಿಎ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ನಡೆದ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ವೇಳೆ 3 ಸ್ಟಾರ್‌ ಹಾಗೂ 5 ಸ್ಟಾರ್‌ನ 60 ಐಷಾರಾಮಿ ಹೋಟೆಲ್‌ಗಳ ಪರಿಶೀಲನೆ ನಡೆಸಿದ್ದು, 640 ಕೆ.ಜಿಗೂ ಹೆಚ್ಚು ಮಾಂಸ ಸೇರಿದಂತೆ ನೂರಾರು ಕೆ.ಜಿ. ಆಹಾರ ಜಪ್ತಿ ಮಾಡಲಾಗಿದೆ.

ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ನಡೆದ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ವೇಳೆ 3 ಸ್ಟಾರ್‌ ಹಾಗೂ 5 ಸ್ಟಾರ್‌ನ 60 ಐಷಾರಾಮಿ ಹೋಟೆಲ್‌ಗಳ ಪರಿಶೀಲನೆ ನಡೆಸಿದ್ದು, 640 ಕೆ.ಜಿಗೂ ಹೆಚ್ಚು ಮಾಂಸ ಸೇರಿದಂತೆ ನೂರಾರು ಕೆ.ಜಿ. ಆಹಾರ ಜಪ್ತಿ ಮಾಡಲಾಗಿದೆ.

ಪರಿಶೀಲನೆ ವೇಳೆ ಸ್ವಚ್ಛತೆ ಲೋಪ ಹಾಗೂ ನಿಯಮಗಳ ಉಲ್ಲಂಘನೆ ಹಿನ್ನೆಲೆ ಯುಬಿ ಸಿಟಿಯ ಸ್ಕೈ ಸಿಟಿ, ಪೆಗ್ಸ್‌ ಅಂಡ್‌ ಬಾಟಲ್ಸ್‌ ಕಿಚನ್‌ಗಳನ್ನು ಸೀಜ್‌ ಮಾಡಲಾಗಿದೆ. ಬ್ರಿಗೇಡ್‌ ರಸ್ತೆಯಲ್ಲಿರುವ ಮೆಕ್‌ಡೊನಾಲ್ಡ್ ಘಟಕದಲ್ಲಿ ಕರಿದ ಎಣ್ಣೆಯ ಸಂಸ್ಕರಣೆಗೆ ಮೆಗ್ನ್ಯಾಷಿಯಂ ಸಲ್ಫೈಟ್‌ (ಎಂಜಿಎಸ್‌03) ಬಳಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ಆಹಾರ ಉದ್ದಿಮೆಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೂರಾರು ಕೆ.ಜಿ. ಆಹಾರ ವಶ:

30ಕ್ಕೂ ಹೆಚ್ಚು ತಂಡಗಳು ಆ.7, 8 ಹಾಗೂ 9 ರಂದು ಮೂರು ದಿನಗಳ ಕಾಲ ನಡೆಸಿದ ದಾಳಿಯಲ್ಲಿ 640 ಕೆ.ಜಿ. ಮಾಂಸ, 276 ಕೆ.ಜಿ. ತರಕಾರಿ, 45 ಲೀಟರ್‌ ಹಾಲು, 12 ಕೆ.ಜಿ. ಬೇಕರಿ ಉತ್ಪನ್ನ, 67 ಕೆ.ಜಿ. ಇತರೆ ಆಹಾರ ಪದಾರ್ಥ, 49 ಲೀಟರ್‌ ಬಳಕೆ ಮಾಡಿದ ಅಡುಗೆ ಎಣ್ಣೆ ವಶಪಡಿಸಿಕೊಳ್ಳಲಾಗಿದೆ. ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪ್ರಯೋಗಾಲಯದ ವರದಿ ಆಧಾರದ ಮೇಲೆ ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲ್‌ಗಳ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಹೋಟೆಲ್‌ ಹಾಗೂ ಆಹಾರ ತಯಾರಿಕಾ ಸ್ಥಳಗಳ ಮೇಲೆ ವಿಶೇಷ ಕಾರ್ಯಾಚರಣೆಗಳು ಮುಂದುವರೆಯಲಿವೆ ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.

ನಕಲಿ ಕಾಸ್ಮೆಟಿಕ್ಸ್‌ಗಳ ಪರಿಶೀಲನೆ

ಆಹಾರ ಸುರಕ್ಷತಾ ಮತ್ತು ಡ್ರಗ್ಸ್‌ ನಿಯಂತ್ರಣ ಅಧಿಕಾರಿಗಳು ಸ್ಟಾರ್‌ ಹೋಟೆಲ್‌ಗಳ ಮೇಲೆ ದಾಳಿ ನಡೆಸುವ ಜತೆಗೆ ಕಳಪೆ ಹಾಗೂ ನಕಲಿ ಸೌಂದರ್ಯ ವರ್ಧಕಗಳ ಪತ್ತೆಗೂ ಕಾರ್ಯಾಚರಣೆ ಶುರು ಮಾಡಿದೆ. ರಾಜ್ಯದ ವಿವಿದೆಡೆ ಡ್ರಗ್ಸ್‌ ನಿಯಂತ್ರಣ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು 10ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದು, ಲಿಪ್‌ಸ್ಟಿಕ್, ಪೌಡರ್, ಫೇಶಿಯಲ್ ಕ್ರೀಮ್ ಮತ್ತು ಸ್ಕಿನ್ ಸೆರಮ್‌ಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.

ಕೆಲವು ಸೌಂದರ್ಯವರ್ಧಕ ಹಾಗೂ ಲಿಪ್‌ಸ್ಟಿಕ್ ಮಾದರಿಗಳಲ್ಲಿ ಕ್ಯಾನ್ಸರ್‌ಕಾರಕ (ಕಾರ್ಸಿನೋಜೆನಿಕ್) ಮತ್ತು ಹಾನಿಕಾರಕ ಲೋಹದ ಅಂಶಗಳು ಪತ್ತೆಯಾಗಿವೆ. ಜತೆಗೆ ಕಾಸ್ಮೆಟಿಕ್ಸ್‌ ಹೆಸರಿನಲ್ಲಿ ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ ದೂರುಗಳು ಬಂದಿವೆ. ಹೀಗಾಗಿ ವಿವಿದೆಡೆ ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯಲ್ಲಿ ಕಳಪೆ ಅಥವಾ ನಕಲಿ ಉತ್ಪನ್ನಗಳ ಮಾರಾಟ ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತೆ ಮತ್ತು ಡ್ರಗ್ಸ್‌ ನಿಯಂತ್ರಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪ್ರಮುಖ ಕೈಗಾರಿಕಾ ಕಾರಿಡಾರ್‌ನ 7 ಕಿ.ಮೀ ರಸ್ತೆಯಲ್ಲಿ 350 ಗುಂಡಿ : ಕಿರಣ್ ಮಜುಮ್ದಾರ್
ಬೆಂಗಳೂರು : ಸೈಟ್ ಮಾಲೀಕರಿಗೆ ಜಿಬಿಎ ಶಾಕ್