ಮೇ 20ರಿಂದ ಸಾರಿಗೆ ನೌಕರ ಮುಷ್ಕರ ವೇತನ - ಹೆಚ್ಚಳ ಬಗ್ಗೆ ಮುಂದುವರಿದ ಗೊಂದಲ

Published : Apr 30, 2026, 08:08 AM IST
Minister Ramalinga reddy

ಸಾರಾಂಶ

ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಾರಿಗೆ ನೌಕರ ಸಂಘಟನೆಗಳ ಪ್ರಮುಖರೊಂದಿಗೆ   ನಡೆದ ಸಭೆ ವಿಫಲವಾಗಿದೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕೆಎಸ್ಸಾರ್ಟಿಸಿ  ಸಂಘಟನೆಗಳ   ಕ್ರಿಯಾ ಸಮಿತಿ ಘೋಷಿಸಿದೆ.

 ಬೆಂಗಳೂರು :  ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಾರಿಗೆ ನೌಕರ ಸಂಘಟನೆಗಳ ಪ್ರಮುಖರೊಂದಿಗೆ ಬುಧವಾರ ನಡೆದ ಸಭೆ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ.

ಸಾರಿಗೆ ನೌಕರರ ವೇತನ ಹೆಚ್ಚಳ ವಿಚಾರವಾಗಿ ರಾಜ್ಯ ಸರ್ಕಾರದ ಆದೇಶ ಜಾರಿಗೆ ಸಂಬಂಧಿಸಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಾರಿಗೆ ನೌಕರ ಸಂಘಟನೆಗಳ ಪ್ರಮುಖರೊಂದಿಗೆ ಈ ಹಿಂದೆ ಮೂರು ಸಭೆಗಳನ್ನು ನಡೆಸಲಾಗಿತ್ತು. ಸಭೆಯಲ್ಲಿ 2025ರ ಏ.1ರಿಂದ ಅನ್ವಯವಾಗುವಂತೆ ನಾಲ್ಕೂ ನಿಗಮಗಳ ನೌಕರರಿಗೆ ಶೇ.7ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಸಾರಿಗೆ ನೌಕರ ಸಂಘಟನೆಯ ಪ್ರಮುಖರು ಕೆಎಸ್ಸಾರ್ಟಿಸಿ ಅಧಿಕಾರಿಗಳು ನೀಡಿದ್ದ ಪ್ರಸ್ತಾವನೆ ಒಪ್ಪಿರಲಿಲ್ಲ.

ಶೇ.25ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹ:

ಹೀಗಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ಸಾರಿಗೆ ನೌಕರ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿಯೂ ಕೆಎಸ್ಸಾರ್ಟಿಸಿ ನೀಡಿದ್ದ ಪ್ರಸ್ತಾವನೆಯನ್ನು ಸಾರಿಗೆ ನೌಕರ ಸಂಘಟನೆಯ ಪ್ರಮುಖರು ಒಪ್ಪಿಲ್ಲ. ಸಾರಿಗೆ ನೌಕರರಿಗೆ 2024ರ ಜ.1ರಿಂದ ಅನ್ವಯವಾಗುವಂತೆ ಶೇ. 25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಸಾರಿಗೆ ನೌಕರ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.

ಅದಕ್ಕೆ ರಾಮಲಿಂಗಾರೆಡ್ಡಿ ಅವರು, ಈ ಕುರಿತು ನಾನು ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಮುಂದಿನ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಅದಕ್ಕೊಪ್ಪದ ನೌಕರ ಸಂಘಟನೆಯವರು, ಸಭೆಯಲ್ಲೇ ಈ ಕುರಿತು ಘೋಷಣೆ ಮಾಡುವಂತೆ ಪಟ್ಟು ಹಿಡಿದರು. ಹೀಗಾಗಿ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಸಂಬಂಧಿಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.

ಹೀಗೆ ಅಧಿಕಾರಿಗಳೊಂದಿಗಿನ ಮೂರು ಸಭೆ ಮತ್ತು ಸಾರಿಗೆ ಸಚಿವರೊಂದಿಗಿನ ಸಭೆಯಲ್ಲಿ ನಿರ್ಧರಿಸಲಾಗದ ಹಿನ್ನೆಲೆಯಲ್ಲಿ, ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ. ಒಂದು ವೇಳೆ ಸರ್ಕಾರ ಮೇ 20ಕ್ಕೂ ಮುನ್ನ ಸಂಘಟನೆಗಳನ್ನು ಕರೆದು ಮಾತುಕತೆ ನಡೆಸಿ, ಬೇಡಿಕೆ ಈಡೇರಿಕೆಯ ಸ್ಪಷ್ಟ ಭರವಸೆ ನೀಡಿದರೆ ಮುಷ್ಕರದಿಂದ ಹಿಂದೆ ಸರಿಯುವುದಾಗಿಯೂ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

ಸಾರಿಗೆ ನೌಕರ ಸಂಘಟನೆಗಳೊಂದಿಗೆ ನಡೆಸಲಾದ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ. ಶೇ.7ರಷ್ಟು ವೇತನ ಹೆಚ್ಚಳ ಮಾಡುವುದಾಗಿ ತಿಳಿಸಲಾಗಿದೆ. ಅದಕ್ಕಿಂತ ಹೆಚ್ಚಿನ ವೇತನ ಹೆಚ್ಚಳ ಬೇಕೆಂದರೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು. ಇನ್ನು ಎರಡರಿಂದ ಮೂರು ದಿನಗಳಲ್ಲಿ ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡಲಾಗುವುದು ಎಂದು ಸ್ಪಷ್ಟ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದೇನೆ. ಇಷ್ಟರ ಮೇಲೂ ಮುಷ್ಕರಕ್ಕೆ ಮುಂದಾದರೆ ಏನೂ ಮಾಡಲಾಗುವುದಿಲ್ಲ. ಇದನ್ನು ಮೀರಿ ಯಾವುದೇ ಸಭೆಯನ್ನೂ ನಡೆಸುವುದಿಲ್ಲ.

-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ. 

- ಶೇ. 25ರಷ್ಟು ವೇತನ ಹೆಚ್ಚಳಕ್ಕೆ ನೌಕರರ ಆಗ್ರಹ

- 2024ರ ಜ.1ರಿಂದಲೇ ಅನ್ವಯಿಸುವಂತೆ ಒತ್ತಾಯ

- ಈ ಬಗ್ಗೆ ಸಿಎಂ ಜತೆ ಚರ್ಚೆ ನಡೆಸುತ್ತೇನೆಂದ ಸಚಿವ

- ಸಾಧ್ಯವಿಲ್ಲ, ಈ ಸಭೆಯಲ್ಲೇ ಘೋಷಿಸಿ ಎಂದು ಪಟ್ಟು

- ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ನಿನ್ನೆಯ ಸಭೆ ವಿಫಲ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ತಿರುಪತಿಗೆ ಬಮುಲ್‌ ತುಪ್ಪ ಪೂರೈಕೆಗೆ ಡಿಕೆಸು ಚಾಲನೆ
ಬೆಂಗಳೂರಿನಲ್ಲಿ ಮಳೆಗೆ ಗೋಡೆ ಕುಸಿದು 7 ಜನ ದಾರುಣ ಸಾವು