ಅನುಮತಿ ಪಡೆಯದೆ ರ್‍ಯಾಲಿ ಮಾಡಿದರೆ 3 ವರ್ಷ ಜೈಲು ಶಿಕ್ಷೆ?

Published : Aug 17, 2026, 04:57 AM IST
vidhan soudha

ಸಾರಾಂಶ

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ, ಸಂಸ್ಥೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ರೂಪಿಸಿರುವ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026’ರ ಅಡಿಯ ಎಲ್ಲಾ ಅಪರಾಧಗಳನ್ನು ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧ

 ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ, ಸಂಸ್ಥೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ರೂಪಿಸಿರುವ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026’ರ ಅಡಿಯ ಎಲ್ಲಾ ಅಪರಾಧಗಳನ್ನು ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವುದು ಸೇರಿ ಹಲವು ಕಠಿಣ ಶಿಕ್ಷೆ ಹಾಗೂ ದಂಡದ ಅಂಶಗಳನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿದು ಬಂದಿದೆ.

ಯಾವುದೇ ಖಾಸಗಿ ವ್ಯಕ್ತಿ, ಸಂಘ-ಸಂಸ್ಥೆಗಳು ಸರ್ಕಾರದ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸಿದರೆ ಅದನ್ನು ಸಾರ್ವಜನಿಕ ಆಸ್ತಿಯ ಅತಿಕ್ರಮಣವೆಂದು ಪರಿಗಣಿಸಿ ಶಿಕ್ಷೆಗೆ ಗುರಿಪಡಿಸಬಹುದು. ನಿಯಮ, ಷರತ್ತು ಉಲ್ಲಂಘಿಸಿದ ಆರೋಪಿಯನ್ನು ಸಬ್-ಇನ್ಸ್‌ಪೆಕ್ಟರ್‌ ಹುದ್ದೆಗಿಂತ ಕಡಿಮೆಯಿಲ್ಲದ ಪೊಲೀಸ್ ಅಧಿಕಾರಿ ವಾರಂಟ್ ಇಲ್ಲದೆ ಬಂಧಿಸಬಹುದಾದ ಅಧಿಕಾರ, ಇದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಹಾಗೂ ಮೊದಲ ಬಾರಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರು. ವರೆಗೆ ದಂಡ ವಿಧಿಸುವ ಕಠಿಣ ನಿಯಮಗಳನ್ನು ಉಲ್ಲೇಖಿಸಲಾಗಿದೆ ಎಂಬ ಮೂಲಗಳು ತಿಳಿಸಿವೆ.

10ಕ್ಕೂ ಹೆಚ್ಚು ಜನರ ಗುಂಪು ಸಾರ್ವಜನಿಕ ಆಸ್ತಿಯಲ್ಲಿ ಸಂಗೀತ, ಸಮಾರಂಭ ಸೇರಿ ಇತರೆ ಸಾಮಾನ್ಯ ಉದ್ದೇಶದಿಂದ ನಡೆಸುವ ಕಾರ್ಯಕ್ರಮಗಳು, ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಮೆರವಣಿಗೆ, ಧಾರ್ಮಿಕ ಸಭೆಗಳು, ಸಾಮಾಜಿಕ ಸಂಘಟನೆ ಕಾರ್ಯಕ್ರಮಗಳು ವಿಧೇಯಕದ ವ್ಯಾಪ್ತಿಗೆ ಬರುತ್ತದೆ ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026’ಕ್ಕೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿತ್ತು. ಸರ್ಕಾರ ಪ್ರಸಕ್ತ ರಾಜ್ಯ ವಿಧಾನಮಂಡದ ಅಧಿವೇಶನದಲ್ಲೇ ಉಭಯ ಸದನಗಳಲ್ಲಿ ಈ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆದು ಜಾರಿಗೊಳಿಸಲು ಮುಂದಾಗಿದೆ. ರಾಜ್ಯದಲ್ಲಿ ರಾಜ್ಯಾದ್ಯಂತ ಸಾರ್ವಜನಿಕ ಆಸ್ತಿಯ ಬಳಕೆ ನಿಯಂತ್ರಿಸುವ ನಿಯಮಗಳು ಮತ್ತು ಕಾರ್ಯವಿಧಾನಗಳಲ್ಲಿ ಏಕರೂಪತೆ ತರಲು ಹಾಗೂ ಕಾಲ್ತುಳಿತದಂಥ ಅಪಘಾತ, ಸನ್ನಿವೇಶಗಳಿಗೆ ಕಾರಣವಾಗುವ ಅನಧಿಕೃತ ಸಾಮೂಹಿಕ ಸಭೆ, ಸಮಾರಂಭಗಳನ್ನು ನಿಯಂತ್ರಿಸುವ ಸಲುವಾಗಿ ಈ ವಿಧೇಯಕ ರೂಪಿಸಲು ಒಂದು ಕಾರಣವೆಂದು ಸರ್ಕಾರ ಉಲ್ಲೇಖಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಅಪರಾಧ ಪುನರಾವರ್ತನೆಯಾದರೆ

5 ವರ್ಷ ಜೈಲು, 10 ಲಕ್ಷವರೆಗೆ ದಂಡ

ಇನ್ನು, ಶಿಕ್ಷೆ ಪ್ರಮಾಣದ ಪೈಕಿ ಎರಡನೇ ಅಥವಾ ಅದಕ್ಕಿಂತ ಹೆಚ್ಚು ಬಾರಿ ಅಪರಾಧ ಪುನರಾವರ್ತನೆಯಾದರೆ 5 ವರ್ಷವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರು. ವರೆಗೆ ದಂಡ ವಿಧಿಸಬಹುದಾದ ಪ್ರಸ್ತಾವನೆ ವಿಧೇಯದಲ್ಲಿ ಮಾಡಲಾಗಿದೆ. ಅಲ್ಲದೆ, ನಿರಂತರ ಉಲ್ಲಂಘನೆಗಳ ಅಪರಾಧ ಸಾಬೀತಾದ ನಂತರ ದಿನಕ್ಕೆ 5,000 ರು.ವರೆಗೆ ಹೆಚ್ಚುವರಿ ದಂಡ ವಿಧಿಸಬಹುದು.

ವಿಧೇಯಕದಡಿ ಉಪ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು, ಸರ್ಕಾರದಿಂದ ಅಧಿಕಾರ ಪಡೆದ ಇತರ ಅಧಿಕಾರಿಗಳು, ಕಾನೂನಿನಡಿ ಅಧಿಕಾರ ಚಲಾಯಿಸಲು ಸಮರ್ಥ ಅಧಿಕಾರಿಗಳಾಗಿರುತ್ತಾರೆ. 10ಕ್ಕೂ ಹೆಚ್ಚು ಜನರ ಗುಂಪು ಸಾರ್ವಜನಿಕ ಆಸ್ತಿಯಲ್ಲಿ ಸಂಗೀತ, ಸಮಾರಂಭ ಸೇರಿ ಇತರೆ ಸಾಮಾನ್ಯ ಉದ್ದೇಶದಿಂದ ನಡೆಸುವ ಕಾರ್ಯಕ್ರಮಗಳು, ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಮೆರವಣಿಗೆ, ಧಾರ್ಮಿಕ ಸಭೆಗಳು, ಸಾಮಾಜಿಕ ಸಂಘಟನೆ ಕಾರ್ಯಕ್ರಮಗಳು ವಿಧೇಯಕದ ವ್ಯಾಪ್ತಿಗೆ ಬರುತ್ತದೆ ಎಂದು ಉಲ್ಲೇಖಿಸಲಾಗಿದೆ. ಇನ್ನು, ವಿವಾಹ, ಅಂತ್ಯಕ್ರಿಯೆ ಮೆರವಣಿಗೆಗಳು, ಅಸಂಘಟಿತ ಸಭೆಗಳು, ಶಿಕ್ಷಣ, ಕ್ರೀಡೆ, ವಿರಾಮ, ಮನರಂಜನೆ ಮತ್ತು ಅಂತಹ ಇತರೆ ಯಾವುದೇ ಉದ್ದೇಶಗಳಿಗಾಗಿ ನಡೆಸುವ ಕಾರ್ಯಕ್ರಮಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.

ವಿಧೇಯಕದಲ್ಲಿ ಏನಿದೆ?

- ಖಾಸಗಿ ವ್ಯಕ್ತಿ, ಸಂಘ-ಸಂಸ್ಥೆಗಳು ಸರ್ಕಾರದ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸುವಂತಿಲ್ಲ

- ಹಾಗೊಂದು ವೇಳೆ ನಡೆಸಿದರೆ ಆರೋಪಿಯನ್ನು ಎಸ್ಸೈ ಹುದ್ದೆಗಿಂತ ಕಡಿಮೆ ಇಲ್ಲದ ಪೊಲೀಸ್‌ ಅಧಿಕಾರಿಗೆ ಬಂಧಿಸುವ ಅಧಿಕಾರ

- ಇದನ್ನು ಬೇಲ್‌ರಹಿತ ಅಪರಾಧವಾಗಿ ಪರಿಗಣಿಸುವ, ಮೊದಲ ಬಾರಿ 3 ವರ್ಷವರೆಗೆ ಜೈಲು, ₹5 ಲಕ್ಷ ವರೆಗೆ ದಂಡ ವಿಧಿಸಲು ಅವಕಾಶ

- ನಿರಂತರ ಉಲ್ಲಂಘನೆಗಳ ಅಪರಾಧ ಸಾಬೀತಾದ ನಂತರ ದಿನಕ್ಕೆ 5,000 ರು.ವರೆಗೆ ಹೆಚ್ಚುವರಿ ದಂಡ ವಿಧಿಸಲು ಅವಕಾಶ ನೀಡಲಿದೆ ಬಿಲ್‌

- 10ಕ್ಕೂ ಹೆಚ್ಚು ಜನರ ಸಂಗೀತ ಸಮಾರಂಭ, ಇತರೆ ಕಾರ್‍ಯಕ್ರಮ, ರಾಜಕೀಯ ಸಭೆ, ಮೆರವಣಿಗೆ, ಧಾರ್ಮಿಕ ಸಭೆ ಇದರ ವ್ಯಾಪ್ತಿಗೆ

- ವಿವಾಹ, ಅಂತ್ಯಕ್ರಿಯೆ ಮೆರವಣಿಗೆ, ಅಸಂಘಟಿತ ಸಭೆ, ಶಿಕ್ಷಣ, ಕ್ರೀಡೆ, ವಿರಾಮ, ಮನರಂಜನೆ ಕಾರ್‍ಯಕ್ರಮ ಈ ಪಟ್ಟಿಯಿಂದ ಹೊರಕ್ಕೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಎಸ್‌ಐಆರ್‌ ನಮೂನೆ ವಾಪಸ್ ಕೊಡಲು ಇಂದೇ ಕೊನೆ ದಿನ
ಲಭ್ಯತೆ ಆಧರಿಸಿ ತ.ನಾಡಿಗೆ ಕಾವೇರಿ ನೀರು : ಸಿಎಂ