ಗಜೇಂದ್ರಗಡ: ದೇಶದಲ್ಲಿ ಆಹಾರ, ಆರೋಗ್ಯ ಶಿಕ್ಷಣ ಉಳಿಸಿ ದೇಶವನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ದುಡಿಯುವ ವರ್ಗಕ್ಕೆ ಸಮಾನ ವೇತನ ನೀಡದೆ ಸರ್ಕಾರಗಳು ದ್ರೋಹ ಮಾಡುತ್ತಿವೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮಾರುತಿ ಚಿಟಗಿ ಹೇಳಿದರು.
ಹಿಂದಿನಿಂದಲೂ ನಮ್ಮನ್ನಾಳುವ ಸರ್ಕಾರಗಳು ದೇಶದ ಜನತೆಗೆ ಆಹಾರ, ಆರೋಗ್ಯ ಹಾಗೂ ಶಿಕ್ಷಣ ಉಳಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುವ ಭರವಸೆ ನೀಡುತ್ತಾ ಅಧಿಕಾರಕ್ಕೆ ಬರುತ್ತಿವೆ.ಅದರಲ್ಲೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯ ಮುಂದಿಟ್ಟು ರಾಜಕಾರಣ ಮಾಡುವ ಬದಲು ಜನತೆಯ ದಿಕ್ಕು ತಪ್ಪಿಸುವ ದೆಸೆಯಲ್ಲಿ ಆಡಳಿತ ಮಾಡುತ್ತಿದೆ. ಪರಿಣಾಮ ದೇಶದಲ್ಲಿ ಆಹಾರ, ಶಿಕ್ಷಣ ಹಾಗೂ ಆರೋಗ್ಯ ಪರವಾದ ಯೋಜನೆ ಕಾಯಂ ಮಾಡುವ ಗೋಜಿಗೆ ಹೋಗುತ್ತಿಲ್ಲ. ದೇಶದ ಸಂಪತ್ತಾಗಿರುವ ಕಾರ್ಮಿಕ ವಲಯ ಸೇರಿ ೧ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳು ಸಿಗದಂತಾಗಿವೆ. ೩-೬ ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಲು ಕಾನೂನು ಇಲ್ಲಿವರೆಗೂ ರಚನೆಯಾಗಿಲ್ಲ ಎಂದು ದೂರಿದ ಅವರು, ಗುತ್ತಿಗೆ, ಹೊರಗುತ್ತಿಗೆ ಹಾಗೂ ಒಳಗುತ್ತಿಗೆ ನೌಕರರನ್ನು ಕಾಯಂ ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು ಮತ್ತು ಕಾಯಂ ಮಾಡಲು ವಿಶೇಷ ಕಾನೂನು ರಚಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡ ಪೀರು ರಾಠೋಡ ಮಾತನಾಡಿ, ಕೇಂದ್ರ ಸರ್ಕಾರವು ವಿದ್ಯುತ್, ರೈಲ್ವೆ ಸೇರಿದಂತೆ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಸಂಪತ್ತು ಹಾಗೂ ನೌಕರರನ್ನು ಖಾಸಗಿಯವರ ಕೈಗೆ ಒಳಪಡುವಂತೆ ಮಾಡುವ ಹುನ್ನಾರ ನಡೆಯತ್ತಿರುವುದು ಒಂದೆಡೆಯಾದರೆ ೨೯ ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡುವ ಮೂಲಕ ಕಾರ್ಮಿಕ ವಲಯವನ್ನು ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ. ಹೀಗಾಗಿ ಸರ್ಕಾರವು ವಿದ್ಯುತ್ ಮತ್ತು ರೈಲ್ವೆ ಸೇರಿ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸುವುದರ ಜತೆಗೆ ಕಾರ್ಮಿಕ ಸಂಹಿತೆಗಳಾಗಿ ಮಾಡಿರುವುದನ್ನು ಕೈಬಿಟ್ಟು ಕಾರ್ಮಿಕರ ಪರವಾದ ನೀತಿ ಜಾರಿ ಮಾಡಬೇಕು ಸೇರಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ ೬ನೇ ಗ್ಯಾರಂಟಿಯನ್ನು ಅಂಗನವಾಡಿ ನೌಕರರಿಗೆ ₹೧೫ ಸಾವಿರ ಹಾಗೂ ಬಿಸಿಯೂಟದವರಿಗೆ ₹ ೬ಸಾವಿರ ವೇತನ ಮತ್ತು ನಿವೃತ್ತಿ ಸೌಲಭ್ಯ ಜಾರಿ ಮಾಡಲು ಮುಂದಾಗಬೇಕು ಎಂಬ ಬೇಡಿಕೆಗಳ ಈಡೇರಿಕೆಗಾಗಿ ಜ. ೨೩ರಂದು ಸಂಸದರ ಕಚೇರಿಗಳಿಗೆ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಎಸ್‌ಎಫ್‌ಐ ಮುಖಂಡ ಚಂದ್ರು ರಾಠೋಡ, ಮೈಬೂ ಹವಾಲ್ದಾರ್, ಅನೀಲ ರಾಠೋಡ, ತುಕಾರಾಂ ಚವ್ಹಾಣ, ಲಕ್ಷ್ಮಣ ಲಮಾಣಿ, ಮಹಾದೇವಿ ಚಿಟಗಿ, ಕನಕರಾಯ ಹಾದಿಮನಿ ಸೇರಿ ಇತರರು ಇದ್ದರು.