25ರಿಂದ ಹೊಳಲ್ಕೆರೆಗೆ ಭದ್ರಾ ನೀರು: ಡಿಸಿಎಂ ಡಿಕೆಶಿ ಚಾಲನೆ

KannadaprabhaNewsNetwork |  
Published : May 18, 2026, 01:15 AM IST
ಪಟ್ಟಣದ ಶಿವನೆಕೆರೆಯ ಜಾಕ್‌ವೆಲ್‌ನ ತಾಂತ್ರಿಕ ಸೌಲಭ್ಯಗಳನ್ನು ಶಾಸಕ ಡಾ. ಎಂ. ಚಂದ್ರಪ್ಪ ಪರಿಶೀಲಿಸಿದರು. | Kannada Prabha

ಸಾರಾಂಶ

ಪಟ್ಟಣದ ಶಿವನೆಕೆರೆಯ ಜಾಕ್‌ವೆಲ್‌ನ ತಾಂತ್ರಿಕ ಸೌಲಭ್ಯಗಳನ್ನು ಶಾಸಕ ಡಾ.ಎಂ.ಚಂದ್ರಪ್ಪ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಹೊಳಲ್ಕೆರೆ ಕ್ಷೇತ್ರದ ಜನತೆಯ ನಿರೀಕ್ಷೆ ಇದೀಗ ಗರಿಗೆದರುವ ಸಂದರ್ಭ ಬಂದಿದೆ. ಭದ್ರಾ ನದಿಯಿಂದ ಬರುವ ನೀರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮೇ 25ರಂದು ಚಾಲನೆ ನೀಡಲಿದ್ದಾರೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಪಟ್ಟಣದ ಶಿವನಕೆರೆಯಲ್ಲಿ ನಿರ್ಮಿಸಿರುವ ಭದ್ರಾ ಮೇಲ್ದಂಡೆ ಯೋಜನೆಯ ಜಾಕ್‌ವೆಲ್‌ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಅಲ್ಲಿನ ಸಿದ್ಧತೆಗಳನ್ನು ಶಾಸಕರು ಪರಿಶೀಲಿಸಿ ನಂತರ ಮಾಹಿತಿ ನೀಡಿದರು.

ತಾಲೂಕು ಹಾಗೂ ಜಿಲ್ಲೆಯ ರೈತರ ದಶಕಗಳ ಕನಸು ಈಡೇರುವ ಕಾಲ ಈಗ ಕೂಡಿ ಬಂದಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಇದ್ದ ತೊಡಕುಗಳೆಲ್ಲ ನಿವಾರಣೆ ಆಗಿದ್ದು, ಜಿಲ್ಲೆಗೆ ನೀರು ಹರಿಯುವ ಸಮಯ ಬಂದಿದೆ. ಅಜ್ಜಂಪುರ ಸಮೀಪದ ಹಬ್ಬಿನ ಹೊಳಲು ಸಮೀಪ ನೆನೆಗುದಿಗೆ ಬಿದ್ದಿದ್ದ ಪ್ರಕರಣ ಇತ್ಯರ್ಥವಾಗಿದ್ದು, ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಅಲ್ಲಿ ದೊಡ್ಡ ಬಂಡೆ ಅಡ್ಡ ಬಂದಿರುವುದರಿಂದ ಕಾಮಗಾರಿ ವಿಳಂಬವಾಯಿತು. ಎಂಜಿನಿಯರ್‌ಗಳು, ಕಾರ್ಮಿಕರ ಶ್ರಮದಿಂದ ಬಂಡೆ ಹೊಡೆಯುವ ಕಾರ್ಯ ಭರದಿಂದ ಸಾಗಿದೆ. ಮೇ 25ರಂದು ನೀರು ಹರಿಯಲು ಚಾಲನೆ ನೀಡಲಿದ್ದು, ಹೊಳಲ್ಕೆರೆ ತಾಲೂಕಿಗೆ ಮೊದಲು ನೀರು ಹರಿಯಲಿದೆ ಎಂದರು.

ಪಟ್ಟಣದಲ್ಲಿರುವ ಶಿವನ ಕೆರೆ ರಿಸರ್ವ್ ಟ್ಯಾಂಕ್ ಆಗಿದ್ದು, ಗಂಗಸಮುದ್ರ ಕೆರೆಯಿಂದ ನೇರವಾಗಿ ಇಲ್ಲಿಗೆ ಭದ್ರಾ ನೀರು ಬರುತ್ತದೆ. ಶಿವಕೆರೆಯಲ್ಲಿ 130 ಕೋಟಿ ರು. ವೆಚ್ಚದಲ್ಲಿ ಜಾಕ್ ವೆಲ್ ನಿರ್ಮಿಸಿದ್ದು, ಕಾಮಗಾರಿ ಸಂಪೂರ್ಣ ಮುಗಿದಿದೆ. ಇಲ್ಲಿ 1,030 ಎಚ್‌ಪಿ ಸಾಮರ್ಥ್ಯದ ಮೂರು ಮೋಟಾರ್ ಗಳನ್ನು ಅಳವಡಿಸಲಾಗಿದೆ. ಇಲ್ಲಿಂದ ಏತ ನೀರಾವರಿ ಮೂಲಕ ಕುಡಿನೀರಕಟ್ಟೆ ಗುಡ್ಡದಲ್ಲಿ ನಿರ್ಮಿಸಿರುವ ಟ್ಯಾಂಕ್‌ಗೆ ನೀರು ಹರಿಸಲಾಗುವುದು. ಅಲ್ಲಿಂದ ಗುರುತ್ವಾಕರ್ಷಣೆಯಲ್ಲಿ ತಾಳ್ಯ ಹೋಬಳಿಯ ಕೆರೆಗಳಿಗೆ ನೀರು ಹರಿಯಲಿದೆ. ಎಡದಂಡೆ ಕಾಲುವೆಯ ಮೂಲಕ ಹಳೇಹಳ್ಳಿ, ಟಿ.ಎಮ್ಮಿಗನೂರು, ಶಿವಗಂಗಾ ಕೆರೆಗಳಿಗೆ ನೀರು ಹರಿಯಲಿದೆ. ಬಲದಂಡೆ ಕಾಲುವೆ ಮೂಲಕ ತಾಳ್ಯ, ಹೊರಕೆರೆದೇವರಪುರ, ನಂದನಹೊಸೂರಿನ ಗುಂಡಿಕೆರೆ, ಹಾಲೇನಹಳ್ಳಿ, ಕೆರೆಯಾಗಳಹಳ್ಳಿ ಕೆರೆಗಳಿಗೆ ನೀರು ಹರಿಯಲಿದೆ ಎಂದರು. ಜಾಕ್‌ವೆಲ್‌ನಲ್ಲಿ ತಾಂತ್ರಿಕ ತೊಂದರೆಗಳಿದ್ದರೆ ಶೀಘ್ರವೇ ಪರಿಹರಿಸಿ ನೀರು ಹರಿಯಲು ಕ್ರಮ ಕೈಗೊಳ್ಳಬೇಕು ಎಂದು ಬೆಸ್ಕಾಂ ಎಂಜಿನಿಯರ್‌ಗೆ ಸೂಚಿಸಿದರು. ಈ ವೇಳೆ ಭದ್ರಾ ಮೇಲ್ದಂಡೆ ಯೋಜನೆಯ ಇಇ ನಾಗರಾಜ್, ಸಹಾಯಕ ಎಂಜಿನಿಯರ್ ಗುರು ಬಸವರಾಜ್, ಬೆಸ್ಕಾಂ ಇಇ ಹರೀಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿರುಗಾಳಿ, ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಬೆಳೆ ನಾಶ
ಎಲ್ಲ ಸಮುದಾಯಗಳ ಹಿತ ಕಾಯುವ ಹೊಣೆ ನನ್ನ ಮೇಲಿದೆ