ಸೂಜಿ ಚುಚ್ಚದೆ ಶುಗರ್‌ ಟೆಸ್ಟ್‌ : ಫೋಟೋ ಅಕೂಸ್ಟಿಕ್ಸ್ ಸೆನ್ಸಿಂಗ್ ಮೂಲಕ ಸಕ್ಕರೆ ಪ್ರಮಾಣ ಪರೀಕ್ಷೆ

Published : Mar 29, 2025, 09:43 AM IST
sugar test

ಸಾರಾಂಶ

ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಳೆಯಲು ಸೂಜಿ ಚುಚ್ಚುವ ಸಾಂಪ್ರದಾಯಿಕ ಮಾರ್ಗಕ್ಕೆ ಪರ್ಯಾಯವಾಗಿ ನೋವಿಲ್ಲದೇ, ಅಂಗಾಂಶಕ್ಕೆ ಹಾನಿ ಮಾಡದೆ ‘ಫೋಟೋಅಕೂಸ್ಟಿಕ್ಸ್ ಸೆನ್ಸಿಂಗ್’ ಮೂಲಕ ಸಕ್ಕರೆ ಪ್ರಮಾಣ ಅಳೆಯುವ ಸಂಶೋಧನೆಯನ್ನು  ಮಾಡಿದೆ.

ಬೆಂಗಳೂರು : ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಳೆಯಲು ಸೂಜಿ ಚುಚ್ಚುವ ಸಾಂಪ್ರದಾಯಿಕ ಮಾರ್ಗಕ್ಕೆ ಪರ್ಯಾಯವಾಗಿ ನೋವಿಲ್ಲದೇ, ಅಂಗಾಂಶಕ್ಕೆ ಹಾನಿ ಮಾಡದೆ ‘ಫೋಟೋಅಕೂಸ್ಟಿಕ್ಸ್ ಸೆನ್ಸಿಂಗ್’ ಮೂಲಕ ಸಕ್ಕರೆ ಪ್ರಮಾಣ ಅಳೆಯುವ ಸಂಶೋಧನೆಯನ್ನು ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ‘ಇನ್‌ಸ್ಟ್ರುಮೆಂಟೇಷನ್ ಆ್ಯಂಡ್ ಅಪ್ಲೈಡ್ ಫಿಸಿಕ್ಸ್’ (ಐಎಪಿ) ವಿಭಾಗ ಮಾಡಿದೆ.

ಈ ಕುರಿತು ಸಂಶೋಧನಾ ವರದಿ ಬಿಡುಗಡೆ ಮಾಡಲಾಗಿದೆ. ಮಧುಮೇಹಿಗಳ ಸಕ್ಕರೆ ಪ್ರಮಾಣ ಅಳತೆ ಮಾಡಲು ಆಗಾಗ ಸಣ್ಣ ಸೂಜಿ ಚುಚ್ಚುವುದರಿಂದ ಅವರಿಗೆ ಅನಾನುಕೂಲ ಆಗುವ ಜೊತೆಗೆ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ನಮ್ಮ ಸಂಶೋಧನೆಯಲ್ಲಿ ಫೋಟೋಅಕೂಸ್ಟಿಕ್ಸ್ ಸೆನ್ಸಿಂಗ್ ತಂತ್ರ ಬಳಸಿ ಅಂಗಾಂಶದ ಮೇಲೆ ಲೇಸರ್ ಕಿರಣಗಳನ್ನು ಬಿಡಲಾಗುತ್ತದೆ. ಆಗ ಅಂಗಾಂಶ ಬಿಸಿಯಾಗಿ (1 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ) ಕಂಪನ ಉಂಟಾಗುತ್ತದೆ. ಈ ವೇಳೆ ಉತ್ತತ್ತಿಯಾಗುವ ಅಲ್ಟ್ರಾಸಾನಿಕ್ ಸೌಂಡ್ ವೇವ್ಸ್‌ಗಳನ್ನು ಸೂಕ್ಷ್ಮ ಸೆನ್ಸರ್‌ಗಳು ಸೆರೆ ಹಿಡಿಯುತ್ತವೆ.

ಲೇಸರ್ ಕಿರಣಗಳನ್ನು ಬಿಟ್ಟಾಗ ಅಂಗಾಂಶದೊಳಗಿನ ಬೇರೆ ಬೇರೆ ಅಣುಗಳು ಮತ್ತು ಅಂಶಗಳು ಬೇರೆ ಬೇರೆ ರೀತಿಯಲ್ಲಿ ಧ್ವನಿ ತರಂಗ ರೂಪದಲ್ಲಿ ಪ್ರತಿಕ್ರಿಯಿಸುತ್ತವೆ. ಈ ಫಲಿತಾಂಶದ ಆಧಾರದ ಮೇಲೆ ಗ್ಲೂಕೋಸ್ ಪ್ರಮಾಣ ಕಂಡು ಹಿಡಿಯಬಹುದು. ಈ ತಂತ್ರದಲ್ಲಿ ಅಂಗಾಂಶಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎನ್ನುವುದು ಅಧ್ಯಯನದಲ್ಲಿ ಕಂಡು ಬಂದಿದೆ ಎಂದು ಐಐಎಸ್ಸಿಯ ಐಎಪಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಯ ಪ್ರಕಾಶ್ ಹೇಳಿದ್ದಾರೆ.

ನಿರ್ದಿಷ್ಟ ದಿಕ್ಕಿನಲ್ಲಿ ಸಾಗುವ ಧ್ರುವೀಕೃತ ಕಿರಣಗಳನ್ನು ಬಳಸಿ ಗ್ಲೂಕೋಸ್ ಅಣುವಿನ ಸಾಂದ್ರತೆ ಮಾತ್ರ ಅಳತೆ ಮಾಡಲಾಗಿದೆ. ಆರೋಗ್ಯಕರ ವ್ಯಕ್ತಿ ದೇಹದಲ್ಲಿ ಊಟಕ್ಕೆ ಮೊದಲು ಮತ್ತು ಊಟದ ನಂತರ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಳೆಯಲು 3 ದಿನಗಳ ಕಾಲ ಪ್ರಾಯೋಗಿಕ ಅಧ್ಯಯನ ಕೂಡ ಮಾಡಲಾಗಿದೆ.

ಈ ಪ್ರಯೋಗಕ್ಕೆ ಬಳಸಿರುವ ಲೇಸರ್‌ ಯಂತ್ರವು ಸಣ್ಣ ಪ್ರಮಾಣದ ಕಿರಣಗಳನ್ನು ಬಿಡುಗಡೆ ಮಾಡುತ್ತದೆ. ದುಬಾರಿಯೂ ಆಗಿದ್ದು, ಹೆಚ್ಚು ಸ್ಥಳಾವಕಾಶ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನಡೆಸಲಾಗುವ ಕ್ಲಿನಿಕಲ್ ಪ್ರಯೋಗಕ್ಕೆ ಗಾತ್ರ ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಯೋಗಾಲಯದ ತಂಡ ಕೆಲಸ ಮಾಡುತ್ತಿದೆ ಎಂದು ಐಎಪಿ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸ್ವಾತಿ ಪದ್ಮನಾಭನ್ ಹೇಳಿದ್ದಾರೆ.

PREV

Recommended Stories

ಬಿಹಾರ ರೀತಿ ಮತಪಟ್ಟಿ ಪರಿಷ್ಕರಣೆಗೆ ರಾಜ್ಯ ಸಜ್ಜು
ಲಿಂಗಾಯತರಿಗೆ ‘ಇತರೆ’ ಗೊಂದಲ