ಹುಬ್ಬಳ್ಳಿ: ಎರಡೂವರೆ ವರ್ಷ ಹುಬ್ಬಳ್ಳಿ ಶಹರ ಬಿಇಒ ಕಚೇರಿಯಲ್ಲೇ ವಾಸ್ತವ್ಯ ಹೂಡಿ ಅಕ್ರಮವಾಗಿ ಪಡೆದಿದ್ದ ₹ 6.5 ಲಕ್ಷ ಎಚ್‌ಆರ್‌ಎ ಮೊತ್ತವನ್ನು ಕೊನೆಗೂ ಸರ್ಕಾರಕ್ಕೆ ವಾಪಸ್ ನೀಡಲು ಬಿಇಒ ಚನ್ನಪ್ಪಗೌಡ ನಿರ್ಧರಿಸಿದ್ದಾರೆ. ಚನ್ನಪ್ಪಗೌಡ ಅವರ ಪರವಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕನ್ನಡಪ್ರಭಕ್ಕೆ ಕರೆಮಾಡಿ ಎಚ್‌ಆರ್‌ಎ ಸರ್ಕಾರಕ್ಕೆ ವಾಪಸ್ ಭರಿಸುವ ವಾಗ್ದಾನ ನೀಡಿದರು.
ಈ ವರದಿಗೆ ಸ್ಪಂದಿಸಿದ ಧಾರವಾಡ ಡಿಡಿಪಿಐ ಎಸ್.ಎ. ಕೆಳದಿಮಠ ಕಾರಣ ಕೇಳಿ ಬಿಇಒಗೆ ನೋಟಿಸ್ ನೀಡಿದ್ದರು. ಬಿಇಒ ಅವರು ನೋಟಿಸಿಗೆ ನೀಡಿದ ಉತ್ತರದಲ್ಲಿ ನಾನು ಕಚೇರಿಯಲ್ಲಿ ವಾಸ್ತವ್ಯ ಮಾಡಿಲ್ಲ,ಬದಲಾಗಿ ವಿದ್ಯಾನಗರದ ಶಿಕ್ಷಕಿ ಶೈಲಜಾ ಹಿರೇಮಠ ಅವರ ಮನೆಯಲ್ಲಿ ಇರುವುದಾಗಿ ತಿಳಿಸಿ, ಶೈಲಜಾ ಅವರಿಂದ ದೃಢೀಕರಣ ಪತ್ರ ಕೊಡಿಸಿದ್ದರು.
ಆದರೆ, ಈ ಪ್ರಕರಣದ ಸತ್ಯಾಸತ್ಯತೆ ಕುರಿತಂತೆ ಪೂರಕ ದಾಖಲೆಗಳೊಂದಿಗೆ ಶಿಕ್ಷಕ ಸಂಘಟನೆಯ ಎಸ್.ವಿ. ಗಡದಿನ್ನಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು.ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಡಿಡಿಪಿಐ ಇತ್ತೀಚೆಗೆ ಬಿಇಒ ಕಚೇರಿಗೆ ಬಂದು ವಿಚಾರಣೆ ನಡೆಸಿದಾಗ ಅಲ್ಲಿನ ಸಿಸಿ ಟಿವಿ, ಪಕ್ಕದ ಪೊಲೀಸ್ ಠಾಣೆಯ ಸಿಸಿ ಟಿವಿ ಪುಟೇಜ್ ಮತ್ತು ಚನ್ನಪ್ಪಗೌಡ ಅವರ ಮೊಬೈಲಿನ ಎರಡೂವರೆ ವರ್ಷದ ಲೋಕೇಷನ್ ಪಡೆದಿದ್ದರು.16 ಶಿಕ್ಷಕರು ಹೇಳಿಕೆ ನೀಡಿ, ದಾಖಲೆ ಒದಗಿಸಿದ್ದರು.
ಈ ವಿಷಯವನ್ನು ಹೊರಟ್ಟಿ ಅವರು ಕನ್ನಡಪ್ರಭಕ್ಕೆ ದೃಢಪಡಿಸಿದರು.
ಹುಬ್ಬಳ್ಳಿ ಶಹರ ಬಿಇಒ ಚನ್ನಪ್ಪಗೌಡ ಕಚೇರಿಯಲ್ಲಿ ವಾಸ್ತವ್ಯ ಹೂಡಿಯೂ ಅಕ್ರಮವಾಗಿ ಎಚ್ ಆರ್ ಎ ಪಡೆದು ಸರ್ಕಾರಕ್ಕೆ ವಂಚಿಸಿದ್ದು ತಪ್ಪು. ಆ ಎಲ್ಲ ಎಚ್ ಆರ್ ಎ ಮೊತ್ತವನ್ನು ಸರ್ಕಾರಕ್ಕೆ ವಾಪಸ್ ಭರಿಸಿಕೊಳ್ಳುವಂತೆ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹೇಳುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.