ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಈ ಬಾರಿ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಕವಿ ಬಿ.ಆರ್. ಲಕ್ಷ್ಮಣ ರಾವ್, ಯೆನೆಪೋಯ ಅಬ್ದುಲ್ಲ ಕುಂಞಿ ಸಹಿತ ವಿವಿಧ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ
ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಈ ಬಾರಿ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಕವಿ ಬಿ.ಆರ್. ಲಕ್ಷ್ಮಣ ರಾವ್, ಯೆನೆಪೋಯ ಅಬ್ದುಲ್ಲ ಕುಂಞಿ ಸಹಿತ ವಿವಿಧ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಫೆ.10ರಂದು ಸಂಜೆ 5.30ಕ್ಕೆ ನಂತೂರಿನ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಂದೇಶ ಸಾಹಿತ್ಯ ಪ್ರಶಸ್ತಿ ಕನ್ನಡ ಭಾಷೆಯಲ್ಲಿ ಬಿ.ಆರ್. ಲಕ್ಷ್ಮಣ ರಾವ್, ಕೊಂಕಣಿ ಭಾಷೆಯಲ್ಲಿ ಐರಿನ್ ಪಿಂಟೊ, ತುಳು ಭಾಷೆಯಲ್ಲಿ ಡಾ. ಗಣೇಶ್ ಅಮೀನ್ ಸಂಕಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಂದೇಶ ಮಾಧ್ಯಮ ಪ್ರಶಸ್ತಿಗೆ ಡಿ.ವಿ. ರಾಜಶೇಖರ್, ಕೊಂಕಣಿ ಸಂಗೀತ ಪ್ರಶಸ್ತಿಗೆ ರೋಶನ್ ಡಿಸೋಜ, ವಿಶೇಷ ಪ್ರಶಸ್ತಿಗೆ ಡಾ.ಕೆ.ವಿ. ರಾವ್ ಆಯ್ಕೆಯಾಗಿದ್ದಾರೆ. ಸಂದೇಶ ವಿಷೇಶ ಗೌರವ ಪ್ರಶಸ್ತಿಗೆ ಮೈಕಲ್ ಡಿಸೋಜ ಹಾಗೂ ವಿಶೇಷ ಯುವ ಪ್ರತಿಭಾ ಪ್ರಶಸ್ತಿಗೆ ರಮೋನ ಇವೆಟ್ ಪಿರೇರಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ. ಸುದೀಪ್ ಪೌಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿಯ ಬಿಷಪ್ ಮತ್ತು ಸಂಸ್ಥೆಯ ಅಧ್ಯಕ್ಷ ಅತಿ ವಂ.ಡಾ. ಹೆನ್ರಿ ಡಿಸೋಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಿವಮೊಗ್ಗ ಬಿಷಪ್ ಅತಿ ವಂ.ಡಾ. ಫ್ರಾನ್ಸಿಸ್ ಸೆರಾವೊ, ಬೆಳ್ತಂಗಡಿ ಬಿಷಪ್ ಅತಿ ವಂ. ಡಾ. ಲಾರೆನ್ಸ್ ಮುಕ್ಕುಯಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಸಂಸ್ಥೆಯ ಟ್ರಸ್ಟಿ ವಂ. ಐವನ್ ಪಿಂಟೋ, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ನಾ. ದಾಮೋದರ ಶೆಟ್ಟಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಪ್ರಶಸ್ತಿ ಆಯ್ಕೆ ಸಮಿತಿಯ ಡಾ.ನಾ. ದಾಮೋದರ ಶೆಟ್ಟಿ, ಬಿ.ಎ. ಮುಹಮ್ಮದ್ ಹನೀಫ್, ಸೈಮನ್ ಕುವೆಲ್ಲೋ, ರೂಪಕಲಾ ಆಳ್ವ ಇದ್ದರು.
ಗಿರಿಜಾ ಲೋಕೇಶ್, ಸಾಧು ಕೋಕಿಲಾ ಸೇರಿ 9 ಮಂದಿಗೆ ಸಂಗೀತ ವಿವಿ ಗೌಡಾ
ಮೈಸೂರು : ಇಲ್ಲಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 7, 8 ಮತ್ತು 9ನೇ ಘಟಿಕೋತ್ಸವ ಜ. 18 ರಂದು ಮಧ್ಯಾಹ್ನ 3 ಗಂಟೆಗೆ ವಿವಿ ಆವರಣದಲ್ಲಿ ನಡೆಯಲಿದ್ದು, ಗಿರಿಜಾ ಲೋಕೇಶ್, ಸಾಧು ಕೋಕಿಲಾ ಸೇರಿ ಒಂಬತ್ತು ಮಂದಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ.
ರಾಜ್ಯಪಾಲ ಮತ್ತು ಕುಲಾಧಿಪತಿ ಥಾವರ್ ಚಂದ್ ಗೆಹಲೋತ್ ಪದವಿ ಪ್ರದಾನ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಪಾಲ್ಗೊಳ್ಳಲಿದ್ದು, ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಘಟಿಕೋತ್ಸವ ಭಾಷಣ ನೆರವೇರಿಸುವರು. ಸಂಗೀತ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಕುಲಸಚಿವರಾದ ಪ್ರೊ.ಎಂ.ಜಿ. ಮಂಜುನಾಥ್, ಕೆ.ಎಸ್. ರೇಖಾ ಪಾಲ್ಗೊಳ್ಳುವರು.
ವಿದುಷಿ ವೀಣಾಮೂರ್ತಿ ವಿಜಯ್, ಎಂ.ಜಿ. ಪುಷ್ಪಾ ಶ್ರೀನಿವಾಸನ್, ಡಾ. ಸಂಧ್ಯಾ ಪುರೆಚ್ಚ, ಎಂ.ಆರ್. ಸತ್ಯನಾರಾಯಣ, ವಿದ್ವಾನ್ ಚೆಲುವರಾಜು, ಸಾಧು ಕೋಕಿಲ, ಸಿ. ಬಸವಲಿಂಗಯ್ಯ, ಸತ್ಯನಾರಾಯಣರಾಜು, ಗಿರಿಜಾ ಲೋಕೇಶ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.