ಬೆಂಗಳೂರಲ್ಲಿ ಯೋಗ 12 ಗಿನ್ನಿಸ್ ದಾಖಲೆ

Published : Jun 22, 2025, 07:00 AM IST
Internation yoga day 2025 gurudev Ravi shankar

ಸಾರಾಂಶ

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಗರದಲ್ಲಿ ಏಕಕಾಲಕ್ಕೆ ಇಟಲಿ, ಅಮೆರಿಕ, ಬ್ರಿಟನ್, ದುಬೈ, ಸೈಪ್ರಸ್ ಸೇರಿ 30 ರಾಷ್ಟ್ರಗಳ 2500ಕ್ಕೂ ಅಧಿಕ ಯೋಗಪಟುಗಳು ವಿವಿಧ ಆಸನಗಳಲ್ಲಿ ನಿಗದಿತ ಅವಧಿಗೆ ನಿಲ್ಲುವ ಮೂಲಕ ನೂತನ 12 ಗಿನ್ನಿಸ್‌ ದಾಖಲೆ ಸೃಷ್ಟಿಸಿದರು.

ಬೆಂಗಳೂರು : ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಗರದಲ್ಲಿ ಏಕಕಾಲಕ್ಕೆ ಇಟಲಿ, ಅಮೆರಿಕ, ಬ್ರಿಟನ್, ದುಬೈ, ಸೈಪ್ರಸ್ ಸೇರಿ 30 ರಾಷ್ಟ್ರಗಳ 2500ಕ್ಕೂ ಅಧಿಕ ಯೋಗಪಟುಗಳು ವಿವಿಧ ಆಸನಗಳಲ್ಲಿ ನಿಗದಿತ ಅವಧಿಗೆ ನಿಲ್ಲುವ ಮೂಲಕ ನೂತನ 12 ಗಿನ್ನಿಸ್‌ ದಾಖಲೆ ಸೃಷ್ಟಿಸಿದರು.

ನಗರದ ಅರಮನೆ ಮೈದಾನದಲ್ಲಿ ಅಕ್ಷರ ಯೋಗ ಕೇಂದ್ರದ ಸಿದ್ಧ ಅಕ್ಷರ ಗುರೂಜಿ ನೇತೃತ್ವದಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ಯೋಗ ದಾಖಲೆ ಕಾರ್ಯಕ್ರಮ ನಡೆಯಿತು.

12 ಆಸನಗಳು: ಧೋಮುಖ ಶ್ವಾನಾಸನ, ಉತ್ಕಟಾಸನ, ಭದ್ರಾಸನ, ಉಭಯ ಪಾದಾಂಗೋಷ್ಠಾಸನ, ಗರುಡಾಸನ, ಶಲಭಾಸನ, ಏಕಪದ ಪದಾಂಗೂಷ್ಟಾಸನ, ಏಕ ಪದ ಪಾದಾಂಗೋಷ್ಠಾಸನ (ಮೆರ್ಮೇಡ್ ಪೋಸ್) 1 ನಿಮಿಷ, ವೀರಭದ್ರಾಸನದಲ್ಲಿ 3 ನಿಮಿಷ, ಸರ್ವಾಂಗಾಸನ 30 ಸೆಕೆಂಡ್‌, ಸೇತುಬಂಧ ಸರ್ವಾಂಗಾಸನ 3 ನಿಮಿಷ, ವೀರಭದ್ರಾಸನ III ನಲ್ಲಿ 1 ನಿಮಿಷ ಯೋಗಪಟುಗಳು ನಿಂತಿದ್ದರು. ಇದು ಈ ವಿಭಾಗದ ನೂತನ ದಾಖಲೆಯಾಗಿದೆ. ಗಿನ್ನಿಸ್‌ ರೆಕಾರ್ಡ್‌ನ ತೀರ್ಪುದಾರರ ಪರವಾಗಿ ಸ್ವಪ್ನಿಲ್‌ ಡಾಂಗರಿಕರ್‌ ಅವರು ಗಿನ್ನಿಸ್‌ ದಾಖಲೆಯ ಪ್ರಮಾಣಪತ್ರ ವಿತರಣೆ ಮಾಡಿದರು.

ತೈವಾನ್, ಮಲೇಷ್ಯಾ, ಹಾಂಗ್‌ಕಾಂಗ್‌, ಇಟಲಿ, ಅಮೆರಿಕ, ಬ್ರಿಟನ್, ದುಬೈ, ಸೈಪ್ರಸ್, ಸಿಂಗಾಪುರ ಸೇರಿ 30ಕ್ಕೂ ಹೆಚ್ಚು ದೇಶಗಳಿಂದ 2,500ಕ್ಕೂ ಹೆಚ್ಚು ಯೋಗ ಅಭ್ಯಾಸಕರು ಭಾಗವಹಿಸಿದ್ದರು. ಭಾರತೀಯ ಸೇನೆ, ವಾಯುಸೇನೆ, ಕರ್ನಾಟಕ ರಾಜ್ಯ ಪೊಲೀಸ್, ಎನ್‌ಸಿಸಿ ಕ್ಯಾಡೆಟ್ಸ್, ವಿಕಲಚೇತನರು, ಅನಾಥಾಶ್ರಮದ ಮಕ್ಕಳು, ಕಾರ್ಪೊರೇಟ್ ಸಂಸ್ಥೆ, ವ್ಯವಹಾರ ಕ್ಷೇತ್ರದ ಸದಸ್ಯರು ಹಾಗೂ ಜಾಗತಿಕ ಯೋಗ ಸಮುದಾಯದ ಪ್ರತಿನಿಧಿಗಳು ಯೋಗ ದಾಖಲೆಯಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ ಬೇಲಿಮಠದ ಡಾ. ಶಿವರುದ್ರ ಮಹಾಸ್ವಾಮೀಜಿ, ಮಹಾನಗರ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸಿಐಎಫ್‌ ಜೋಸ್ ಮೋಹನ್, ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಆರ್. ಗ್ರೂಪ್ ಕ್ಯಾಪ್ಟನ್ ಮತ್ತು ಇಸ್ರೋ ಬಾಹ್ಯಾಕಾಶ ಯಾತ್ರಿಕ ನೇಮಕಾತಿ ವಿಭಾಗದ ಮುಖ್ಯಸ್ಥ ಅಂಗದ ಪ್ರತಾಪ್ ಸೇರಿ ಹಲವರು ಪಾಲ್ಗೊಂಡಿದ್ದರು.

ಆರ್ಟ್‌ ಆಫ್‌ ಲಿವಿಂಗ್‌ನಿಂದ1500ಕಡೆ ಯೋಗಾಭ್ಯಾಸ

ಬೆಂಗಳೂರು : ಆಯುಷ್ ಸಚಿವಾಲಯದ ಸಹಯೋಗದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ಯೋಗ ಶಿಕ್ಷಕರ ನೇತೃತ್ವದಲ್ಲಿ ದೇಶದ 1500ಕ್ಕೂ ಹೆಚ್ಚು ಸ್ಥಳಗಳಲ್ಲಿ ಯೋಗಾಭ್ಯಾಸ ನಡೆದವು.

ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ ವಿದ್ಯಾ ಮಂದಿರದ ಸಾವಿರಾರು ವಿದ್ಯಾರ್ಥಿಗಳು ವಿಶಾಲಾಕ್ಷಿ ಮಂಟಪದ ಎದುರು ಯೋಗಾಸನ ಮಾಡಿದರು. ತವಾಂಗ್ ಯುದ್ಧ ಸ್ಮಾರಕ, ಸುಖ್ನಾ ಮಿಲಿಟರಿ ಸ್ಟೇಷನ್ ಹಾಗೂ ಇಂಡೋ-ಭೂತಾನ್ ಗಡಿಭಾಗದಲ್ಲಿ ಯೋಧರು ಯೋಗಾಭ್ಯಾಸ ನಡೆಸಿದರು. ಸಾಮಲೇಶ್ವರಿ ದೇವಾಲಯದ ಆವರಣದಲ್ಲಿ 5000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು. ವಿಶಾಖಪಟ್ಟಣದ ಥೋತ್ಲಕೊಂಡ ಬೌದ್ಧ ಪರಂಪರಾ ಕ್ಷೇತ್ರದಲ್ಲಿ ಮ್ಯಾನ್ಮಾರ್ ಹಾಗೂ ಕಾಂಬೋಡಿಯಾದ ಬೌದ್ಧ ಭಿಕ್ಷುಗಳು ಸಹ ಪಾಲ್ಗೊಂಡು ಯೋಗದ ಈ ಜಾಗತಿಕ ಉತ್ಸವಕ್ಕೆ ಸಾಕ್ಷಿಯಾದರು.

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪ್ರತ್ಯಕ್ಷವಾಗಿ ಮತ್ತು ಆನ್‌ಲೈನ್‌ನಲ್ಲಿ ಯೋಗಾಭ್ಯಾಸ ನಡೆಸಿದರು. ಕೊಲಂಬಿಯಾದ ಬೊಗೋಟಾದ ಪ್ಲಾಜಾ ಲಾ ಸಂತಮಾರಿಯಾದಿಂದ ರವಿಶಂಕರ ಗುರೂಜಿ ಅವರು ಯೋಗಾಭ್ಯಾಸಿಗಳನ್ನು ಉದ್ದೇಶಿಸಿ ಮಾತನಾಡಿದರು.

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ