;Resize=(412,232))
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ತಮ್ಮ ನಂಬಿಕಸ್ಥನಿಂದಾದ ವಿಶ್ವಾಸದ್ರೋಹದ ನೋವು, ಆದಾಯ ತೆರಿಗೆ ಇಲಾಖೆ (ಐಟಿ)ಗೆ ಆದಾಯದ ಮೂಲಗಳ ಕುರಿತು ಲೆಕ್ಕ ಒಪ್ಪಿಸಲು ಎದುರಾದ ಮಾನಸಿಕ ಒತ್ತಡ ಖ್ಯಾತ ಉದ್ಯಮಿ ಸಿ.ಜೋಸೆಫ್ ರಾಯ್ ಅವರ ಆತ್ಮ*ತ್ಯೆಗೆ ಪ್ರಮುಖ ಕಾರಣ ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಉದ್ಯಮಿ ಸಿ.ಜೆ.ರಾಯ್ ಆತ್ಮ*ತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಎಸ್‌ಐಟಿ, ಇನ್ನೆರಡು ದಿನಗಳಲ್ಲಿ ಮ್ಯಾಜಿಸ್ಟ್ರೇಟ್‌ಗೆ ಅಂತಿಮ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. ತನ್ನ ತನಿಖಾ ವರದಿಯಲ್ಲಿ ರಾಯ್ ಅವರಿಗೆ ಆಪ್ತನಿಂದಾದ ವಿಶ್ವಾಸ ದ್ರೋಹ ಹಾಗೂ ಅವರ ಮಾನಸಿಕ ಕಾಯಿಲೆಗಳ ಕುರಿತು ಉಲ್ಲೇಖ ಮಾಡಲಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಬನ್ನೇರುಘಟ್ಟ ರಸ್ತೆಯಲ್ಲಿರುವ ತಮ್ಮ ಒಡೆತನದ ರೆಸಾರ್ಟ್ ನಿರ್ವಹಣೆ ಹೊಣೆ ಹೊತ್ತಿದ್ದ ನಂಬಿಕಸ್ಥನಿಂದ ಕೋಟ್ಯಂತರ ರು. ನಷ್ಟವಾಯಿತು. ಅಲ್ಲದೆ, ತಮ್ಮ ಮೇಲೆ ಐಟಿ ದಾಳಿ ಬಳಿಕ ಆದಾಯದ ಕುರಿತು ದಾಖಲಾತಿಗಳ ಸಲ್ಲಿಕೆಗೆ ಸೂಕ್ತ ನೆರವು ಸಿಗದೆ ರಾಯ್ ಸಂಕಷ್ಟಕ್ಕೆ ತುತ್ತಾಗಿದ್ದರು. ಈ ಮಾನಸಿಕ ಒತ್ತಡ ಕೆಟ್ಟ ತೀರ್ಮಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ರಾಯ್ ಅವರ ವೈಯಕ್ತಿಕ ಬದುಕು, ಉದ್ಯಮ ಹಾಗೂ ಆರೋಗ್ಯ ಹೀಗೆ ಎಲ್ಲ ಆಯಾಮದಿಂದಲೂ ಎಸ್‌ಐಟಿ ತನಿಖೆ ನಡೆಸಿದೆ. ಮೃತರ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಅವರ ಕಂಪನಿಯ ಅಧಿಕಾರಿ-ಸಿಬ್ಬಂದಿ ಸೇರಿ ಹಲವರನ್ನು ವಿಚಾರಣೆ ನಡೆಸಿದೆ. ಆತ್ಮ*ತ್ಯೆಗೂ ಮುನ್ನ ರಾಯ್ ಅವರ ಮಾನಸಿಕ ಸ್ಥಿತಿಗತಿ ಕುರಿತು ನಿಮ್ಹಾನ್ಸ್ ತಜ್ಞರಿಂದ ಸಹ ಅಭಿಪ್ರಾಯ ಪಡೆದು ವಿಶ್ಲೇಷಿಸಲಾಗಿದೆ. ಇದಾದ ಬಳಿಕ ರಾಯ್ ಅವರ ಆತ್ಮ*ತ್ಯೆ ನಿರ್ಧಾರದ ಹಿಂದೆ ಎರಡು ಪ್ರಮುಖ ಕಾರಣಗಳಿವೆ ಎಂದು ಎಸ್‌ಐಟಿ ನಿರ್ಣಯಿಸಿರುವುದಾಗಿ ವಿಶ್ವಸನೀಯ ಮೂಲಗಳು ಹೇಳಿವೆ.
ಅಂತಾಷ್ಟ್ರೀಯ ಮಟ್ಟದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಪ್ರಸಿದ್ಧರಾಗಿದ್ದ ಕೇರಳ ಮೂಲದ ಸಿ.ಜೆ.ರಾಯ್ ಅವರು ದೇಶ-ವಿದೇಶಗಳಲ್ಲಿ ತಮ್ಮ ಕಾನ್ಫಿಡೆಂಟ್ ಗ್ರೂಪ್ ಹೆಸರಿನ ಉದ್ಯಮ ಸಾಮ್ರಾಜ್ಯ ಕಟ್ಟಿದ್ದರು. ರಿಯಲ್ ಎಸ್ಟೇಟ್ ಮಾತ್ರವಲ್ಲದೆ ಚಲನಚಿತ್ರ ನಿರ್ಮಾಣ ಸೇರಿ ಇತರೆ ಕ್ಷೇತ್ರಗಳಲ್ಲೂ ಬಂಡವಾಳ ಹೂಡಿಕೆ ಮಾಡಿದ್ದರು.
ಆದರೆ, ಇದೇ ವರ್ಷದ ಜ.30 ರಂದು ತಮ್ಮ ಕಂಪನಿಯ ಕಚೇರಿಯಲ್ಲಿ ಗುಂಡಿಟ್ಟುಕೊಂಡು ರಾಯ್ ಆತ್ಮ*ತ್ಯೆ ಮಾಡಿಕೊಂಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದ ಉದ್ಯಮ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸ್ಫೂರ್ತಿದಾಯಕ ಭಾಷಣಗಳು ಹಾಗೂ ರೀಲ್ಸ್‌ಗಳ ಮೂಲಕ ರಾಯ್ ಗಮನ ಸೆಳೆದಿದ್ದರು. ನವೋದ್ಯಮಗಳಿಗೆ ರೋಲ್ ಮಾಡಲ್ ಆಗಿದ್ದ ರಾಯ್ ಆತ್ಮ*ತ್ಯೆ ಶರಣಾಗಿದ್ದು ಚರ್ಚೆ ಹುಟ್ಟುಹಾಕಿತ್ತು.
ಪ್ರಕರಣದ ತನಿಖೆಗೆ ಜಂಟಿ ಪೊಲೀಸ್ ಆಯುಕ್ತ (ಪಶ್ಚಿಮ) ವಂಶಿಕೃಷ್ಣ ಸಾರಥ್ಯದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದರು. ಅಂತೆಯೇ ಏಳು ತಿಂಗಳ ಸುದೀರ್ಘ ಅವಧಿಯಲ್ಲಿ ತನಿಖೆ ನಡೆಸಿದ ಎಸ್‌ಐಟಿ, ಈಗ ತನಿಖೆಗೆ ಶುಭಂ ಹೇಳಿ ಅಂತಿಮ ವರದಿ ಸಲ್ಲಿಸಲು ತಯಾರಿ ನಡೆಸಿದೆ.
ರಾಯ್ ವಿರುದ್ಧವೇ ಠಾಣೆಗೆ ಬಂಟ ದೂರು:
ಬನ್ನೇರುಘಟ್ಟ ರಸ್ತೆಯಲ್ಲಿ ರಾಯ್ ಅವರಿಗೆ ಸೇರಿದ ‘ನೇಚರ್ಸ್ ಲಕ್ಶುರಿ’ ಹೆಸರಿನಲ್ಲಿ 12 ಎಕರೆ ವಿಸ್ತೀರ್ಣದ ರೆಸಾರ್ಟ್ ಇದೆ. ದುಬೈನಲ್ಲಿ ನೆಲೆಸಿದ್ದ ರಾಯ್ ಅವರು, ಹಲವು ವರ್ಷಗಳಿಂದ ಆ ರೆಸಾರ್ಟ್ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ತಮ್ಮ ನಂಬಿಕಸ್ಥನೊಬ್ಬನಿಗೆ ವಹಿಸಿದ್ದರು. ಆದರೆ ಈ ವಿಶ್ವಾಸಕ್ಕೆ ದ್ರೋಹ ಬಗೆದು ರಾಯ್ ಅವರಿಗೆ ಆ ಬಂಟ ಕೋಟ್ಯಂತರ ರು. ವಂಚಿಸಿದ್ದ ಎನ್ನಲಾಗಿದೆ.
ಈ ಸಂಗತಿ ತಿಳಿದು ಆತನನ್ನು ಅವರು ದೂರವಿಟ್ಟಿದ್ದರು. ಈ ವಿವಾದ ಬನ್ನೇರುಘಟ್ಟ ಠಾಣೆ ಮೆಟ್ಟಿಲೇರಿತ್ತು. ರಾಯ್ ವಿರುದ್ಧ ಆತನ ಬಂಟನ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿತ್ತು. ಈ ಬೆಳವಣಿಗೆ ರಾಯ್ ಅವರ ಮನಸ್ಸಿಗೆ ತೀವ್ರ ಘಾಸಿ ಉಂಟು ಮಾಡಿತ್ತು. ಈ ಆತ್ಮ*ತ್ಯೆ ಸಂಬಂಧ ಆ ಆಪ್ತನನ್ನು ವಿಚಾರಣೆ ನಡೆಸಲಾಯಿತು. ಆದರೆ ತಾನು ರಾಯ್ ಅವರಿಗೆ ವಿಶ್ವಾಸ ದ್ರೋಹ ಮಾಡಿಲ್ಲ ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಐಟಿಗೆ ಆದಾಯ ಲೆಕ್ಕ ಕಷ್ಟ:
ಕಳೆದ 2025ರಲ್ಲಿ ರಾಯ್ ಅವರ ಉದ್ಯಮದ ಮೇಲೆ ಐಟಿ ದಾಳಿ ನಡೆಯಿತು. ಇದಕ್ಕೂ ಕೆಲವೇ ತಿಂಗಳ ಹಿಂದೆ ಅವರ ಕಂಪನಿಯ ಆರ್ಥಿಕ ನಿರ್ವಹಣೆ ಉಸ್ತುವಾರಿ ಹೊತ್ತಿದ್ದ ಲೆಕ್ಕ ಪರಿಶೋಧಕ ಕೆಲಸ ತೊರೆದಿದ್ದ. ಹೀಗಾಗಿ ಐಟಿ ದಾಳಿ ಬಳಿಕ ತಮ್ಮ ಆದಾಯದ ಮೂಲಗಳ ಕುರಿತು ನಿಖರವಾದ ದಾಖಲೆ ಒದಗಿಸಲು ರಾಯ್ ಅವರಿಗೆ ಸಂಕಷ್ಟ ಎದುರಾಯಿತು. ತಮ್ಮ ಕಂಪನಿಯ ಹೊಸ ಹಣಕಾಸು ಅಧಿಕಾರಿ ಮೂಲಕ ಆದಾಯ ಲೆಕ್ಕ ಹಾಕಲು ರಾಯ್ ಯತ್ನಿಸಿದರೂ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಈ ಬೆಳವಣಿಗೆ ಅವರು ಮಾನಸಿಕವಾಗಿ ಮತ್ತಷ್ಟು ಕುಗ್ಗುವಂತೆ ಮಾಡಿತ್ತು ಎಂದು ತಿಳಿದು ಬಂದಿದೆ.
ಸಣ್ಣ ಸಮಸ್ಯೆಯನ್ನು ಬೃಹತ್ತಾಗಿ ಪರಿಗಣಿಸಿ ರಾಯ್ ಅವರು ವ್ಯಾಕುಲಕ್ಕೊಳಗಾಗುತ್ತಿದ್ದರು. ಈ ಮಾನಸಿಕ ಒತ್ತಡಕ್ಕೆ ಮನಃಶಾಸ್ತ್ರಜ್ಞರ ಬಳಿ ಅವರು ಚಿಕಿತ್ಸೆ ಸಹ ಪಡೆದಿದ್ದರು. ರಾಯ್ ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ನಿಮ್ಹಾನ್ಸ್ ತಜ್ಞರು ವಿಶ್ಲೇಷಿಸಿ ಎಸ್‌ಐಟಿ ವರದಿ ಸಹ ಕೊಟ್ಟಿದ್ದಾರೆ. ಒಟ್ಟಾರೆ ಉದ್ಯಮ ವ್ಯವಹಾರದಲ್ಲಿ ಉದ್ಭವಿಸಿದ ಮಾನಸಿಕ ಒತ್ತಡದಿಂದ (ಸ್ಟ್ರೆಸ್ ) ನಿರಾಳತೆ ಸಿಗದೆ ಅವರು ನೊಂದಿದ್ದರು. ಈ ಯಾತನೆಯಲ್ಲಿ ಅವರು ಆತ್ಮ*ತ್ಯೆ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ರಾಯ್ ಅವರ ಆತ್ಮ*ತ್ಯೆ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಥವಾ ಅವರ ಆಪ್ತರ ಮೇಲೆ ಆತ್ಮ*ತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಎಸ್‌ಐಟಿ ಹೊರಿಸಿಲ್ಲ ಎನ್ನಲಾಗಿದೆ. ಆತ್ಮ*ತ್ಯೆಗೆ ಮಾನಸಿಕ ಒತ್ತಡವೇ ಪ್ರಧಾನ ಕಾರಣ. ತೆರಿಗೆ ವಂಚನೆ ಕುರಿತು ಐಟಿ ಅಧಿಕಾರಿಗಳು ಕಾನೂನು ಅನುಸಾರ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ಆತ್ಮ*ತ್ಯೆಗೆ ಪ್ರಚೋದನೆ ಆರೋಪಕ್ಕೆ ಸೂಕ್ತ ಪುರಾವೆ ಸಿಕ್ಕಿಲ್ಲ. ಹೀಗಾಗಿ ಮ್ಯಾಜಿಸ್ಟ್ರೇಟ್ (ತಹಸೀಲ್ದಾರ್) ಅವರಿಗೆ ಅಂತಿಮ ವರದಿ ಸಲ್ಲಿಸಲಿದ್ದಾರೆ. ಆತ್ಮ*ತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂಬ ಆರೋಪವಿದ್ದರೆ, ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಬೇಕಿತ್ತು.
ಸಾವಿಗೆ 2 ಕಾರಣ
1. ಬನ್ನೇರುಘಟ್ಟ ರಸ್ತೆಯ ರೆಸಾರ್ಟ್ ಅನ್ನು ನಂಬಿಕಸ್ಥನಿಗೆ ರಾಯ್ ನೀಡಿದ್ದರು. ಆದರೆ ಆತ ಕೋಟ್ಯಂತರ ರು. ವಂಚಿಸಿದ್ದಲ್ಲದೆ, ರಾಯ್ ವಿರುದ್ಧವೇ ದೂರು ಕೊಟ್ಟಿದ್ದ. ಇದರಿಂದ ನೊಂದುಕೊಂಡಿದ್ದರು
2. ತೆರಿಗೆ ದಾಳಿಗೆ ಮುನ್ನ ಲೆಕ್ಕಪರಿಶೋಧಕ ಕಂಪನಿ ತೊರೆದಿದ್ದ. ಹೀಗಾಗಿ ತೆರಿಗೆ ಅಧಿಕಾರಿಗಳಿಗೆ ಆದಾಯ ಮೂಲದ ನಿಖರ ದಾಖಲೆ ಒದಗಿಸಲು ಆಗದೆ ಕುಗ್ಗಿ ಹೋಗಿದ್ದರು