ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಚಿತ್ರರಂಗಕ್ಕೆ ಶೇ.50 ಲಾಭವೇ ಆಗಿದೆ: ಸಚಿವ ಸಂತೋಷ್‌ ಲಾಡ್‌

ಸಾರಾಂಶ

ಈಗ ಎಲ್ಲೆಡೆ ಸದ್ದು ಮಾಡುತ್ತಿರುವ ಎಐ(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದಿಂದ ಚಿತ್ರರಂಗಕ್ಕೆ ಶೇ.50ರಷ್ಟು ಲಾಭವೇ ಇದೆ ಎಂದು ಸಚಿವ ಸಂತೋಷ್‌ ಲಾಡ್‌ ಅವರು ಅಭಿಪ್ರಾಯಪಟ್ಟರು.

ಬೆಂಗಳೂರು : ಈಗ ಎಲ್ಲೆಡೆ ಸದ್ದು ಮಾಡುತ್ತಿರುವ ಎಐ(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದಿಂದ ಚಿತ್ರರಂಗಕ್ಕೆ ಶೇ.50ರಷ್ಟು ಲಾಭವೇ ಇದೆ ಎಂದು ಸಚಿವ ಸಂತೋಷ್‌ ಲಾಡ್‌ ಅವರು ಅಭಿಪ್ರಾಯಪಟ್ಟರು.

ಶನಿವಾರ ನಡೆದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಹುವೇಗವಾಗಿ ತಂತ್ರಜ್ಞಾನ ಮುಂದುವರಿಯುತ್ತಿದೆ. ಈಗ ಎಐ ಸುತ್ತ ‘ಹ್ಯೂಮನ್ಸ್‌ ಇನ್‌ ದಿ ಲೂಪ್‌’ ಹೆಸರಿನ ಭಾರತೀಯ ಸಿನಿಮಾ ಮಾಡಿದ್ದು, ಅದು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಭಾರತೀಯ ಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನೂ ಗಳಿಸಿದೆ ಎಂದು ಈಗಷ್ಟೆ ತಿಳಿಯಿತು. ಚಿತ್ರರಂಗವನ್ನು ಎಐ ತಂತ್ರಜ್ಞಾನ ಆವರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಎಐ ತಂತ್ರಜ್ಞಾನದಿಂದ ಚಿತ್ರರಂಗಕ್ಕೆ ಶೇ.50ರಷ್ಟು ಲಾಭವೇ ಇದೆ’ ಎಂದು ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಮಾತನಾಡಿ, ‘ಈ ಬಾರಿ ಚಿತ್ರೋತ್ಸವಕ್ಕೆ 52 ಸಾವಿರ ಜನ ಆಗಮಿಸಿ ಸಿನಿಮಾ ವೀಕ್ಷಿಸಿದ್ದಾರೆ. ಕಳ‍ೆದ ವರ್ಷ 2 ಸಾವಿರ ಜನ ನೋಂದಣಿ ಮಾಡಿಸಿದ್ದರು, ಈ ಬಾರಿ 4,317 ಮಂದಿ ನೋಂದಣಿ ಮಾಡಿಕೊಂಡಿದ್ದರು. 16ನೇ ಬೆಂಗಳೂರು ಚಿತ್ರೋತ್ಸವಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ’ ಎಂದರು.

ರಾಜ್ಯ ಸರ್ಕಾರದ ಕಾರ್ಯದರ್ಶಿ ಬಿ.ಬಿ. ಕಾವೇರಿ, ವಾರ್ತಾ ಇಲಾಖೆ ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್‌, ಚಿತ್ರೋತ್ಸವದ ರಾಯಭಾರಿ ನಟ ಕಿಶೋರ್‌, ಚಿತ್ರೋತ್ಸವದ ಕಲಾ ನಿರ್ದೇಶಕ ಎನ್‌ ವಿದ್ಯಾಶಂಕರ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕನ್ನಡ ವಿಭಾಗದ ಸ್ಪರ್ಧೆಯಲ್ಲಿ

‘ಮಿಕ್ಕ ಬಣ್ಣದ ಹಕ್ಕಿ’ ಆಯ್ಕೆ

ಚಿತ್ರೋತ್ಸವದ ಕನ್ನಡ ವಿಭಾಗದಲ್ಲಿ ಮೊದಲ ಅತ್ಯುತ್ತಮ ಚಿತ್ರವಾಗಿ ಮನೋಹರ್‌ ಕೆ.ನಿರ್ದೇಶನದ ಕನ್ನಡದ ‘ಮಿಕ್ಕ ಬಣ್ಣದ ಹಕ್ಕಿ’, ದ್ವಿತೀಯ ಅತ್ಯುತ್ತಮ ಚಿತ್ರವಾಗಿ ಸಂತೋಷ್‌ ಮಾಡ ನಿರ್ದೇಶನದ ತುಳು ಭಾಷೆಯ ‘ಪಿದಾಯಿ’ ಹಾಗೂ ತೃತೀಯ ಅತ್ಯುತ್ತಮ ಚಿತ್ರವಾಗಿ ಅನೀಶ್‌ ಪೂಜಾರಿ ನಿರ್ದೇಶನದ ‘ದಸ್ಕತ್‌’ ಚಿತ್ರಗಳು ಪ್ರಶಸ್ತಿ ಪಡೆದಿವೆ. ನೆಟ್‌ಪ್ಯಾಕ್‌ ಪ್ರಶಸ್ತಿಯನ್ನು ಕೃಷ್ಣೇಗೌಡ ನಿರ್ದೇಶನದ ‘ಲಚ್ಚಿ’ ಚಿತ್ರವು ತನ್ನದಾಗಿಸಿಕೊಂಡಿತು. ಇನ್ನು ಜೀವಮಾನ ಸಾಧನೆಗಾಗಿ ಬಾಲಿವುಡ್‌ ನಟಿ ಶಬಾನಾ ಆಜ್ಮಿ ಅವರನ್ನು ಆಯ್ಕೆ ಮಾಡಿದ್ದು, ಅವರ ಪರವಾಗಿ ಹಿರಿಯ ನಟಿ ಹಾಗೂ ರಂಗಸಾಧಕಿ ಆರುಂಧತಿ ನಾಗ್‌ ಅವರು ಆಗಮಿಸಿ ಪ್ರಶಸ್ತಿ ಸ್ವೀಕರಿಸಿದರು. ಕನ್ನಡಮಾತ್ರವಲ್ಲದೆ ಏಷ್ಯನ್‌ ವಿಭಾಗ, ಇಂಡಿಯನ್‌ ಸಿನಿಮಾ ವಿಭಾಗದಲ್ಲೂ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಇರಾನಿ ಭಾಷೆಯ ಇನ್‌ ದಿ ಲ್ಯಾಂಡ್‌ ಆಫ್‌ ಬ್ರದರ್‌

ಏಷ್ಯನ್‌ ಸಿನಿಮಾ ವಿಭಾಗದ ಅತ್ಯುತ್ತಮ ಚಿತ್ರ

ಮೊದಲ ಅತ್ಯುತ್ತಮ ಚಿತ್ರ: ಇನ್‌ ದಿ ಲ್ಯಾಂಡ್‌ ಆಫ್‌ ಬ್ರದರ್(ಇರಾನಿ ಭಾಷೆ)

ದ್ವಿತೀಯ ಅತ್ಯುತ್ತಮ ಚಿತ್ರ: ರೀಡಿಂಗ್‌ ಲೊಲಿಟಾ ಇನ್‌ ಟೆಹರಾನ್‌(ಇಸ್ರೇಲಿ ಭಾಷೆ)

ತೃತೀಯ ಅತ್ಯುತ್ತಮ ಚಿತ್ರ: ಸಬಾ, ಬಾಂಗ್ಲಾದೇಶ (ಬೆಂಗಾಲಿ ಭಾಷೆ)

ವಿಶೇಷ ತೀರ್ಪುಗಾರರ ಪ್ರಶಸ್ತಿ : ಫೆಮಿನಿಚಿ ಫಾತಿಮಾ (ಮಲಯಾಳಂ) ಹಾಗೂ ಫೈರ್‌ (ಹಿಂದಿ)

ಇಂಡಿಯನ್‌ ಸಿನಿಮಾ ವಿಭಾಗದಲ್ಲಿ

ಹ್ಯೂಮನ್‌ ಇನ್‌ ದಿಲೂಪ್‌ಗೆ ಪ್ರಶಸ್ತಿ

ಮೊದಲ ಅತ್ಯುತ್ತಮ ಚಿತ್ರ: ಹ್ಯೂಮನ್ಸ್‌ ಇನ್‌ ದಿ ಲೂಪ್‌, ಹಿಂದಿ

ದ್ವಿತೀಯ ಅತ್ಯುತ್ತಮ ಚಿತ್ರ: ಲೆವೆಲ್‌ ಕ್ರಾಸ್‌, ಮಲಯಾಳಂ

ತೃತೀಯ ಅತ್ಯುತ್ತಮ ಚಿತ್ರ: ಸ್ವಾಹಾ, ಹಿಂದಿ

ಫಿಪ್ರೆಸ್ಸಿ ಪ್ರಶಸ್ತಿ : ಹ್ಯೂಮನ್ಸ್‌ ಇನ್‌ ದಿ ಲೂಪ್‌, ಹಿಂದಿ

ಹಣ ಕಳೆದುಕೊಂಡಿದ್ದೇನೆ:

‘ನಾನು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ಲಾಭ ಮಾಡಿಲ್ಲ, ಹಣ ಕಳೆದುಕೊಂಡಿದ್ದೇನೆ. ಪುಣ್ಯ ಹೀರೋ ಆಗಿ ಸಿನಿಮಾ ಮಾಡಿಲ್ಲ. ನನಗೆ ಚಿತ್ರರಂಗದ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಈ ಕಾರಣಕ್ಕೆ ಚಿತ್ರರಂಗದಲ್ಲಿ ಕೆಲಸ ಮಾಡುವವರ ಸಾಮಾಜಿಕ, ಆರ್ಥಿಕ ಭದ್ರತೆಗಾಗಿ ಸಿನಿ ಬಿಲ್‌ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ನಾನು ಆಸಕ್ತಿ ವಹಿಸಿ ಸಿಎಂ ಸಿದ್ದರಾಮಯ್ಯ ಬಳಿ ಕೇಳಿಕೊಂಡು ಈ ಯೋಜನೆ ಘೋಷಣೆಯಾಗುವಂತೆ ಮಾಡಿದ್ದೇನೆ. ನಿರ್ಮಾಪಕರಿಗೆ ಈ ವಿಚಾರದಲ್ಲಿ ಸಹಮತ ಇಲ್ಲ ಎಂಬುದು ಗೊತ್ತಾಗುತ್ತಿದೆ. ಆದರೂ ಇದು ಚಿತ್ರರಂಗದವರ ಸಾಮಾಜಿಕ ಭದ್ರತೆ ಕಾಯ್ದುಕೊಳ್ಳುತ್ತದೆ’ ಎಂದು ಲಾಡ್‌ ಭರವಸೆ ನೀಡಿದರು.

‘ಭಾರತದಲ್ಲಿ 10 ಸಾವಿರ, ದಕ್ಷಿಣ ಭಾರತದಲ್ಲಿ 5 ಸಾವಿರ ಚಿತ್ರಮಂದಿರಗಳಿವೆ. ಪ್ರತಿ ವರ್ಷ ಜಗತ್ತಿನಾದ್ಯಂತ ವರ್ಷಕ್ಕೆ 10 ಸಾವಿರ ಸಿನಿಮಾ ನಿರ್ಮಾಣ ಆಗುತ್ತಿವೆ. ಭಾರತದಲ್ಲಿ 1,500 ಸಿನಿಮಾ ಸಿದ್ಧವಾಗುತ್ತಿವೆ. ನಮ್ಮ ಚಿತ್ರರಂಗ ಬದಲಾಗಬೇಕೆಂದರೆ ಏಕಪರದೆ ಚಿತ್ರಮಂದಿರಗಳ ರೂಪ ಬದಲಾಗಬೇಕಿದೆ. ನಮ್ಮ ಸಂಸ್ಕೃತಿ ಉಳಿಯಬೇಕೆಂದರೆ ನಮ್ಮ ಮಾತೃ ಭಾಷೆ ಉಳಿಯಬೇಕು. ಹೀಗಾಗಿ ಮಾತೃಭಾಷೆಯಲ್ಲಿ ತಯಾರಾಗುವ ಚಿತ್ರಗಳಿಗೆ ಥಿಯೇಟರ್‌ಗಳು ಸಿಗಬೇಕು. ತುಳುಭಾಷೆಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂಬ ಕೂಗಿದೆ. ತುಳು ಮಾತ್ರವಲ್ಲ, ಎಲ್ಲಾ ಪ್ರಾದೇಶಿಕ ಭಾಷೆಗಳ ಚಿತ್ರಗಳ ಪ್ರದರ್ಶನಕ್ಕೂ ಚಿತ್ರಮಂದಿರಗಳು ಸಿಗುವಂಥ ವಾತಾರಣ ನಿರ್ಮಿಸಬೇಕಿದೆ’ ಎಂದರು.

‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ನಾನು ಮಹಿಳೆಯರಿಗೆ ಒಂದು ಮಾತು ಹೇಳುತ್ತೇನೆ. ಡಾ.ಬಿ.ಆರ್‌.ಅಂಬೇಡ್ಕರ್‌ ಕೇವಲ ಮೀಸಲಾತಿ ಮಾತ್ರ ಜಾರಿಗೆ ತಂದಿಲ್ಲ, ಹಿಂದೂ ಕೋಡ್‌ ಬಿಲ್‌ ಮೂಲಕ ಮಹಿಳೆಯರಿಗೆ ತಂದೆ ಮತ್ತು ಗಂಡನ ಆಸ್ತಿಯಲ್ಲಿ ಹಕ್ಕು ಸಿಗುವ ಕಾನೂನನ್ನೂ ಜಾರಿಗೆ ತಂದಿದ್ದಾರೆ. ಆ ಮೂಲಕ ಹೆಣ್ಣುಮಕ್ಕಳ ಸಮಾನತೆಗೆ ಗಟ್ಟಿಯಾಗಿ ಧ್ವನಿ ಎತ್ತಿದರು. ಹೀಗಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ರನ್ನು ಪ್ರತಿಯೊಬ್ಬ ಮಹಿಳೆ ನೆನಪಿಸಿಕೊಳ್ಳಬೇಕಿದೆ’ಎಂದು ಲಾಡ್‌ ತಿಳಿಸಿದರು.

Share this article