ಕ್ರೀಡಾ ಚಟುವಟಿಕೆಗಳಿಂದ ಉತ್ತಮ ಆರೋಗ್ಯ: ಕುಂತಿ ಭೋಪಯ್ಯ

KannadaprabhaNewsNetwork | Published : Feb 20, 2025 12:49 AM

ಸಾರಾಂಶ

ಕ್ರೀಡಾ ಚಟುವಟಿಕೆಗಳ ಮೂಲಕ ಉತ್ತಮ ಆರೋಗ್ಯ ಹಾಗೂ ಪರಸ್ಪರ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಕುಂತಿ ಭೋಪಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕ್ರೀಡಾ ಚಟುವಟಿಕೆಗಳ ಮೂಲಕ ಉತ್ತಮ ಆರೋಗ್ಯ ಹಾಗೂ ಪರಸ್ಪರ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಕೂಡಿಗೆ ಕ್ರೀಡಾಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಕುಂತಿ ಭೋಪಯ್ಯ ಹೇಳಿದರು.

ಅವರು ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಕೊಡಗು ಜಿಲ್ಲಾ ಬ್ಯುಟಿಷಿಯನ್ ಅಸೋಸಿಯೇಷನ್ ಆಶ್ರಯದಲ್ಲಿ ತಾಲೂಕು ಸಂಘಗಳ ಸಹಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕೊಡಗು ಜಿಲ್ಲೆಯ ಸೌಂದರ್ಯ ತಜ್ಞರನ್ನು ಒಗ್ಗೂಡಿಸಿ ಸಂಘಟನೆಯ ಮೂಲಕ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು ಒಗ್ಗಟ್ಟಿನ ಮೂಲಕ ತಮ್ಮ ಸಮಸ್ಯೆಗಳ ಪರಿಹಾರ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ನಗರಸಭಾ ಸದಸ್ಯರಾದ ಸವಿತಾ ರಾಕೇಶ್ ಮಾತನಾಡಿ ಕಟ್ಟುಪಾಡುಗಳನ್ನು ಬಿಟ್ಟು ಸಮಾಜದಲ್ಲಿ ಸ್ವಾವಲಂಬಿ ಬದುಕು ಕಾಣುವ ಮಹಿಳೆಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೂಲಕ ಕುಟುಂಬದಲ್ಲಿ ಆರ್ಥಿಕ ಸಬಲೀಕರಣ ಸಾಧ್ಯ. ಪ್ರತಿ ಮನೆಗಳು ಯಶಸ್ಸು ಕಂಡಲ್ಲಿ ಮಾತ್ರ ಸಮಾಜದ ಅಭಿವೃದ್ಧಿ ಏಳಿಗೆ ಕಾಣಬಹುದು ಎಂದರು.

ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ ಪತ್ರಕರ್ತ ಎಂ ಎನ್ ಚಂದ್ರಮೋಹನ್, ಸೌಂದರ್ಯ ತಜ್ಞರ ಮೂಲಕ ಅಪರೂಪದ ಕ್ರೀಡಾಕೂಟ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಬಾಹ್ಯ ಸೌಂದರ್ಯದೊಂದಿಗೆ ಆಂತರಿಕ ಸೌಂದರ್ಯ ಕೂಡ ಪ್ರತಿಯೊಬ್ಬರೂ ಹೊಂದಿರಬೇಕು. ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ಮುಖ್ಯ. ಸೋಲು ಗೆಲುವಿನ ಮೆಟ್ಟಿಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಬ್ಯುಟಿಷಿಯನ್ ಅಸೋಸಿಯೇಷನ್ ಗೌರವಾಧ್ಯಕ್ಷೆ ವನಿತಾ ಚಂದ್ರಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧಡೆಯಲ್ಲಿ ಸಂಕಷ್ಟದಲ್ಲಿರುವ ಸೌಂದರ್ಯ ತಜ್ಞರ ಕ್ಷೇಮಾಭಿವೃದ್ಧಿ ಸಲುವಾಗಿ ಸರ್ಕಾರದಿಂದ ಅನುದಾನದ ಅಗತ್ಯತೆ ಇದೆ. ಈ ಸಂಬಂಧ ಕ್ಷೇತ್ರ ಶಾಸಕರ ಮೂಲಕ ಜಿಲ್ಲೆಯಿಂದ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸುವ ಚಿಂತನೆ ಹೊಂದಿರುವುದಾಗಿ ತಿಳಿಸಿದರು.

ಜಿಲ್ಲಾ ಸಂಘದ ಅಧ್ಯಕ್ಷೆ ರತ್ನ ಯತೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸಂಘದ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು.

ಜಿಲ್ಲಾ ಸಂಘದ ಉಪಾಧ್ಯಕ್ಷೆ ಮಿನಾಸ್ ಪ್ರವೀಣ್, ಪ್ರಧಾನ ಕಾರ್ಯದರ್ಶಿ ಪವಿತ್ರ, ಖಜಾಂಚಿ ವೈಭವಿ

ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷರಾದ ಪ್ರತಿಮಾ ಮಡಿಕೇರಿ ತಾಲೂಕಿನ ಜಾನ್ಸಿರಾಜ್, ಕುಶಾಲನಗರ ತಾಲೂಕು ಸಂಘದ ಉಪಾಧ್ಯಕ್ಷೆ ಡೆಸಿಲ್ಲ, ವಿರಾಜಪೇಟೆ ತಾಲೂಕಿನ ಅಧ್ಯಕ್ಷೆ ದೇವಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ತ್ರೋಬಾಲ್, ಚಮಚದಲ್ಲಿ ನಿಂಬೆಹಣ್ಣು ಓಟ, ಹಗ್ಗ ಜಗ್ಗಾಟ, ಶಾರ್ಟ್ ಪುಟ್, ಓಟದ ಸ್ಪರ್ಧೆ, ಗ್ಲಾಸ್ ಪಿರಮಿಡ್ , ಬಾಲ್ ಪಾಸಿಂಗ್ ಬೇಸಿಕಲ್ ಚೆಯರ್ ಮತ್ತಿತರ ಸ್ಪರ್ಧೆಗಳು ಜರುಗಿದವು. ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಸೇರಿದಂತೆ ಜಿಲ್ಲೆಯ ನಾಲ್ಕು ತಂಡಗಳ 100 ಕ್ಕೂ ಅಧಿಕ ಸೌಂದರ್ಯ ತಜ್ಞರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಖಜಾಂಚಿ ವೈಭವಿ ಸ್ವಾಗತಿಸಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪವಿತ್ರ ಮತ್ತು ಉಪಾಧ್ಯಕ್ಷೆ ಮಿನಾಸ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿ, ಕ್ರೀಡಾ ಕೂಟ ನಡೆಸಿಕೊಟ್ಟರು. ತಾಲೂಕು ಉಪಾಧ್ಯಕ್ಷೆ ಸರಿತಾ ವಂದಿಸಿದರು.

Share this article