ಬೆನ್ನುಮೂಳೆ ವಿರೂಪಕ್ಕೆ ಶಸ್ತ್ರಚಿಕಿತ್ಸೆ ಉಚಿತ - ₹1.5 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ

ಸಾರಾಂಶ

ರಾಜ್ಯದಲ್ಲಿ ಮಕ್ಕಳು ಸೇರಿ ಬೆನ್ನುಮೂಳೆ ವಿರೂಪ ಸಮಸ್ಯೆ (ಸ್ಪೈನಲ್‌ ಡಿಫಾರ್ಮಿಟಿಸ್‌) ಎದುರಿಸುತ್ತಿರುವ ವ್ಯಕ್ತಿಗಳಿಗೆ ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡುವ ಆದೇಶವನ್ನು ಆರೋಗ್ಯ ಇಲಾಖೆ ಹೊರಡಿಸಿದೆ.

 ಬೆಂಗಳೂರು : ರಾಜ್ಯದಲ್ಲಿ ಮಕ್ಕಳು ಸೇರಿ ಬೆನ್ನುಮೂಳೆ ವಿರೂಪ ಸಮಸ್ಯೆ (ಸ್ಪೈನಲ್‌ ಡಿಫಾರ್ಮಿಟಿಸ್‌) ಎದುರಿಸುತ್ತಿರುವ ವ್ಯಕ್ತಿಗಳಿಗೆ ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡುವ ಆದೇಶವನ್ನು ಆರೋಗ್ಯ ಇಲಾಖೆ ಹೊರಡಿಸಿದೆ.

ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಎಬಿ-ಎಆರ್‌ಕೆ ಯೋಜನೆಯಡಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಜತೆ ನೋಂದಣಿ ಆಗಿರುವ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ಇದಕ್ಕೆ 1.5 ಲಕ್ಷ ರು. ದರ ನಿಗದಿ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಆದೇಶದಲ್ಲಿ ತಿಳಿಸಿದ್ದಾರೆ.

ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ 36 ಚಿಕಿತ್ಸಾ ವಿಧಾನಗಳನ್ನು ಉಚಿತವಾಗಿ ನಡೆಸಲು ಅನುಮತಿ ಇದೆ. ಮಕ್ಕಳಲ್ಲಿ ಕಂಡು ಬರುವ ಸ್ಪೈನಲ್‌ ಡಿಫಾರ್ಮಿಟೀಸ್ (ಬೆನ್ನುಮೂಳೆ ವಿರೂಪ ಸಮಸ್ಯೆ) ಸಮಸ್ಯೆಗಳಾದ ಸ್ಕೊಲಿಯಾಸಿಸ್‌, ಕಿಫೋಸಿಸ್‌, ಲಾರ್ಡೋಸಿಸ್‌ ಸಮಸ್ಯೆಯನ್ನೂ ಚಿಕಿತ್ಸಾ ಪಟ್ಟಿಗೆ ಸೇರಿಸಲು ಬೇಡಿಕೆ ಬಂದಿತ್ತು. ಅದರಂತೆ ಕೆಲ ಷರತ್ತುಗಳೊಂದಿಗೆ ಅನುಮೋದನೆ ನೀಡಲಾಗಿದೆ.

ಚಿಕಿತ್ಸಾ ವಿಧಾನಗಳಿಗೆ ತಜ್ಞ ವೈದ್ಯರ ಸಮಿತಿ ಶಿಫಾರಸಿನಂತೆ ಪ್ರತಿ ಶಸ್ತ್ರಚಿಕಿತ್ಸೆಗೆ 1.5 ಲಕ್ಷ ರು. ನಿಗದಿಪಡಿಸಲಾಗಿದ್ದು, ಈ ಪ್ಯಾಕೇಜ್‌ ಹಾಗೂ ದರ ನಿಗದಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯುವುದು ಅಗತ್ಯ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಅನುಮೋದಿತ ಪ್ಯಾಕೇಜ್‌ ದರದ ಶೇ.75 ರಷ್ಟು ಪಾವತಿಸಬೇಕು. ಈ ಪ್ಯಾಕೇಜ್‌ ಅಡಿ ಯಾವುದೇ ಚಿಕಿತ್ಸಾ ಕ್ರಮವನ್ನು ಹೊಸದಾಗಿ ಸೇರಿಸುವ ಅಥವಾ ಕೈಬಿಡುವ ಸಂದರ್ಭ ಉಂಟಾದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಸರ್ಕಾರಿ ಆಸ್ಪತ್ರೆಗಳಿಗೆ 8 ದಂತ ವೈದ್ಯರ ನೇಮಕ

ಇದೇ ವೇಳೆ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ 8 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳ ನೇಮಕಕ್ಕೂ ಎಬಿ-ಎಆರ್‌ಕೆ ಅಡಿ ಅನುಮೋದನೆ ನೀಡಿ ಇಲಾಖೆ ಆದೇಶ ಹೊರಡಿಸಿದೆ. ಮುಧೋಳ ತಾಲೂಕು ಆಸ್ಪತ್ರೆ, ಬಾಗಲಕೋಟೆಯ ಗುಳೇದಗುಡ್ಡ, ಬೆಳಗಾವಿಯ ಮೂಡಲಗಿ, ಬೀದರ್‌ನ ಹುಲಸೂರು, ತುಮಕೂರಿನ ತಿರುಮಣಿ, ವಿಜಯಪುರದ ತಾಳಿಕೋಟೆ ಹಾಗೂ ಅಲ್ಮೇಲ್‌, ಯಾದಗಿರಿಯ ಕೊಡೈಕಲ್‌ ಆಸ್ಪತ್ರೆಗಳಿಗೆ ದಂತ ಆರೋಗ್ಯಾಧಿಕಾರಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Share this article