ರಾಜ್ಯದಲ್ಲಿ ವಿದ್ಯುತ್‌ ವಿತರಣೆಗೆ ಟಾಟಾ ಬೈ ಬೈ

Published : Jul 04, 2026, 07:05 AM IST
 Electricity

ಸಾರಾಂಶ

ಎಸ್ಕಾಂಗಳ ವಿದ್ಯುತ್‌ ವಿತರಣೆ ಖಾಸಗೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ವಿದ್ಯುತ್‌ ವಿತರಣೆಗೆ ಅನುಮತಿ ಕೋರಿ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದ ಟಾಟಾ ಪವರ್ ಕಂಪನಿ ಲಿಮಿಟೆಡ್ ತನ್ನ ಅರ್ಜಿ ಹಿಂಪಡೆದಿದೆ.

ಬೆಂಗಳೂರು :  ಎಸ್ಕಾಂಗಳ ವಿದ್ಯುತ್‌ ವಿತರಣೆ ಖಾಸಗೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ವಿದ್ಯುತ್‌ ವಿತರಣೆಗೆ ಅನುಮತಿ ಕೋರಿ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದ ಟಾಟಾ ಪವರ್ ಕಂಪನಿ ಲಿಮಿಟೆಡ್ ತನ್ನ ಅರ್ಜಿ ಹಿಂಪಡೆದಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಟಾಟಾ ಕಂಪನಿಯ ಅರ್ಜಿ ಹಾಗೂ ಆಕ್ಷೇಪಣೆಗಳ ಬಗ್ಗೆ ಜು.3ರಂದು ವಿಚಾರಣೆ ನಡೆಸಬೇಕಿತ್ತು. ಇದರ ನಡುವೆಯೇ ಖಾಸಗೀಕರಣಕ್ಕೆ ಸರ್ಕಾರ, ಎಸ್ಕಾಂಗಳು ಹಾಗೂ ವಿವಿಧ ಎಸ್ಕಾಂಗಳ ಸಿಬ್ಬಂದಿ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಯಲ್ಲಿ ಟಾಟಾ ಕಂಪನಿ ತನ್ನ ಅರ್ಜಿ ಹಿಂಪಡೆದಿದೆ. ತನ್ಮೂಲಕ ರಾಜ್ಯದಲ್ಲಿ ವಿದ್ಯುತ್‌ ವಿತರಣೆ ಖಾಸಗೀಕರಣಕ್ಕೆ ತಾತ್ಕಾಲಿಕವಾಗಿ ಬ್ರೇಕ್‌ ಬಿದ್ದಂತಾಗಿದೆ.

ಕಾರಣ ಹೇಳದೆ ಅರ್ಜಿ ವಾಪಸು:

ಕೆಇಆರ್‌ಸಿಯಲ್ಲಿ ಶುಕ್ರವಾರ ನಿಗದಿಯಾಗಿದ್ದ ವಿಚಾರಣೆಗೆ ಹಾಜರಾಗಿದ್ದ ಟಾಟಾ ಕಂಪನಿ ಪರ ವಕೀಲರು ವಿದ್ಯುತ್‌ ವಿತರಣೆ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿ ವಾಪಸ್‌ ಪಡೆಯುವುದಾಗಿ ಹೇಳಿದರು. ಅದಕ್ಕೆ ಆಯೋಗ ಒಪ್ಪಿಗೆ ಸೂಚಿಸಿ, ಪ್ರಕರಣ ಇತ್ಯರ್ಥಗೊಳಿಸಿದರು. ಆದರೆ, ತಾವು ಅರ್ಜಿ ಹಿಂಪಡೆಯಲು ನಿರ್ದಿಷ್ಟ ಕಾರಣಗಳನ್ನು ಮಾತ್ರ ಕಂಪನಿ ತಿಳಿಸಿಲ್ಲ. ಇದರ ಬೆನ್ನಲ್ಲೇ ವಿದ್ಯುತ್‌ ನೌಕರರ ಸಂಘಗಳಿಂದ ಹರ್ಷ ವ್ಯಕ್ತವಾಗಿದೆ. ಇದು ತಮ್ಮ ಹೋರಾಟಕ್ಕೆ ಸಂದ ಜಯ ಎಂದು ಹೇಳಿಕೊಂಡಿವೆ.

ಲಕ್ಷಾಂತರ ಆಕ್ಷೇಪಣೆಗಳು ಸಲ್ಲಿಕೆಯಾಗಿತ್ತು:

ಟಾಟಾ ಪವರ್‌ ಕಂಪನಿಯು 2003ರ ವಿದ್ಯುತ್‌ ಕಾಯ್ದೆಯ ಕಲಂ 14 ಮತ್ತು 15ರ ಅಡಿ ವಿದ್ಯುತ್‌ ವಿತರಣೆಗೆ ಪರವಾನಗಿ ಕೋರಿ ಕೆಇಆರ್‌ಸಿಗೆ ಕಳೆದ ಮಾರ್ಚ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಬೆಸ್ಕಾಂ ಸೇರಿ 16 ಜಿಲ್ಲೆಗಳಲ್ಲಿ ವಿದ್ಯುತ್‌ ವಿತರಣೆಗೆ ಆಪೇಕ್ಷೆ ವ್ಯಕ್ತಪಡಿಸಿತ್ತು.

ಈ ಬಗ್ಗೆ ಕೆಇಆರ್‌ಸಿ ಸೂಚನೆಯಂತೆ ಕಂಪನಿಯು ಮೇ 25ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿತ್ತು. ಈ ಸಂಬಂಧ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಜೂ.23 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಇದಕ್ಕೆ ಲಕ್ಷಾಂತರ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಕೊನೆಯ ದಿನ ಎಲ್ಲ ಎಸ್ಕಾಂಗಳೂ ಇದನ್ನು ವಿರೋಧಿಸಿ ಆಕ್ಷೇಪಣೆ ಸಲ್ಲಿಸುವ ಮೂಲಕ ಸಾಥ್‌ ನೀಡಿದ್ದವು.

ಆಕ್ಷೇಪಣೆ ಜತೆಗೆ ರೈತ ಸಂಘಟನೆಗಳು, ವಿದ್ಯುತ್‌ ನೌಕರರಿಂದ ಅಲ್ಲಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು.

ವಿದ್ಯುತ್‌ ಖಾಸಗೀಕರಣಕ್ಕೆ ಸಿಎಂ ವಿರೋಧ:

ಗುರುವಾರ ನಡೆದ ಸಚಿವ ಸಂಪುಟದಲ್ಲೂ ವಿದ್ಯುತ್‌ ವಿತರಣೆ ಖಾಸಗೀಕರಣದ ವಿರುದ್ಧ ಚರ್ಚೆಯಾಗಿತ್ತು. ನಾಲ್ಕು ದಿನಗಳ ಹಿಂದೆ ಅರಮನೆ ಮೈದಾನದಲ್ಲಿ ಕೆಪಿಟಿಸಿಎಲ್‌ ನೌಕರರ ಸಂಘದಿಂದ ಮುಖ್ಯಮಂತ್ರಿಗಳಿಗೆ ಏರ್ಪಡಿಸಿದ್ದ ಸನ್ಮಾನದಲ್ಲಿ ಖಾಸಗೀಕರಣಕ್ಕೆ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಎಸ್ಕಾಂಗಳಿಂದ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದರು.

ಇದರ ನಡುವೆ ಬುಧವಾರ ಕೆಇಆರ್‌ಸಿ ಸದಸ್ಯರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ಬೆಳವಣಿಗೆಗಳ ಬಳಿಕ ಇದೀಗ ಟಾಟಾ ಕಂಪೆನಿ ಅರ್ಜಿ ಹಿಂಪಡೆದಿದೆ.

ಬೆಸ್ಕಾಂ ಸಲ್ಲಿಸಿದ್ದ ಆಕ್ಷೇಪವೇನು?:

ಟಾಟಾ ಪವರ್‌ ಕಂಪನಿ ಪರವಾನಗಿ ಕೋರಿರುವ ಪ್ರದೇಶದಲ್ಲಿ ಸ್ವಂತ ವಿದ್ಯುತ್ ವಿತರಣಾ ಜಾಲ ನಿರ್ಮಿಸುವ ಕುರಿತು ಸ್ಪಷ್ಟ ಯೋಜನೆ ಸಲ್ಲಿಸಿಲ್ಲ. ಬದಲಾಗಿ, ಬೆಸ್ಕಾಂನ ಈಗಿರುವ ಮೂಲಸೌಕರ್ಯವನ್ನು ಅವಲಂಬಿಸಿ ವಿದ್ಯುತ್ ಸರಬರಾಜು ಮಾಡಲು ಉದ್ದೇಶಿಸಿರುವುದಾಗಿ ಹೇಳಿದೆ.

ಇನ್ನು ಅಲ್ಪಾವಧಿ ವಿದ್ಯುತ್ ಖರೀದಿ ಮೇಲಿನ ಹೆಚ್ಚಿನ ಅವಲಂಬನೆಯು ಗ್ರಾಹಕರಿಗೆ ಹೆಚ್ಚುವರಿ ವೆಚ್ಚದ ಭಾರ ಉಂಟುಮಾಡುವ ಸಾಧ್ಯತೆಯಿದೆ.

ಸಬ್ಸಿಡಿ ಪಡೆಯುವ ಸಾಮನ್ಯ ಗ್ರಾಹಕರಿಗೆ ತೊಂದರೆಯಾಗಬಹುದು. ಅಲ್ಲದೇ ಬೆಸ್ಕಾಂನ ಆರ್ಥಿಕ ಸ್ಥಿರತೆಗೆ ಧಕ್ಕೆ ಉಂಟಾಗಬಹುದು. ಸಬ್ಸಿಡಿ ವ್ಯವಸ್ಥೆ ದುರ್ಬಲಗೊಳ್ಳುವ ಅಪಾಯವಿದೆ. ಬೆಸ್ಕಾಂನ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಗಳು, ಸಾರ್ವಜನಿಕ ಸೇವಾ ಬಾಧ್ಯತೆಗಳಿಗೆ ಧಕ್ಕೆ ಉಂಟಾಗುತ್ತವೆ. ಜತೆಗೆ ಗ್ರಾಹಕರಿಗೆ ಹಣಕಾಸಿನ ಹೊರೆ ಹೆಚ್ಚುವ ಸಾಧ್ಯತೆ ಇದೆ ಎಂದು ಬೆಸ್ಕಾಂ ಆತಂಕ ವ್ಯಕ್ತಪಡಿಸಿತ್ತು.

ಟಿಪಿಸಿಎಲ್‌ನ ವ್ಯವಹಾರ ಮಾದರಿ ಹೆಚ್ಚುವರಿ ದರ ಪಾವತಿಸುವ ಗ್ರಾಹಕರನ್ನು ಆಕರ್ಷಿಸುವ ಮೇಲೆ ಕೇಂದ್ರೀಕೃತವಾಗಿದೆ. ಇದರಿಂದ ಬೆಸ್ಕಾಂ ತನ್ನ 80% ಕ್ರಾಸ್ ಸಬ್ಸಿಡಿ ಪಡೆಯುವ ವರ್ಗದ ಗ್ರಾಹಕರಿಗೆ ಸೇವೆ ಒದಗಿಸಲು ಅವಲಂಬಿಸಿರುವ ಆರ್ಥಿಕ ಆಧಾರವೇ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

1. ರಾಜ್ಯದಲ್ಲಿ ವಿದ್ಯುತ್‌ ವಿತರಣೆಯನ್ನು ಖಾಸಗಿ ಕಂಪನಿಗೆ ವಹಿಸುವ ಯತ್ನ ಕುರಿತು ಮೇ 26ರಂದು ‘ಕನ್ನಡಪ್ರಭ’ ವರದಿ ಮಾಡಿತ್ತು.

2. ವಿದ್ಯುತ್‌ ವಿತರಣೆ ಖಾಸಗೀಕರಣ ಮಾಡಲ್ಲ ಎಂದು ಸಿಎಂ ಡಿಕೆಶಿ ಇಂಗಿತ ವ್ಯಕ್ತಪಡಿಸಿದ್ದ ಬಗ್ಗೆ ಜೂ.30ರಂದು ‘ಕನ್ನಡಪ್ರಭ’ ವರದಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಡೇರಿ ಸಿಬ್ಬಂದಿ ಆರೋಗ್ಯ ಕಾಳಜಿ ವಹಿಸಿ: ಬಮೂಲ್‌ ನಿರ್ದೇಶಕ
ಮಾಲೀಕನಿದ್ದರೂ ಬೇರೊಬ್ಬರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿ