ರೈತ ಸಂಘ ಪ್ರತಿಭಟನೆ, ಬೈಕ್ ರ್‍ಯಾಲಿ ಮೂಲಕ ಕಚೇರಿಗೆ ಮುತ್ತಿಗೆ
ಕನ್ನಡಪ್ರಭ ವಾರ್ತೆ ದಾವಣಗೆರೆಅಕ್ರಮ ಸಕ್ರಮ ವಿದ್ಯುತ್ ಶಕ್ತಿ ಯೋಜನೆ ಮುಂದುವರಿಸಿ, ವಿದ್ಯುತ್ ಪೂರೈಕೆ ಕೊರತೆ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ, ಜಿಲ್ಲಾ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಬೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿಗೆ ಬೈಕ್ ರ್‍ಯಾಲಿ ಮೂಲಕ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ನಗರದ ಕೆ.ಆರ್ ಮಾರುಕಟ್ಟೆ ಜಯ ಚಾಮರಾಜೇಂದ್ರ ಒಡೆಯರ್ ವೃತ್ತದಿಂದ ವಿವಿಧ ರಸ್ತೆಗಳ ಮಾರ್ಗವಾಗಿ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಘೋಷಣೆಗಳ ಕೂಗಿ ಬೈಕ್ ರ್‍ಯಾಲಿ ಮೂಲಕ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯ ಬೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿಗೆ ರೈತರು ಮುತ್ತಿಗೆ ಹಾಕಿದರು.ಈ ವೇಳೆ ಮಾತನಾಡಿದ ಹುಚ್ಚವ್ವನಹಳ್ಳಿ ಮಂಜುನಾಥ, ಎಲ್‌ಟಿ ಲೈನ್ ಮತ್ತು ಪವರ್ ಲೈನ್‌ಗಳು 500 ಮೀಟರ್ ಒಳಗಿದ್ದರೆ ವಿದ್ಯುತ್ ಪರಿವರ್ತಕ ನೀಡುವ, ಒಂದು ವೇಳೆ ಇದಕ್ಕಿಂತ ಹೆಚ್ಚು ದೂರವಿದ್ದರೆ ಸೋಲಾರ್ ಅಳವಡಿಸಬೇಕೆಂಬ ನಿಯಮವನ್ನು ಬೆಸ್ಕಾಂ ಕೈಬಿಡಬೇಕು. ಟಿಸಿ ಸುಟ್ಟು 24 ಗಂಟೆ ಒಳಗಾಗಿ ಪರ್ಯಾಯ ಟಿಸಿ ನೀಡಬೇಕು. ಈಗಾಗಲೇ ಬಾಕಿ ಇರುವಂತಹ ಟಿಸಿಗಳನ್ನು ತಕ್ಷಣ ಒದಗಿಸಬೇಕು. ರೈತರ ಮೇಲೆ ಬೆಸ್ಕಾಂ ಲೈನ್‌ಮನ್‌ಗಳ ದಬ್ಬಾಳಿಕೆ ನಿಲ್ಲಬೇಕು. ರಾತ್ರಿ ವೇಳೆ ಪೂರೈಸುವಂತೆಯೇ ಹಗಲು ಹೊತ್ತಿನಲ್ಲೂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂದರು.
ಮಳೆ ಕೈಕೊಟ್ಟಿದ್ದರಿಂದಾಗಿ ಕೊಳವೆ ಬಾವಿಗಳಲ್ಲಿರುವ ಅಲ್ಪಸ್ವಲ್ಪ ನೀರನ್ನೇ ಬಳಸಿ, ರೈತರು ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಕೊಳವೆ ಬಾವಿಗಳ ನೀರು ಬಳಸಲು ನಿಗದಿತ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಸದೇ, ಇಲಾಖೆಯು ರೈತರ ಬದುಕು, ಭವಿಷ್ಯದೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಬೆಸ್ಕಾಂ ಲೈನ್ ಮನ್‌ಗಳು ದೂರವಾಣಿ ಕರೆ ಸ್ವೀಕರಿಸದೇ, ಉಡಾಫೆಯಾಗಿ ವರ್ತಿಸುತ್ತಿರುವುದು ನಿಲ್ಲಬೇಕು ಎಂದು ತಾಕೀತು ಮಾಡಿದರು.ರೈತರ ಗಾಯದ ಮೇಲೆ ಬರೆ:
ಸರ್ಕಾರದ ರೈತ ವಿರೋಧಿ ನೀತಿ, ಕ್ರಮಗಳು, ಬೆಸ್ಕಾಂ ಅಸಡ್ಡೆಯಿಂದಾಗಿ ರೈತರ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ತಕ್ಷಣವೇ ರೈತರ ಸಮಸ್ಯೆಗಳ ಪರಿಹರಿಸಿ, ಬೇಡಿಕೆಗಳನ್ನು ಈಡೇರಿಸಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಬೆಸ್ಕಾಂ ಅಧೀಕ್ಷಕ ಅಭಿಯಂತರರ ಮೂಲಕ ಬೆಸ್ಕಾಂ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ರೈತರು ಎಚ್ಚರಿಸಿದರು.ರೈತ ಮುಖಂಡರಾದ ನಿಟುವಳ್ಳಿ ಅಂಜಿನಪ್ಪ ಪೂಜಾರ, ಪಾಮೇನಹಳ್ಳಿ ಗೌಡ್ರ ರಾಜಶೇಖರ, ಕಾನನಕಟ್ಟೆ ತಿಪ್ಪೇಸ್ವಾಮಿ, ಕಸವನಹಳ್ಳಿ ನಾಗರಾಜ, ಕೋಗಲೂರು ಕುಮಾರ, ಕೈದಾಳೆ ವಸಂತಕುಮಾರ, ದ್ಯಾಮಜ್ಜಿ ಡಿ.ಹನುಮಂತಪ್ಪ, ರಾಜನಹಟ್ಟಿ ರಾಜ, ರಂಗಜ್ಜ ಹನುಮಂತಾಪುರ, ಕುಮಾರ, ದಿಬ್ಬದಹಳ್ಳಿ ಗಂಗಾಧರ, ರುದ್ರಪ್ಪ, ಅಂಜಿನಪ್ಪ, ಕೆ.ಹನುಮಂತಪ್ಪ ಕುರ್ಕಿ, ರಂಗಪ್ಪ ಕ್ಯಾಸೇನಹಳ್ಳಿ, ಪರಶುರಾಮ, ದಿಬ್ಬದಹಳ್ಳಿ ಗಂಗಾಧರಪ್ಪ, ಸಣ್ಣ ಪಾಲಯ್ಯ, ಸತೀಶಕುಮಾರ, ಕೆಂಚಪ್ಪ, ಗಂಡುಗಲಿ, ಚಿಕ್ಕಮಲ್ಲನಹೊಳೆ ಟಿ.ಚಿರಂಜೀವಿ, ರೇಣುಕಾ ಇತರರಿದ್ದರು.ಪರಿಹಾರ ಸಿಗದೇ ಪರಿತಪಿಸುವ ಸ್ಥಿತಿ
ದಾವಣಗೆರೆ ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ, ಬೇಡಿಕೆ ಈಡೇರಿಸುವ ಬಗ್ಗೆ ಸಾಕಷ್ಟು ಬಾರಿ ಬೆಸ್ಕಾಂ, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ರೈತರ ಬಾಳಿನ ಸಂಜೀವಿನಿ ಆಗಬೇಕಾದ ಸರ್ಕಾರವೇ ರೈತ ವಿರೋಧಿ ನೀತಿ ಅನುಸರಿಸುವ ಕೆಲಸಕ್ಕೆ ಮುಂದಾಗಿದೆ. ಬರಗಾಲದಿಂದಾಗಿ ಬೆಳೆ ಕಳೆದುಕೊಂಡ ರೈತರು ಪರಿಹಾರ ಸಿಗದೇ ಪರಿತಪಿಸುವ ಸ್ಥಿತಿ ಬಂದೊದಗಿದೆ. ಇನ್ನಾದರೂ ರಾಜ್ಯ ಸರ್ಕಾರ, ಬೆಸ್ಕಾಂ ಎಚ್ಚೆತ್ತು, ರೈತರ ಬೇಡಿಕೆ ಬಗ್ಗೆ ಗಮನಹರಿಸಲಿ.ಹುಚ್ಚವ್ವನಹಳ್ಳಿ ಮಂಜುನಾಥ, ರೈತ ಸಂಘ ರಾಜ್ಯಾಧ್ಯಕ್ಷ