ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಎಂಜಿನಿಯರಿಂಗ್ ಪ್ರವೇಶಾತಿ ಪಡೆಯುವಲ್ಲಿ ವಿಷಯ ಮತ್ತು ಕಾಲೇಜುಗಳ ಆಯ್ಕೆಯೇ ಭವಿಷ್ಯ ನಿರ್ಧರಿಸಲಿದ್ದು ಎಚ್ಚರಿಕೆಯಿಂದ ಆಪ್ಷನ್ ಎಂಟ್ರಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಜೆಎನ್ಎನ್‌ಸಿಇ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಹೇಳಿದರು.ನಗರದ ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಎಂಜಿನಿಯರಿಂಗ್ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ತಜ್ಞರೊಂದಿಗೆ ಸಿಇಟಿ, ಕಾಮೆಡ್-ಕೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಆಸಕ್ತಿ ಅಧಾರದ ಮೇಲೆ ವಿಷಯ ಸಂಯೋಜನೆ ಆಯ್ಕೆ ಮಾಡಿಕೊಳ್ಳುವಂತೆ ಪೋಷಕರು ಪ್ರೋತ್ಸಾಹ ನೀಡಬೇಕಿದೆ. ವಿಭಿನ್ನ ಸಲಹೆಗಳಿಂದ ಮಕ್ಕಳನ್ನು ಗೊಂದಲಕ್ಕಿಡು ಮಾಡದಿರಿ. ಆದ್ಯತೆ ಆಧಾರದಲ್ಲಿ ಒಂದಕ್ಕಿಂತ ಹೆಚ್ಚು ವಿಷಯ, ಕಾಲೇಜು, ಸಂಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮುಂದಿನ ನಾಲ್ಕು ವರ್ಷದ ದೂರದೃಷ್ಟಿಯು ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಬೇಕಿದೆ. ಶಿಕ್ಷಣದ ಜೊತೆಗೆ ಕೌಶಲ್ಯತೆ, ನಾವೀನ್ಯ ಪ್ರಯೋಗಶೀಲ ವಾತಾವರಣ ಹೊಂದಿರುವ ಕಾಲೇಜುಗಳನ್ನು ಹೆಚ್ಚು ಕೇಂದ್ರಿಕರಿಸಿ. ಅದಕ್ಕಾಗಿ ಕಾಲೇಜುಗಳ ವೆಬ್ಸೈಟ್‌ಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ. ರಾಷ್ಟ್ರೀಯ ಮಾನ್ಯತಾ ಮಂಡಳಿ ಮತ್ತು ನ್ಯಾಕ್ ಮಾನ್ಯತೆ ಪಡೆದಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಬೋಧಕ ಸಿಬ್ಬಂದಿ, ಉದ್ಯೋಗವಕಾಶ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯುವುದು ಅಗತ್ಯ ಎಂದರು.ಹೊಸತನದ ಸಂಶೋಧನೆ ಮತ್ತು ನಾವೀನ್ಯ ಬದಲಾವಣೆಗಳ ಮೂಲಕ ಎಲ್ಲಾ ಎಂಜಿನಿಯರಿಂಗ್ ವಿಭಾಗಗಳು ವಿಶ್ವವ್ಯಾಪ್ತಿ ಉದ್ಯೋಗ ಸೃಷ್ಟಿಸುವಲ್ಲಿ ಸಫಲವಾಗಿದೆ. ಎಲ್ಲಾ ಕೋರ್ಸ್ ತನ್ನದೇ ಪ್ರಾಮುಖ್ಯತೆ ಪಡೆದಿದ್ದು, ಕೋರ್ಸ್ ಅಧ್ಯಯನದಲ್ಲಿ ನಾವೆಷ್ಟು ತೊಡಗಿಸಿಕೊಂಡಿದ್ದೇವೆ ಎಂಬುದು ಮುಖ್ಯ. ಹಾಗಾಗಿಯೇ ಗುರಿಯತ್ತ ಕೇಂದ್ರಿಕರಿಸಿ ಕೆಲಸ ಮಾಡಿದಾಗ ಮಾತ್ರ ನಿಜವಾದ ಸಾಧನೆ ಸಾಧ್ಯ ಎಂದು ಹೇಳಿದರು.
ಎಂಜಿನಿಯರಿಂಗ್ ವಿಷಯವಾರು ವಿವಿಧ ಉದ್ಯೋಗವಕಾಶ ಕುರಿತು ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ವಿದ್ಯಾರ್ಥಿ ವೇತನ ಕುರಿತು ಆಡಳಿತ ಕಚೇರಿ ದ್ವಿತೀಯ ದರ್ಜೆ ಸಹಾಯಕ ಆರ್.ಸತೀಶ್ ಮಾಹಿತಿ ನೀಡಿದರು.ಸಿಇಟಿ ಕಾಮೆಡ್-ಕೆ ಆಯ್ಕೆ ಪ್ರಕ್ರಿಯೆ ಕುರಿತಾಗಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ನರೇಂದ್ರ ಕುಮಾರ್ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಜೆಎನ್ಎನ್‌ಸಿಇ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಪ್ರವೇಶಾತಿ ಸಮಿತಿ ಮುಖ್ಯಸ್ಥರಾದ ಡಾ.ಎಸ್.ಸುರೇಂದ್ರ, ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಮೋಯಿನುದ್ದಿನ್ ಖಾನ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಈ.ಬಸವರಾಜ್, ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥರಾದ ಜಿ.ಸುರೇಶ್, ಪ್ರವೇಶಾತಿ ಸಮಿತಿ ಮಂಜುನಾಥ ಆಚಾರ್, ಮಹೇಶ್ವರಪ್ಪ, ಸಾಗರ್, ಹೇಮಲತಾ.ಎನ್.ಎಸ್, ಲೆಕ್ಕಪತ್ರ ಅಧಿಕಾರಿ ಗುರುರಾಜ್ ಸೇರಿ ಮತ್ತಿತರರು ಇದ್ದರು.ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ನಿರೂಪಿಸಿ, ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರವೇಶಾತಿ, ಆಪ್ಷನ್ ಎಂಟ್ರಿ ಕುರಿತ ಗೊಂದಲಗಳ ಕುರಿತು ಚರ್ಚಿಸಿದರು.ಶಿಕ್ಷಣ ತಜ್ಞರ ಸಲಹೆಗಳು:
1. ಆಪ್ಷನ್ ಎಂಟ್ರಿ ಮಾಡುವ ಮುನ್ನ ಕೆಇಎ ನೀಡುವ ಸೀಕ್ರೆಟ್ ಕೀ ಭದ್ರವಾಗಿ ಕಾಪಾಡಿಕೊಳ್ಳಿ2. ಪ್ರತಿದಿನ ಕೆಇಎ ವೆಬ್ಸೈಟ್ ಭೇಟಿ ನೀಡಿ ಹೊಸ ಪ್ರಕಟಣೆ ಬಗ್ಗೆ ತಿಳಿದುಕೊಳ್ಳಿ
3. ಕಾಲೇಜುಗಳ ಮಾನ್ಯತೆ, ಬೋಧನಾ ಕ್ರಮ, ಸಂಶೋಧನಾ ಚುಟವಟಿಕೆ, ಉದ್ಯೋಗವಕಾಶ, ಹಾಸ್ಟಲ್ ಸೌಲಭ್ಯ ಬಗ್ಗೆ ತಿಳಿಯಿರಿ4. ಕೋರ್ಸ್ ಮುಖ್ಯವೊ ಕಾಲೇಜು ಮುಖ್ಯವೊ ಎಂದು ಈಗಲೇ ನಿರ್ಧರಿಸಿಕೊಳ್ಳಿ
5. ಕೆಲವು ಕೋರ್ಸ್ ಮಾತ್ರ ಶ್ರೇಷ್ಟ ಎಂಬ ಭ್ರಮೆ ಬೇಡ6. ಕೆಇಎ ವೆಬ್ಸೈಟ್ ಮೂಲಕ ಹಿಂದಿನ ವರ್ಷಗಳ ಕಾಲೇಜು ಮತ್ತು ಕೋರ್ಸ್ ಕಟ್ಆಫ್ ತಿಳಿಯಿರಿ
7. ಸೀಟ್ ಮ್ಯಾಟ್ರಿಕ್ಸ್ ಬಗ್ಗೆ ತಿಳಿದುಕೊಳ್ಳಿ8. ಶುಲ್ಕ ಪಾವತಿಸುವ ಚಲನ್‌ಗಳನ್ನು ನಿಮ್ಮ ಖಾತೆಯಿರುವ ಬ್ಯಾಂಕ್ ಗಳಿಂದ ಪಾವತಿಸಿ
9. ಕೆಇಎ ನೀಡುವ ಕಾಲೇಜು ಪ್ರವೇಶಾತಿ ಆದೇಶ ಮರೆಯದೆ ಡೌನ್‌ಲೋಡ್ ಮಾಡಿಕೊಳ್ಳಿ