ಇನ್ಮುಂದೆ ಮೆಟ್ರೋ ನಿಲ್ದಾಣದಲ್ಲಿ ಸೆಲ್ಫ್‌ ಸರ್ವೀಸ್‌ ಟಿಕೆಟ್‌ ಮಷಿನ್‌

ಸಾರಾಂಶ

ಮೆಟ್ರೋ ರೈಲು ನಿಗಮವು ಸ್ವಯಂ ಸೇವಾ ಟಿಕೆಟ್ ಯಂತ್ರವನ್ನು ನಿಲ್ದಾಣಗಳಲ್ಲಿ ಅಳವಡಿಸುತ್ತಿದೆ. ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 10 ಯಂತ್ರಗಳನ್ನು ಇಟ್ಟಿದೆ.

 ಬೆಂಗಳೂರು : ಮೆಟ್ರೋ ಪ್ರಯಾಣದ ಟೋಕನ್‌ಗಾಗಿ ಕೌಂಟರ್‌ಗಳಲ್ಲಿ ನಿಂತು ಪ್ರಯಾಣಿಕರ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮವು ಸ್ವಯಂ ಸೇವಾ ಟಿಕೆಟ್ ಯಂತ್ರವನ್ನು ನಿಲ್ದಾಣಗಳಲ್ಲಿ ಅಳವಡಿಸುತ್ತಿದೆ. ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 10 ಯಂತ್ರಗಳನ್ನು ಇಟ್ಟಿದೆ.

ಈ ಯಂತ್ರಗಳನ್ನು ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ಗಳನ್ನು ತ್ವರಿತವಾಗಿ ವಿತರಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ, ಇದು ಸಾಂಪ್ರದಾಯಿಕ ಏಕ ಪ್ರಯಾಣ ಟೋಕನ್‌ಗಳನ್ನು ಕ್ರಮೇಣ ಬದಲಾಯಿಸಲಿದೆ ಎಂದು ಬಿಎಂಆರ್‌ಸಿಎಲ್‌ ವಿಶ್ವಾಸ ವ್ಯಕ್ತಪಡಿಸಿದೆ.

ಸರಳವಾದ ಎರಡು-ಹಂತದ ಪ್ರಕ್ರಿಯೆ ಇದರಲ್ಲಿದ್ದು, ಪ್ರಯಾಣಿಕರು 30 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್ ಪಡೆಯಬಹುದು. ಪ್ರಯಾಣಿಕರು ಡ್ರಾಪ್ - ಡೌನ್ ಮೆನು ಬಳಸಿ ಗಮ್ಯಸ್ಥಾನ ಆಯ್ಕೆ ಮಾಡಬಹುದು. ಪ್ರಯಾಣಿಕರ ಸಂಖ್ಯೆ ನಮೂದಿಸಿ, ದರ ಪರಿಶೀಲಿಸಬಹುದು. ಬಳಿಕ ಯಾವುದೇ ಯುಪಿಐ ಆಧಾರಿತ ಮೊಬೈಲ್ ಆ್ಯಪ್‌ಗಳ ಮೂಲಕ ಪಾವತಿ ಮಾಡಬಹುದು. ಪಾವತಿ ಯಶಸ್ವಿಯಾದ ತಕ್ಷಣ ಪೇಪರ್ ಕ್ಯೂಆರ್ ಟಿಕೆಟ್ ಸಿಗಲಿದೆ.

ಈ ಕ್ಯೂಆರ್ ಟಿಕೆಟ್‌ಗಳನ್ನು ನಿಲ್ದಾಣದ ಎಂಟ್ರಿ ಮತ್ತು ಎಕ್ಸಿಟ್ ಗೇಟ್‌ಗಳಲ್ಲಿ ಬಳಸಬಹುದಾಗಿದೆ. ಸ್ವಯಂ ಸೇವಾ ಟಿಕೆಟ್ ಯಂತ್ರಗಳ ಅಳವಡಿಕೆಯಿಂದ ನಮ್ಮ ಮೆಟ್ರೋ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ, ಸುಗಮವಾಗಿ ಬಳಸಬಹುದು. ಇದರಿಂದ ಕೌಂಟರ್‌ಗಳಲ್ಲಿ ಉದ್ದುದ್ದ ಸಾಲು ತಪ್ಪಿಸಲು ಸಾಧ್ಯವಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Share this article