ಶಿಗ್ಗಾಂವಿ ಚುನಾವಣೆಗೆ ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್‌!

KannadaprabhaNewsNetwork | Published : Nov 20, 2024 12:31 AM

ಸಾರಾಂಶ

ಬಿಜೆಪಿ ಹಾಗೂ ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಕಣವಾಗಿರುವ ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಯಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸುತ್ತಾನೆ ಎಂದು ಹುಬ್ಬಳ್ಳಿಯಲ್ಲಿ ಲಕ್ಷ ಲಕ್ಷ ಬೆಟ್ಟಿಂಗ್‌ ನಡೆದಿದೆ. ಒಂದಕ್ಕೆ ಎರಡರಷ್ಟು ನೀಡುವುದಾಗಿ ಹುಬ್ಬಳ್ಳಿಯ ಗ್ರಾಮೀಣ ಪ್ರದೇಶದಲ್ಲೂ ಬೆಟ್ಟಿಂಗ್‌ ನಡೆದಿದೆ. ಇದಕ್ಕೆ ನವೆಂಬರ್‌ 23ರಂದು ತೆರೆ ಬೀಳಲಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹಾವೇರಿ ಜಿಲ್ಲೆ ಶಿಗ್ಗಾಂವಿ-ಸವಣೂರು ಕ್ಷೇತ್ರಕ್ಕೆ ಇತ್ತೀಚಿಗೆ ಉಪಚುನಾವಣೆ ನಡೆದಿದ್ದು ನ. 23ರಂದು ಫಲಿತಾಂಶ ಬರಲಿದೆ. ಈ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬ ಕುತೂಹಲ ತೀವ್ರವಾಗಿದ್ದು ಹುಬ್ಬಳ್ಳಿಯಲ್ಲೂ ಬೆಟ್ಟಿಂಗ್‌ ನಡೆದಿದೆ.

ಶಿಗ್ಗಾಂವಿ-ಸವಣೂರು ಕ್ಷೇತ್ರ ಹಾವೇರಿ ಜಿಲ್ಲೆಯಲ್ಲಿದ್ದರೂ ಅದರ ರಾಜಕಾರಣ ಎಲ್ಲ ನಡೆದಿರುವುದು ಹುಬ್ಬಳ್ಳಿಯಲ್ಲೇ. ಯಾರೇ ಪ್ರಚಾರಕ್ಕೆ ಹೋದರೂ ಹುಬ್ಬಳ್ಳಿಗೆ ಬಂದೇ ಹೋಗುತ್ತಿದ್ದರು. ಜತೆಗೆ ಟಿಕೆಟ್‌ ಘೋಷಣೆಯಾಗುವ ಮುನ್ನದಿಂದ ಹಿಡಿದು ಚುನಾವಣೆ ಮುಗಿಯುವವರೆಗೂ ಬಿಜೆಪಿ, ಕಾಂಗ್ರೆಸ್ ಪಕ್ಷಗಳೆರಡೂ ಚುನಾವಣಾ ತಂತ್ರ-ಪ್ರತಿತಂತ್ರ ರೂಪಿಸಿದ್ದು ಇದೇ ಹುಬ್ಬಳ್ಳಿಯ ಹೋಟೆಲ್‌ಗಳಲ್ಲೇ. ಹೀಗಾಗಿ ಶಿಗ್ಗಾಂವಿ- ಸವಣೂರು ಕ್ಷೇತ್ರದ ಚುನಾವಣೆಗೆ ಕೇಂದ್ರ ಸ್ಥಾನ ಹುಬ್ಬಳ್ಳಿ ಎಂಬಂತಾಗಿತ್ತು.

ಹಾಗೆ ನೋಡಿದರೆ ಉಪಚುನಾವಣೆ ನಡೆದ ಮೂರು ಕ್ಷೇತ್ರಗಳ ಬಗ್ಗೆಯೂ ಬೆಟ್ಟಿಂಗ್‌ ನಡೆಯುತ್ತಿದೆ. ಎಲ್ಲೆಲ್ಲಿ ಯಾವ್ಯಾವ ಪಕ್ಷ ಗೆಲ್ಲುತ್ತದೆ ಎಂಬ ಬೆಟ್ಟಿಂಗ್‌ ನಡೆಯುತ್ತಿದೆ. ಚನ್ನಪಟ್ಟಣದ್ದು ಕೊಂಚ ಜೋರಾಗಿದೆ. ಆದರೆ ಶಿಗ್ಗಾಂವಿ-ಸವಣೂರು ಕ್ಷೇತ್ರ ಬೆಟ್ಟಿಂಗ್‌ ಶೂರರಿಗೆ ಫೆವರೇಟ್‌ ಎನಿಸಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಬಸವರಾಜ ಬೊಮ್ಮಾಯಿ ಅವರ ನಿವಾಸ ಇರುವುದು ಹುಬ್ಬಳ್ಳಿಯಲ್ಲೇ. ಅವರು ಹುಟ್ಟಿ ಬೆಳೆದಿರುವುದು ಇಲ್ಲೇ. ಅವರ ಅಭಿಮಾನಿಗಳ ದಂಡು ಹಾವೇರಿ, ಶಿಗ್ಗಾಂವಿಯಲ್ಲಿ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲೇ ಹುಬ್ಬಳ್ಳಿಯಲ್ಲೂ ಇದೆ.

ಇದೀಗ ಅವರ ಪುತ್ರ ಭರತ್‌ ಬೊಮ್ಮಾಯಿ ಬಿಜೆಪಿಯಿಂದ ಕಣಕ್ಕಿಳಿದವರು. ಹೀಗಾಗಿ ಇದೀಗ ಬೆಟ್ಟಿಂಗ್‌ ಇಲ್ಲೂ ಜೋರಾಗುತ್ತಿದೆ. ಹಾಗಂತ ಶಿಗ್ಗಾಂವಿ ಸವಣೂರು ಕ್ಷೇತ್ರದ ಬಗ್ಗೆ ಹಾವೇರಿಯಾಗಲಿ, ಶಿಗ್ಗಾಂವಿ-ಸವಣೂರಲ್ಲಿ ಬೆಟ್ಟಿಂಗ್‌ ನಡೆಯುತ್ತಿಲ್ಲ ಅಂತೇನೂ ಇಲ್ಲ. ಅಲ್ಲೂ ನಡೆಯುತ್ತಿದೆ. ಅದರಷ್ಟೇ ಪ್ರಮಾಣದಲ್ಲಿ ಹುಬ್ಬಳ್ಳಿಯಲ್ಲೂ ನಡೆಯುತ್ತಿರುವುದು ವಿಶೇಷ. ಇದರೊಟ್ಟಿಗೆ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ, ಅದಕ್ಕೆ ಕಾರಣವೇನು ಎಂಬುದನ್ನು ಲೆಕ್ಕ ಹಾಕಿ ಬೆಟ್ಟಿಂಗ್‌ನಲ್ಲಿ ತೊಡಗಿರುವುದು ಮತ್ತೊಂದು ವಿಶೇಷ.

ಬೆಟ್ಟಿಂಗ್‌:

ವಕ್ಫ್‌ ವಿವಾದ ಚುನಾವಣೆಯಲ್ಲಿ ಯಾವ ರೀತಿ ಬಳಕೆಯಾಯಿತು ಎಂಬುದರ ಚರ್ಚೆಯ ಜತೆ ಜತೆಗೆ ಇದರ ಲಾಭ ಬಿಜೆಪಿಗೆ ಆಗುತ್ತದೆಯೇ? ಎಂಬ ಲೆಕ್ಕಾಚಾರದ ವಿಶ್ಲೇಷಣೆ ಕೂಡ ನಡೆಯುತ್ತಿರುವುದು ಒಂದೆಡೆಯಾದರೆ, ಈ ವಿಶ್ಲೇಷಣೆ ಆಧಾರದ ಮೇಲೆ ಬೆಟ್ಟಿಂಗ್‌ ಶೂರರು ತಮ್ಮ ಬೆಟ್ಟಿಂಗ್‌ ಅಮೌಂಟ್‌ ಕೂಡ ಹೆಚ್ಚಿಸುತ್ತಿದ್ದಾರೆ. ₹ 1000ದಿಂದ ಹಿಡಿದು ಲಕ್ಷಗಟ್ಟಲೇ ದುಡ್ಡಿನ ಬಾಜಿ ಕಟ್ಟಲಾಗುತ್ತಿದೆ. ಕೆಲವರಂತೂ ತಾವು ಸೋತರೆ ಎರಡು ಪಟ್ಟು ಹಣ ನೀಡುವುದಾಗಿಯೂ ಹೇಳಿ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಇದು ಬರೀ ಹುಬ್ಬಳ್ಳಿ ನಗರಕ್ಕೆ ಅಷ್ಟೇ ಸೀಮಿತವಾಗಿಲ್ಲ. ಕುಂದಗೋಳ ಸೇರಿದಂತೆ ಹಳ್ಳಿಗಳಲ್ಲೂ ಬೆಟ್ಟಿಂಗ್‌ ನಡೆಯುತ್ತಿದೆ. ಕೆಲವೆಡೆ ಕುರಿ, ಕೋಳಿಗಳಂತಹ ಸಾಕು ಪ್ರಾಣಿಗಳೂ ಬೆಟ್ಟಿಂಗ್‌ನ ವಸ್ತುಗಳಾಗುತ್ತಿವೆ ಎಂಬ ಮಾತು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಉಪಚುನಾವಣೆ ಬೇರೆಡೆ ನಡೆದರೂ ಬೆಟ್ಟಿಂಗ್‌ ಹುಬ್ಬಳ್ಳಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬಲುಜೋರಾಗಿರುವುದಂತೂ ಸತ್ಯ.

Share this article