ಅನಂತಕುಮಾರ್
ನಗರದ ಕಡದಕಟ್ಟೆ ಬಳಿ ಪ್ರಗತಿಯಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಸುಮಾರು 2 ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ. ಇದರಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಇನ್ನೂ 1 ವರ್ಷ ಕಳೆದರೂ ಕಾಮಗಾರಿ ಮುಕ್ತಾಯಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ.
ಒಂದೆಡೆ ನಗರ ಪ್ರದೇಶದ ಹೊರಭಾಗದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ನಗರದ ಹೃದಯ ಭಾಗದಲ್ಲೂ ರಸ್ತೆ ಕಾಮಗಾರಿಗಳು ಮುಕ್ತಾಯಗೊಳ್ಳುವ ಹಂತಕ್ಕೆ ತಲುಪಿವೆ. ಈ ನಡುವೆ ಕಡದಕಟ್ಟೆ ಬಿ.ಎಚ್. ರಸ್ತೆಯಲ್ಲಿ ಸೌತ್ ವೆಸ್ಟರನ್ ರೈಲ್ವೆ, ಮೈಸೂರು ವ್ಯಾಪ್ತಿಗೆ ಒಳಪಡುವ ಎಲ್.ಸಿ ನಂ.34ರಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕಳೆದ 2 ವರ್ಷಗಳಿಂದ ನಡೆಯುತ್ತಿರುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ.ಶಿವಮೊಗ್ಗ- ಭದ್ರಾವತಿ ನಡುವೆ ಪ್ರಯಾಣಿಸುವವರು ಮುಖ್ಯ ಬಸ್ ನಿಲ್ದಾಣಕ್ಕೆ ನಗರದ ಹೊರವಲಯವನ್ನು ಸುತ್ತಿಕೊಂಡು ಬರಬೇಕಾಗಿದೆ. ಇದರಿಂದಾಗಿ ಸಮಯ ವ್ಯರ್ಥವಾಗುವ ಜೊತೆಗೆ ಸರ್ಕಾರಿ ಬಸ್‌ಗಳು ಹೆಚ್ಚುವರಿಯಾಗಿ ಇಂಧನ ವ್ಯಯಿಸುವಂತಾಗಿದೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ನಗರಸಭೆ ವ್ಯಾಪ್ತಿಯ ಭಂಡಾರಹಳ್ಳಿ, ಹೆಬ್ಬಂಡಿ, ಕವಲಗುಂದಿ ಪ್ರದೇಶದ ನಿವಾಸಿಗಳು ಕಳೆದ 2 ವರ್ಷಗಳಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ರಸ್ತೆಯಲ್ಲಿನ ಅಂಗಡಿ -ಮುಂಗಟ್ಟುಗಳ ವ್ಯಾಪಾರಸ್ಥರು, ವರ್ತಕರ ಸ್ಥಿತಿ ಹೇಳತೀರದು. ವ್ಯಾಪಾರ ವಹಿವಾಟು ಇಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಹಲವು ಕಾಮಗಾರಿಗಳು ಬಾಕಿ: ನಗರದ ರೈಲ್ವೆ ನಿಲ್ದಾಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಬಾಕಿ ಉಳಿದಿವೆ. ರೈಲು ನಿಲುಗಡೆ ಸ್ಥಳದಲ್ಲಿ ಸಂಪೂರ್ಣವಾಗಿ ಮೇಲ್ಛಾವಣಿ ನಿರ್ಮಾಣ, ಲಿಫ್ಟ್ ಅಳವಡಿಕೆ, ನಿಲ್ದಾಣದ ಹೊರಭಾಗದಲ್ಲಿ ವಾಹನಗಳ ನಿಲುಗಡೆ ಸ್ಥಳ ಅಭಿವೃದ್ಧಿ. ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವುದು. ಭವಿಷ್ಯದ ಅಭಿವೃದ್ಧಿಗೆ ಪೂರಕವಾಗುಂತೆ ನಿಲ್ದಾಣವನ್ನು ರೂಪುಗೊಳಿಸಬೇಕಾಗಿದೆ.
ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಮೆ. ಎಸ್‌ಆರ್‌ಸಿ ಕಂಪನಿ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್ ಕಳೆದ 2 ವರ್ಷಗಳಿಂದ ಕೈಗೊಳ್ಳುತ್ತಿದೆ. ಆರಂಭದಲ್ಲಿ ಚುರುಕುಗೊಂಡ ಕಾಮಗಾರಿ ನಂತರ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಹಿಂದೆ ನಗರದ ತರೀಕೆರೆ ರಸ್ತೆಯಲ್ಲಿ ನಿರ್ಮಿಸಲಾಗಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬಗೊಳ್ಳುವ ಜೊತೆಗೆ ಕಳಪೆಯಿಂದ ಕೂಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
- - - ಕೋಟ್ ರೈಲ್ವೆ ಕಾಮಗಾರಿ ಆರಂಭ ಆದಾಗಿನಿಂದಲೂ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಕುಸಿದಿದೆ. ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಕಾಮಗಾರಿ ತುಂಬಾ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಯಾವಾಗ ಮುಕ್ತಾಯ ಆಗುತ್ತದೆಯೋ ಗೊತ್ತಿಲ್ಲ. ಈಗಾಗಲೇ ನಗರದ ಬೇರೆ ಸ್ಥಳಕ್ಕೆ ವ್ಯಾಪಾರ ವಹಿವಾಟು ಸ್ಥಳಾಂತರಿಸಿಕೊಂಡು ಜೀವನ ನಿರ್ವಹಿಸಲಾಗುತ್ತಿದೆ. ನಗರಕ್ಕೆ ತೆರಳಲು ಸುಮಾರು 1ರಿಂದ. 1.5 ಕಿ.ಮೀ ದೂರು ನಡೆದುಕೊಂಡು ಹೋಗಬೇಕಾಗಿದೆ. ಕಾಮಗಾರಿ ವಿಳಂಬ ಕುರಿತು ಪ್ರಶ್ನಿಸುವವರು ಯಾರು ಇಲ್ಲದಂತಾಗಿದೆ
- - - -ಡಿ12ಬಿಡಿವಿಟಿ2, 2(ಎ):