ತವರಲ್ಲಿ ಇಂದಾದ್ರೂ ಗೆಲ್ಲುತ್ತಾ ಆರ್‌ಸಿಬಿ.. ? - ತವರಿನಲ್ಲಿ ಸತತ 3 ಪಂದ್ಯ ಸೋತಿರುವ ಆರ್‌ಸಿಬಿ

Published : Apr 24, 2025, 12:16 PM IST
PBKS vs RCB IPL 2025

ಸಾರಾಂಶ

ತವರಿನಲ್ಲಿ ಜಯದ ಸಿಹಿ ಸವಿಯಲು ಹಪಹಪಿಸುತ್ತಿರುವ ಆರ್‌ಸಿಬಿ, ಗುರುವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಲಿದೆ.

 ಬೆಂಗಳೂರು :  ತವರಿನಲ್ಲಿ ಜಯದ ಸಿಹಿ ಸವಿಯಲು ಹಪಹಪಿಸುತ್ತಿರುವ ಆರ್‌ಸಿಬಿ, ಗುರುವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಲಿದೆ. ಲಯ ಕಳೆದುಕೊಂಡು ಪರದಾಡುತ್ತಿರುವ ರಾಜಸ್ಥಾನವನ್ನು ಬಗ್ಗುಬಡಿದು, ಚಿನ್ನಸ್ವಾಮಿ ಮೊದಲ ಜಯ ಸಾಧಿಸುವ ಮೂಲಕ ಒಟ್ಟಾರೆ 6ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರ-3ರಲ್ಲೇ ಉಳಿಯುವುದು ಆರ್‌ಸಿಬಿ ಮುಂದಿರುವ ಗುರಿ.

ಪ್ಲೇ-ಆಫ್‌ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಳ್ಳುತ್ತಿರುವ ಹೊತ್ತಲ್ಲಿ, ಪ್ರತಿ ಅಂಕವೂ ನಿರ್ಣಾಯಕವೆನಿಸಲಿದ್ದು, ತವರಿನಲ್ಲಿ ಗೆಲುವು ಸಾಧಿಸಿದರೆ ಸಹಜವಾಗಿಯೇ ತಂಡದ ಆತ್ಮವಿಶ್ವಾಸ ವೃದ್ಧಿಸಲಿದೆ.

ಕೋಲ್ಕತಾ, ಚೆನ್ನೈ, ಮುಂಬೈ, ಜೈಪುರ, ಚಂಡೀಗಢಗಳಲ್ಲಿ ಅಮೋಘ ಗೆಲುವು ಸಾಧಿಸಿರುವ ಆರ್‌ಸಿಬಿ, ಚಿನ್ನಸ್ವಾಮಿ ಅಂಗಳದಲ್ಲಿ ಕಳಪೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪ್ರದರ್ಶನ ತೋರಿದೆ. ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡಿದರೆ, ಬೌಲರ್‌ಗಳು ಸರಿಯಾದ ಲೈನ್‌ ಹಾಗೂ ಲೆಂಥ್‌ನೊಂದಿಗೆ ಬೌಲ್‌ ಮಾಡಲು ಕಷ್ಟ ಪಡುತ್ತಿದ್ದಾರೆ.

ಬ್ಯಾಟರ್‌ಗಳ ಸ್ವರ್ಗ ಎಂದೇ ಕರೆಯಲ್ಪಡುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರ್ಷ ಆಡಿರುವ ಮೂರೂ ಪಂದ್ಯಗಳಲ್ಲಿ ಆರ್‌ಸಿಬಿ ಮೊದಲು ಬ್ಯಾಟ್‌ ಮಾಡಿ ಕ್ರಮವಾಗಿ 169/8, 163/7, 95/9(14 ಓವರ್‌) ಮೊತ್ತ ದಾಖಲಿಸಿದೆ. ತವರಿನಾಚೆ 9-10 ರನ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಆರ್‌ಸಿಬಿಯ ರನ್‌ ರೇಟ್‌ ತವರಿನಲ್ಲಿ 7-8 ಅಷ್ಟೇ ಇದೆ.

ಬ್ಯಾಟಿಂಗ್‌ ಆಧಾರಸ್ತಂಭ ವಿರಾಟ್‌ ಕೊಹ್ಲಿ ಈ ವರ್ಷ ತೃಪ್ತಿಕರ ಲಯದಲ್ಲಿದ್ದು, 64ರ ಸರಾಸರಿ ಹೊಂದಿದ್ದಾರೆ. ಆದರೆ, ಫಿಲ್‌ ಸಾಲ್ಟ್‌, ದೇವದತ್‌ ಪಡಿಕ್ಕಲ್‌ ಹಾಗೂ ರಜತ್‌ ಪಾಟೀದರ್‌ ತಮ್ಮ ಆಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕಿದೆ.

ಪಿಚ್‌ನಲ್ಲಿನ ಅಸ್ಥಿರ ಬೌನ್ಸ್‌ ಪವರ್‌-ಪ್ಲೇ ಬಳಿಕ ಆರ್‌ಸಿಬಿ ಬ್ಯಾಟರ್‌ಗಳನ್ನು ನಿಯಂತ್ರಿಸುತ್ತಿದ್ದು, ರಾಜಸ್ಥಾನ ವಿರುದ್ಧ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸದಲ್ಲಿದೆ ತಂಡ. ಇನ್ನು ಭುವನೇಶ್ವರ್‌ ಕುಮಾರ್‌, ಜೋಶ್‌ ಹೇಜಲ್‌ವುಡ್‌, ಸುಯಶ್‌ ಶರ್ಮಾ ಮೇಲೆ ಬೌಲಿಂಗ್‌ ಜವಾಬ್ದಾರಿ ಇದೆ.

ಸಮಸ್ಯೆ ಸುಳಿಯಲ್ಲಿ ಆರ್‌ಆರ್‌: ರಾಜಸ್ಥಾನ ರಾಯಲ್ಸ್‌ನ ಡ್ರೆಸ್ಸಿಂಗ್‌ ರೂಂ ಸಮಸ್ಯೆಗಳ ಆಗರವಾಗಿದ್ದು, ತಂಡ ಸಂಕಷ್ಟದಲ್ಲಿದೆ. ಸಂಜು ಸ್ಯಾಮ್ಸನ್‌ ಗಾಯಗೊಂಡಿದ್ದು, ಈ ಪಂದ್ಯದಲ್ಲಿ ಆಡುವುದಿಲ್ಲ. ರಿಯಾನ್‌ ಪರಾಗ್‌ ತಂಡವನ್ನು ಮುನ್ನಡೆಸಲಿದ್ದು, ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆಯುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ತಂಡ ಬಾಕಿ ಇರುವ 6 ಪಂದ್ಯಗಳಲ್ಲಿ ಕನಿಷ್ಠ 5ರಲ್ಲಾದರೂ ಗೆಲ್ಲಲೇಬೇಕು. ಹೀಗಾಗಿ, ಭಾರೀ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ.

ಕಳೆದ ಪಂದ್ಯದಲ್ಲಿ ಐಪಿಎಲ್‌ಗೆ ಕಾಲಿಟ್ಟ 14 ವರ್ಷದ ವೈಭವ್‌ ಸೂರ್ಯವಂಶಿ ಮೇಲೆ ಬೆಂಗಳೂರಿನ ಕ್ರಿಕೆಟ್‌ ಅಭಿಮಾನಿಗಳು ಕಣ್ಣಿಡಲಿದ್ದಾರೆ.

ಮೊದಲ ಮುಖಾಮುಖಿ ಗೆದ್ದಿದ್ದ ಆರ್‌ಸಿಬಿ ತಂಡ

ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವೆ ಈ ಆವೃತ್ತಿಯಲ್ಲಿ ಇದು 2ನೇ ಮುಖಾಮುಖಿ. ಏ.13ರಂದು ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ರಾಜಸ್ಥಾನ ನೀಡಿದ್ದ 174 ರನ್‌ ಗುರಿಯನ್ನು ಇನ್ನೂ 15 ಎಸೆತ ಬಾಕಿ ಇರುವಂತೆಯೇ ತಲುಪಿತ್ತು. ಸಾಲ್ಟ್ 65, ಕೊಹ್ಲಿ ಔಟಾಗದೆ 62, ಪಡಿಕ್ಕಲ್‌ ಔಟಾಗದೆ 40 ರನ್‌ ಸಿಡಿಸಿದ್ದರು.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌