ಆಸ್ಪತ್ರೆಯ ನುರಿತ ವೈದ್ಯರ ತಂಡ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಜೊತೆಗೆ ಆಸ್ಪತ್ರೆಯ ಸಿಬ್ಬಂದಿ ಸ್ವಚ್ಛತೆ ಹಾಗೂ ಕಾಳಜಿಯಿಂದ ರೋಗಿಗಳ ಆರೈಕೆ ಮಾಡುತ್ತಿರುವುದು ಸ್ಥಳೀಯರಾದ ನಮಗೆ ತುಂಬಾ ಹೆಮ್ಮೆ ಇದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸರ್ಕಾರಿ ಆಸ್ಪತ್ರೆ ವೈದ್ಯರ ಸೇವೆ ಜೊತೆಗೆ ಸಿಬ್ಬಂದಿ ಕಾಳಜಿಯಿಂದಲೂ ಸಹ ರೋಗಿಗಳಿಗೆ ಉತ್ತಮ ಸೇವೆ ಸಿಗಲಿದೆ ಎಂದು ರಂಗನಾಯಕಿ ಸಮಾಜದ ಅಧ್ಯಕ್ಷೆ ಬಿ.ಎಸ್.ವಿಶಾಲಾಕ್ಷಿ ಪದ್ಮನಾಬ್ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀರಂಗನಾಯಕಿ ಸಮಾಜ ಮತ್ತು ಐಕ್ಯ ಅಲಯನ್ಸ್ ಸಂಸ್ಥೆಯಿಂದ ವೈದ್ಯರು ಮತ್ತು ಸಿಬ್ಬಂದಿಗೆ ಹೂ ನೀಡಿ ಗೌರವಿಸಿ ಮಾತನಾಡಿ, ಆಸ್ಪತ್ರೆಯ ನುರಿತ ವೈದ್ಯರ ತಂಡ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಜೊತೆಗೆ ಆಸ್ಪತ್ರೆಯ ಸಿಬ್ಬಂದಿ ಸ್ವಚ್ಛತೆ ಹಾಗೂ ಕಾಳಜಿಯಿಂದ ರೋಗಿಗಳ ಆರೈಕೆ ಮಾಡುತ್ತಿರುವುದು ಸ್ಥಳೀಯರಾದ ನಮಗೆ ತುಂಬಾ ಹೆಮ್ಮೆ ಇದೆ ಎಂದರು.
ಐಕ್ಯ ಅಲೆಯನ್ ಸಂಸ್ಥೆ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಮಾತನಾಡಿ, ವಿವಿಧ ಸಂಘಟನೆಗಳು ಪ್ರತಿ ವರ್ಷ ನಡೆಸುವ
ರಕ್ತದಾನ ಶಿಬಿರಕ್ಕೆ ಯುವಕರು ಸಹ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಸಹಕಾರ ನೀಡುತ್ತಿದ್ದಾರೆ ಎಂದರು.
ರಕ್ತದಾನ ಅಂದರೆ ಅದು ಜೀವದಾನ. ಇನ್ನೊಬ್ಬರ ಜೀವ ಉಳಿಸುವ ಸಂಕಲ್ಪ ಮಾಡಿ ಅಗತ್ಯವಿರುವ ರೋಗಿಗಳಿಗೆ ಜೀವ ಉಳಿಸಲು ಮತ್ತಷ್ಟು ಯುವಕರು ಮುಂದೆ ಬರುವಂತೆ ಮನವಿ ಮಾಡಿದರು.
ಈ ವೇಳೆ ಮಹಿಳಾ ಸಾಂತ್ವನ ಕೇಂದ್ರದ ವ್ಯವಸ್ಥಾಪಕಿ ಶೀಲಾ ನಂಜುಂಡಯ್ಯ, ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ.ಸವಿತಾ, ಪಿಜಿಶಿಯನ್ ಡಾ.ಶಾಸ್ತ್ರಿ, ಡಾ.ಚಂದ್ರಿಕಾ, ಹಿರಿಯ ದರ್ಜೆ ಶುಶ್ರೂಷಕಿಯಾರಾದ ಶಿಲ್ಪ, ಕವಿತಾ, ನಂಜಮ್ಮಣಿ, ಜೂಲಿ,ಕುಸುಮ, ಶುಶ್ರೂಷಕ ಮುರಳಿ, ನಿವೃತ್ತ ಶಿಕ್ಷಣ ಜಂಟಿ ನಿರ್ದೇಶಕಿ ಸುವರ್ಣದೇವಿ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್ ಜಯಶಂಕರ್, ಯೋಗ ಶಿಕ್ಷಕ ಕೆ ಶೆಟ್ಟಹಳ್ಳಿ ಅಪ್ಪಾಜಿ, ಪಾಲಹಳ್ಳಿ ಭಾರತಿ, ಕಡತನಾಳು ಕೃಷ್ಣಕುಮಾರ್, ಗೋಪಾಲ್ ಸೇರಿಸಂತೆ ಇತರರು ಇದ್ದರು.
ಇಂದು ಪಿಎಸ್ಎಸ್ಕೆ ಎದುರು ಪ್ರತಿಭಟನೆ: ವೈ.ಪಿ.ಮಂಜುಪಾಂಡವಪುರ:ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ)ಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿರುವ ಎಂಆರ್‌ಎನ್ ಷುಗರ್ಸ್ ಆಡಳಿತ ಮಂಡಳಿ ರೈತ ವಿರೋಧಿ ನಡೆ ಖಂಡಿಸಿ ಜೂ.15ರಂದು ಕಾರ್ಖಾನೆ ಎದುರು ರಾಜ್ಯ ರೈತ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ವೈ.ಪಿ.ಮಂಜು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 100 ರು. ಪ್ರೋತ್ಸಾಹಧನ ನೀಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಇದರಲ್ಲಿ ಸರ್ಕಾರದ ಪಾಲು 50 ರು. ಮತ್ತು ಕಾರ್ಖಾನೆ ಮಾಲೀಕರು ಪಾಲು 50 ರು. ಪಾವತಿಸಿಬೇಕು ಎಂದರು.ಸರ್ಕಾರದ ಆದೇಶದಂತೆ ಹಲವು ಸಕ್ಕರೆ ಕಾರ್ಖಾನೆ ತಮ್ಮ ಪಾಲಿನ ಹಣವನ್ನು ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಪಿಎಸ್‌ಎಸ್‌ಕೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಎಂಆರ್‌ಎನ್ ಸಂಸ್ಥೆ ತಮ್ಮ ಪಾಲಿನ ಹಣ ಬಿಡುಗಡೆ ಮಾಡಿಲ್ಲ. ಬದಲಾಗಿ, ಸಂಸ್ಥೆ ಆಡಳಿತ ಮಂಡಳಿ ಹಣ ಬಿಡುಗಡೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ. ನ್ಯಾಯಾಲಯದ ತಡೆಯಾಜ್ಞೆ ವಾಪಸ್ಸು ಪಡೆದು ರೈತರಿಗೆ ಪ್ರೋತ್ಸಾಹಧನ ಪಾವತಿಸುವಂತೆ ಆಗ್ರಹಿಸಿ ಪ್ರತಿಭಟೆ ಹಮ್ಮಿಕೊಳ್ಳಲಾಗಿದೆ ಎಂದರು.
ನಿರೀಕ್ಷಿತ ಪ್ರಮಾಣದ ಮಳೆ ಬೀಳದ ಪರಿಣಾಮ ರೈತರು ಬೆಳೆದಿರುವ ಭತ್ತ, ಕಬ್ಬು ಸೇರಿದಂತೆ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಹಲವು ಬೆಳೆಗಳು ಒಣಗುತ್ತಿವೆ. ಜೊತೆಗೆ ಜನ-ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದಂತಾಗಿದೆ. ಹೀಗಾಗಿ, ಸರ್ಕಾರ ಈ ಕೂಡಲೇ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲಾ ನಾಲೆಗಳಿಗೆ ಒಂದು ಕಟ್ಟು ನೀರು ಹರಿಸಬೇಕು ಎಂದು ಆಗ್ರಹಿಸಿದರು.ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಹೋರಾಟದ ಫಲವಾಗಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 70 ಅಡಿ ನೀರಿನ ಸಂಗ್ರಹವಿದ್ದಾಗಲೂ ನಾಲೆಗಳಿಗೆ ನೀರು ಹರಿಸಲಾಗಿತ್ತು. ಸದ್ಯ ಅಣೆಕಟ್ಟೆಯಲ್ಲಿ 81 ಅಡಿ ನೀರು ಸಂಗ್ರಹವಿದೆ. ತಕ್ಷಣ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲವಾದರೆ ರೈತಸಂಘ ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘ ಮುಖಂಡರಾದ ಎಣ್ಣೆಹೊಳೆಕೊಪ್ಪಲು ರಘು, ಡಾಮಡಹಳ್ಳಿ ಅಶೋಕ್ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.