ಮುಖಾಮುಖಿ- ಎಚ್.ಕೆ. ಪಾಟೀಲ್, ಕಾನೂನು ಸಚಿವ
- ಎಂ.ಆರ್.ಚಂದ್ರಮೌಳಿ
ರಾಜ್ಯ ರಾಜಕಾರಣದಲ್ಲಿ ವಿಪ್ಲವ ಸೃಷ್ಟಿಸಿ ಸಿದ್ದರಾಮಯ್ಯ ಸರ್ಕಾರ 1.0 ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಕ್ರಮ ಗಣಿಗಾರಿಕೆ ಹಾಗೂ ಅದರ ವಿರುದ್ಧ ನಡೆದ ಕಾಂಗ್ರೆಸ್ ಪಾದಯಾತ್ರೆ. ಆಗ ನಡೆದಿದ್ದ ಅಕ್ರಮ ಗಣಿಗಾರಿಕೆ ಕುರಿತು ದೊಡ್ಡ ಗುಡ್ಡದಷ್ಟು ಪ್ರಕರಣಗಳು ದಾಖಲಾಗಿವೆ. ಆದರೆ, ಇತ್ಯರ್ಥವಾಗಿದ್ದು ಕಡಿಮೆ. ವಿಪರ್ಯಾಸವೆಂದರೆ ಸಿದ್ದರಾಮಯ್ಯ ಸರ್ಕಾರ 2.0 ಅಧಿಕಾರದಲ್ಲಿದ್ದರೂ ಇದೇ ಪರಿಸ್ಥಿತಿ ಇದೆ.
ಕ್ರಮೇಣ ಈ ಅಕ್ರಮ ವಿಚಾರ ಜನಮಾನಸದಿಂದ ಮರೆಯಾಗುತ್ತಿರುವ ಹೊತ್ತಿನಲ್ಲಿ ಹಿರಿಯ ನಾಯಕರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ ಆಗಿರುವ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನಿಖೆ ಬಾಕಿ ಇರುವ ಸಾವಿರಾರು ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಗೆ ಮುಂದಾಗುವಂತೆ ಪತ್ರ ಬರೆಯುವ ಮೂಲಕ ಮತ್ತೆ ಈ ವಿಚಾರ ಕೆದಕಿದ್ದಾರೆ. ಆದರೆ, ಕೆಲವರಿಗೆ ಈ ಪತ್ರದಲ್ಲೂ ರಾಜಕೀಯ ವಾಸನೆ ಬಡಿದಿದೆ. ಅದರಲ್ಲಿ ಸತ್ಯಾಂಶವಿದೆಯೇ? ಯಾರನ್ನೋ ಗುರಿ ಇಟ್ಟುಕೊಂಡು ತನಿಖೆ ಮಾಡಲು ಸರ್ಕಾರ ಹೊರಟಿದೆ ಎಂಬ ಟೀಕೆಯಲ್ಲಿ ವಾಸ್ತವಾಂಶ ಎಷ್ಟು? ಇಷ್ಟು ವರ್ಷಗಳ ಕಾಲ ಮೌನವಾಗಿದ್ದು ಈಗ ತನಿಖೆ ಮಾಡುವಂತೆ ಪತ್ರ ಬರೆಯಲು ಕಾರಣವೇನು? ತನಿಖೆ ವಿಳಂಬಕ್ಕೆ ಅಧಿಕಾರಿಗಳು ಅಥವಾ ರಾಜಕಾರಣಿಗಳು ಕಾರಣರೇ? ಅಕ್ರಮ ಪ್ರಕರಣಗಳ ಪತ್ತೆ ಸುಲಭ ಸಾಧ್ಯವೇ ಎಂಬ ಹಲವು ಪ್ರಶ್ನೆಗಳಿಗೆ ಕನ್ನಡಪ್ರಭದೊಂದಿಗೆ ‘ಮುಖಾಮುಖಿ’ಯಾಗಿದ್ದಾರೆ ಕಾನೂನು ಸಚಿವ ಎಚ್.ಕೆ.ಪಾಟೀಲ್.
ಅಕ್ರಮ ಗಣಿಗಾರಿಕೆಗಳ ತನಿಖೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೀರಿ. ಇದರ ಹಿಂದೆ ರಾಜಕೀಯ ಉದ್ದೇಶವಿದೆಯಂತೆ?
ನಿಜಕ್ಕೂ ಇದು ದುರ್ದೈವದ ವಿಷಯ. ನನ್ನ ಪತ್ರದಲ್ಲಿ ಸುದೀರ್ಘವಾಗಿ ಏನು ನಡೆದು ಬಂದಿದೆ ಎಂಬುದನ್ನು ವಿವರಿಸಿದ್ದೇನೆ. ರಾಜ್ಯದೊಳಗೆ ವ್ಯವಸ್ಥೆ ಹೇಗೆ ಹಾಳಾಗಿ ಹೋಗಿತ್ತು? ಈಗ ವ್ಯವಸ್ಥೆ ಸುಧಾರಣೆಯಾದಂತಹ ಸಂದರ್ಭದಲ್ಲಿ ರಾಜ್ಯದ ಸಂಪತ್ತು ವಾಪಸ್ ನಮಗೆ ಬರಬೇಕು ಎಂಬುದು ಪತ್ರದ ಒಟ್ಟಾರೆ ಉದ್ದೇಶ. 10 ವರ್ಷದ ನಂತರ ಈ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಮಾತನಾಡಿದ್ದಾರೆ. ಆದರೆ ನಾನು ಪತ್ರದಲ್ಲಿ ಇದನ್ನೂ ಹೇಳಿದ್ದೇನೆ. ಈಗ ಹಲವಾರು ಪ್ರಕರಣಗಳ ಬಗ್ಗೆ ಕೋರ್ಟ್‌ಗಳಲ್ಲಿ ತೀರ್ಪು ಬಂದಿದೆ. ನಾವು ಮಾಡಿದ್ದ ಆರೋಪಗಳು ಸರಿ ಎಂದು ಹೇಳಿವೆ. ಈ ಸಂದರ್ಭದಲ್ಲಿ ನಾವು ಮಾಡಬೇಕಾದ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಅಕ್ರಮ ಗಣಿಗಾರಿಕೆಯಲ್ಲಿ ಸಿಕ್ಕಿ ಹಾಕಿಕೊಂಡವರು, ಪ್ರಕರಣದಲ್ಲಿದ್ದವರ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಜವಾಬ್ದಾರಿ ಸ್ಥಾನದಲ್ಲಿರುವವರು ಕೇಳಬೇಕಾದ ಪ್ರಶ್ನೆ. ರಾಜ್ಯದ ಸಂಪತ್ತು ವಾಪಸ್ ಪಡೆಯುವ ಕೆಲಸ ಆಗಬೇಕು. ಅದು ನನ್ನ ಪತ್ರದ ಮೂಲ ಉದ್ದೇಶ.
ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ವಿಳಂಬ, ನಿರ್ಲಕ್ಷ್ಯವಾಗಿದೆ ಎಂಬ ಅಸಮಾಧಾನವಿದೆಯೇ?
ನನ್ನ ಅಸಮಾಧಾನಕ್ಕಿಂತ ಹೆಚ್ಚಾಗಿ ಜವಾಬ್ದಾರಿಯುತ ಪ್ರತಿಯೊಬ್ಬ ವ್ಯಕ್ತಿಗೆ ಅಸಮಾಧಾನ, ಆಕ್ರೋಶ ಬರಬೇಕು, ಅದು ಈಗ ಬಂದಿದೆ. 10-15 ವರ್ಷಗಳ ಕಾಲ ಸರ್ಕಾರಿ ಸಂಪತ್ತು ಕಳುವಾಗಿರುವ ಕುರಿತು ಪ್ರಕರಣಗಳು ದಾಖಲು ಆಗುವುದಿಲ್ಲ, ಸಿಬಿಐಗೆ ಕೊಟ್ಟರೆ ತನಿಖೆ ಮಾಡುವುದಿಲ್ಲ. ಎಸ್‌ಐಟಿಗೆ ಕೊಟ್ಟರೆ ಅವರು ತನಿಖೆ ಮಾಡುವುದಿಲ್ಲ. ಶೇ.93ರಷ್ಟು ಅಪರಾಧಗಳಲ್ಲಿ ಕ್ರಮವೇ ಆಗಿಲ್ಲ. ಒಟ್ಟು ಪ್ರಕರಣಗಳಲ್ಲಿ ಶೇ.2ರಷ್ಟು ದಾಖಲಾಗಿವೆ. ಹೀಗಿರುವಾಗ ಆಕ್ರೋಶ ನನಗೆ ಮಾತ್ರ ಅಲ್ಲ, ಎಲ್ಲರಿಗೂ ಬರಬೇಕು. ನಾನು ಈ ಮಾಹಿತಿ ಹಂಚಿಕೊಂಡು, ರಾಜ್ಯದ ಹಿತದೃಷ್ಟಿಯಿಂದ ಏನಾಗಬೇಕು ಎಂಬುದನ್ನು ಪತ್ರದಲ್ಲಿ ಬರೆದಿದ್ದೇನೆ.
ಶೇ.93ರಷ್ಟು ಪ್ರಕರಣಗಳು ತನಿಖೆಯಾಗಿಲ್ಲ. ಇದಕ್ಕೆ ಹೊಣೆ ಯಾರು?
ನಮ್ಮ ಇಡೀ ವ್ಯವಸ್ಥೆಯೇ ಹೊಣೆ. ರಾಜಕಾರಣಿಗಳು, ಅಧಿಕಾರಿಗಳು, ಮಾಧ್ಯಮಗಳು, ನ್ಯಾಯಾಲಯಗಳೂ ಇದಕ್ಕೆ ಹೊಣೆ. ನಾನೇ ಈ ಪ್ರಶ್ನೆ ಕೇಳುತ್ತೇನೆ, ಈ ನಾಲ್ಕು ಜನ ಉತ್ತರ ಹೇಳಬೇಕಾಗುತ್ತದೆ. ಈ ನಾಲ್ಕು ಜನರು ತಮ್ಮ ವ್ಯಾಪ್ತಿಯಲ್ಲಿರುವುದನ್ನು ಸರಿಪಡಿಸಿಕೊಳ್ಳಬೇಕು. ಶೇ. 93ರಷ್ಟು ಪ್ರಕರಣಗಳು ತನಿಖೆಯಾಗಿಲ್ಲ ಅಂದರೆ ಹೇಗೆ ಸುಮ್ಮನಿರುತ್ತೀರಿ? ವಿಷಯ ಗೊತ್ತಿದ್ದು ನಾನು ಈ ಬಗ್ಗೆ ಹೇಳದಿದ್ದರೆ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದಂತೆ ಆಗುತ್ತಾ? ಆದ್ದರಿಂದ ನನ್ನ ಈ ಪತ್ರ ನಮ್ಮ ವ್ಯವಸ್ಥೆ ಅಪರಾಧ ಮಾಡಿದವರನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ತೋರಿಸುತ್ತದೆ. ತಪ್ಪು ಮಾಡಿದವರನ್ನು ರಕ್ಷಿಸುವುದು ನಮ್ಮ ವ್ಯವಸ್ಥೆಯ ಮಹತ್ವದ ಭಾಗ ಆಗಬಾರದು.
ಪ್ರಕರಣದ ಪ್ರಮುಖ ಸಾಕ್ಷ್ಯ, ದಾಖಲೆ ಕಣ್ಮರೆಯಾಗಬಹುದು. ನಷ್ಟ ವಸೂಲಿಯಾಗುವ ಮತ್ತು ಸಂಪತ್ತು ರಾಜ್ಯದ ಬೊಕ್ಕಸಕ್ಕೆ ಮರಳುವ ಸಾಧ್ಯತೆ ದಿನದಂದ ದಿನಕ್ಕೆ ಕ್ಷೀಣವಾಗುತ್ತಿದೆ ಎಂದಿದ್ದೀರಲ್ಲ, ಏಕೆ?
ಈಗ ಕೆಲ ಪ್ರಕರಣಗಳಲ್ಲಿ ತೀರ್ಪು ಬಂದಿದೆ, ಶಿಕ್ಷೆ ಆಗಿದೆ. ಇಷ್ಟಾದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. 15 ವರ್ಷದ ವಿಳಂಬ ಮಾಡಿದವರು ಮುಂದಿನ ಕ್ರಮ ಕೈಗೊಳ್ಳುತ್ತಾರೆಂಬುದಕ್ಕೆ ಯಾವ ಗ್ಯಾರಂಟಿ ಇದೆ? ಅದಕ್ಕಾಗಿ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಎಚ್ಚರಿಕೆ ಕೊಟ್ಟಿದ್ದೇವೆ. ಈಗ ಪ್ರಕರಣಗಳ ಬಗ್ಗೆ ಗಂಭೀರತೆ ಬಂದಿದೆ. ತಪ್ಪು ಮಾಡಿದವರನ್ನು ಶಿಕ್ಷೆಗೆ ಒಳಪಡಿಸುತ್ತಾರೆ, ಜೈಲಿಗೆ ಹಾಕುತ್ತಾರೆಂದಾಗ ಪ್ರಮುಖ ದಾಖಲೆಗಳನ್ನು ಮರೆಮಾಡುವ ಕೆಟ್ಟ ಕೈಗಳು, ಕೆಟ್ಟ ಮನಸ್ಸುಗಳು ಇರುತ್ತವೆ. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ, ಅವರ ಹಿಂದೆ ರಾಜಕಾರಣಿಗಳು ಯಾವ ರೀತಿ ಬೆನ್ನತ್ತಿರುತ್ತಾರೆಂಬುದನ್ನು ನೋಡಿದ್ದೇವೆ. ಅದಕ್ಕಾಗಿ ಆ ಎಚ್ಚರಿಕೆ ಮಾತನ್ನು ಹೇಳಿದ್ದೇನೆ.
ಶೇ.93ರಷ್ಟು ಪ್ರಕರಣಗಳ ತನಿಖೆ ಒಂದು ಎಸ್‌ಐಟಿಯಿಂದ ಸಾಧ್ಯವೆ? ಪರ್ಯಾಯ ಮಾರ್ಗವೇನು?
ಎಲ್ಲ ಪ್ರಕರಣಗಳನ್ನು ಎಸ್ಐಟಿಗೆ ಕೊಡಬೇಕು ಎಂದು ಹೇಳಿಲ್ಲ. ಎಸ್‌ಐಟಿಗೆ ಯಾವ ಪ್ರಕರಣ ಕೊಡಬೇಕು. ಪೊಲೀಸ್ ಸ್ಟೇಷನ್ ವ್ಯಾಪ್ತಿಗೆ ಬರುವಂತಹ ಸಣ್ಣ ಪ್ರಕರಣಗಳನ್ನು ಅವರು ನೋಡಬೇಕು. ಅದಕ್ಕಿಂತ ದೊಡ್ಡ ಪ್ರಕರಣಗಳು ಇದ್ದಲ್ಲಿ ಅವುಗಳನ್ನು ಸಿಬಿಐಗೆ ಕೊಡಬೇಕು. ಸಿಐಡಿಗೆ ಕೊಡುವಂತಿದ್ದರೆ ಅವರಿಗೆ ನೀಡಬೇಕು. ಎಲ್ಲ ಪ್ರಕರಣಗಳನ್ನು ನೋಡಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.
ಅಕ್ರಮ ಅದಿರು ಸಾಗಾಟ ಬೇರೆ ರಾಜ್ಯಗಳ ಮೂಲಕ ಆಗಿದೆ? ಇದು ಎಸ್ಐಟಿ ವ್ಯಾಪ್ತಿ ಮೀರಿದ್ದಲ್ಲವೇ?
ಸಿಬಿಐನವರು ತನಿಖೆ ಮಾಡುವುದಿಲ್ಲ ಎಂದು ಹೇಳಿದರೆ ಏನು ಮಾಡಬೇಕು? ನಾವೇ ವಿಶೇಷ ಪರವಾನಗಿ ತೆಗೆದುಕೊಂಡು ಮಾಡಬೇಕಾಗುತ್ತದೆ. ನಾವು 9 ಪ್ರಕರಣಗಳನ್ನು ತನಿಖೆಗೆ ಕೊಟ್ಟರೆ, ಅವರು ಮೂರು ಪ್ರಕರಣಗಳ ತನಿಖೆ ಮಾತ್ರ ಮಾಡುವುದಾಗಿ ಹೇಳಿದರು. ಹೀಗಾದಾಗ ಏನು ಮಾಡಲು ಸಾಧ್ಯ?
ಲೂಟಿಯಾದ ಸಂಪತ್ತು ವಾಪಸ್ ಬರಬೇಕು ಎಂದು ಹೇಳಿದ್ದೀರಿ, ಇಷ್ಟು ವರ್ಷದ ನಂತರ ಅವುಗಳ ಪತ್ತೆ ಹೇಗೆ?
ಅಕ್ರಮದಿಂದ ಬಂದಂತಹ ಸಂಪತ್ತು ಇನ್ನೊಂದು ರೀತಿಯಲ್ಲಿ ಸಕ್ರಮ ಸಂಪತ್ತಾಗಿ ಪರಿವರ್ತನೆಯಾಗಿರುತ್ತದೆ. ಅದು ರಾಜ್ಯ ಅಥವಾ ಬೇರೆ ರಾಜ್ಯ ಇಲ್ಲವೇ ಬೇರೆ ದೇಶದೊಳಗೆ ಇರಿಸಲ್ಪಟ್ಟಿರುತ್ತದೆ. ಅದನ್ನು ಗುರುತಿಸಿ ರಾಜ್ಯದ ಖಜಾನೆಗೆ ತುಂಬಬೇಕು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನ, ಕಾನೂನು ಮೂಲಕ ನಾವು ಮಾಡಬೇಕಾದ ಕರ್ತವ್ಯ.
ಹರಾಜು ಮೂಲಕವೇ ಗಣಿಗಾರಿಕೆಗೆ ಅವಕಾಶ ಎಂದು ಕೇಂದ್ರ ಕಾನೂನು ತರುವ ಮೊದಲೇ ಸಿದ್ದರಾಮಯ್ಯ ಅಕ್ರಮವಾಗಿ ಗಣಿಗಾರಿಕೆಗೆ ಲೈಸೆನ್ಸ್ ನೀಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸುತ್ತಾರಲ್ವ?
ಅವರು ಪ್ರಸ್ತಾಪಿಸಿರುವ ವಿಷಯವೇ ಬೇರೆ, ಅಕ್ರಮ ಲೂಟಿ ಬೇರೆ. 2006-2011ರಲ್ಲಿ ನಡೆದ ಅಕ್ರಮ ಪ್ರಕರಣಗಳ ಬಗ್ಗೆ ಮಾತ್ರ ಸೀಮಿತವಾಗಿ ನನ್ನ ಪತ್ರ ಇದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀವು ಇಷ್ಟು ವರ್ಷ ಸುಮ್ಮನಿದ್ದದ್ದು ಏಕೆ? ಅಂತಾರೆ. ಕುಂಬಕರ್ಣ ಅಂತಾನು ಕರೆದಿದ್ದಾರೆ?
ಹೌದು, ಅಷ್ಟೇ ಅಲ್ಲ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಇಷ್ಟು ದಿನ ಸಂಪುಟ ಉಪಸಮಿತಿ ವರದಿಯನ್ನು ಪೂಜೆ ಮಾಡುತ್ತಿದ್ದರೆ ಎಂದೂ ಟೀಕಿಸಿದ್ದಾರೆ. ನಾನು ಅವರಿಗೆ ಹೇಳುವುದಿಷ್ಟೆ, ಅವರು ಈಗ ದೊಡ್ಡ ಸ್ಥಾನದಲ್ಲಿದ್ದಾರೆ. ಕುಂಭಕರ್ಣ, ರಾವಣ, ರಾಮ ಈ ಪೌರಾಣಿಕ ನಾಟಕದ ಹೆಸರು ಹೇಳುವುದನ್ನು ಬಿಡಬೇಕು. ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು ಅವರು. ಗಣಿ ಅಕ್ರಮಗಳ ವರದಿ ಅವರ ಬಳಿಯೇ ಇತ್ತು. ಆಗ ಅವುಗಳ ಮೇಲೆ ಅಭಿಷೇಕ ಮಾಡುತ್ತಾ ಕುಳಿತಿದ್ರಾ? ಮುಖ್ಯಮಂತ್ರಿಗಳು ನನ್ನ ಪತ್ರವನ್ನು ಕಸದ ಬುಟ್ಟಿಗೆ ಹಾಕಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನನ್ನ ಪತ್ರ ಕಸದ ಬುಟ್ಟಿಗೆ ಹಾಕಬೇಕೋ, ಕ್ರಮದ ತೊಟ್ಟಿಗೆ ಹಾಕಬೇಕೋ ಎಂಬುದನ್ನು ಮುಖ್ಯಮಂತ್ರಿಗಳು ನಿರ್ಣಯಿಸುತ್ತಾರೆ. ಆದರೆ ಕುಮಾರಸ್ವಾಮಿ ಅವರು ಅಕ್ರಮದ ಮೂಲಕ ಲೂಟಿಯಾದ ಹಣ ಕನ್ನಡಿಗರಿಗೆ ವಾಪಸ್ ತರುವ ಪ್ರಯತ್ನಕ್ಕೆ ಅಣಿಯಾಗಬೇಕೇ ಹೊರತು ದಾರಿ ತಪ್ಪಿಸುವ ಕೆಲಸ ಮಾಡಬಾರದು.
ಪ್ರಕರಣಗಳನ್ನು ಎಸ್‌ಐಟಿ ತನಿಖೆ ಮಾಡಬೇಕು, ವಸೂಲಿ ಆಯುಕ್ತರ ನೇಮಕ, ವಿಶೇಷ ನ್ಯಾಯಾಲಯ ರಚಿಸಬೇಕೆಂಬ ನಿಮ್ಮ ಕೋರಿಕೆ ಈಡೇರುವುದೇ?
ನನ್ನ ಪತ್ರದ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ವಿಶೇಷ ಕೋರ್ಟ್, ರಿಕವರಿ ಪ್ರಕ್ರಿಯೆ ಹಾಗೂ ಕ್ರಮಗಳ ಬಗ್ಗೆ ಸ್ಪಷ್ಟವಾಗಿ ಸ್ಪಂದನೆ ಮಾಡಿದ್ದಾರೆ. ಇದು ದೊಡ್ಡ ಆಶಾದಾಯಕ ಹಾಗೂ ವ್ಯವಸ್ಥೆಗೆ ಲಗಾಮು ಹಾಕುವ ದೊಡ್ಡ ಹೆಜ್ಜೆ ಎಂದು ಭಾವಿಸಿದ್ದೇನೆ.
ಶಾಸಕರಾದ ಬಿ.ಆರ್.ಪಾಟೀಲ, ರಾಜು ಕಾಗೆ ಸೇರಿ ಕಾಂಗ್ರೆಸ್ ಶಾಸಕರು ಸರ್ಕಾರದ ಬಗ್ಗೆಯೇ ಸಿಟ್ಟಾಗಿದ್ದಾರಲ್ಲ?
ಇದು ಪಕ್ಷದ ಆಂತರಿಕವಾಗಿರುವ ವಿಷಯ. ಸರ್ಕಾರದ ವಿಷಯಗಳನ್ನು ಪಕ್ಷದ ಸಭೆಯಲ್ಲಾಗಲಿ ಅಥವಾ ನಾಯಕರ ಜೊತೆಯಲ್ಲಾಗಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಬಗೆಹರಿಯುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಈ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಅಗತ್ಯವಿಲ್ಲ.
ನಮಗೆ ಅನುದಾನ ಸಿಗುತ್ತಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗಿದ್ದಾರೆ ಅಂತನೂ ಶಾಸಕರು ಹೇಳುತ್ತಿದ್ದಾರೆ?
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 2013-2018ರ ಅವಧಿಯಲ್ಲಿ ಅವರ ಆದ್ಯತೆಗಳು ಬೇರೆಯೇ ಇದ್ದವು. ಈಗ 2023ರಿಂದ ಸಿದ್ದರಾಮಯ್ಯ ಅವರನ್ನು ಯಾವುದಕ್ಕೆ ಗಂಭೀರವಾಗಿ ಗಮನಿಸಬೇಕಿತ್ತೋ ಅದನ್ನು ಗಮನಿಸಿಲ್ಲ. ಇಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಬಡವರನ್ನು ಮಧ್ಯಮ ವರ್ಗಕ್ಕೆ ಮೇಲಕ್ಕೆ ತಂದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ. ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಐದೈದು ಸಾವಿರ ಕೊಟ್ಟಿದ್ದೀರಿ ಹಾಗಾಗಿ ಬಡತನದಿಂದ ಜನ ಮೇಲಕ್ಕೆ ಬಂದಿದ್ದಾರೆ ಎಂದು ಹೇಳಬಹುದು, ಅದಕ್ಕಿಂತ ಹೆಚ್ಚಾಗಿ ಗ್ಯಾರಂಟಿ ಯೋಜನೆಗಳ ಮೂಲಕ 52-58 ಸಾವಿರ ಕೋಟಿ ರು. ಭ್ರಷ್ಟಾಚಾರ ಇಲ್ಲದೆ ಕಟ್ಟ ಕಡೆಯ ವ್ಯಕ್ತಿಗೂ ಮುಟ್ಟುತ್ತಿದೆ. ಇದು ಆಡಳಿತದ ಮಹತ್ವದ ಕ್ರಾಂತಿ ಅಲ್ಲವೇ? ಅಭಿವೃದ್ಧಿ ಕಾಮಗಾರಿಯಲ್ಲಿ ಅಲ್ಪಸ್ವಲ್ಪ ಆಚೀಚೆ ಆಗುತ್ತದೆ ಎಂದು ಹೇಳುವವರು ಇದನ್ನು ಗಮನಿಸಬೇಕಲ್ಲವೇ?