ಚಿತ್ರದುರ್ಗ ಶಾಖಾ ಕಾಲುವೆಗೆ ಹರಿಯಲು ಭದ್ರೆ ಧಾವಂತ

KannadaprabhaNewsNetwork |  
Published : May 24, 2026, 01:15 AM IST
ಚಿತ್ರದುರ್ಗ ನಾಲ್ಕನೇ ಪುಟದ ಲೀಡ್ | Kannada Prabha

ಸಾರಾಂಶ

ಶಾಸಕರಾದ ಶಾಸಕರಾದ ಬಿ.ಜಿ.ಗೋವಿಂದಪ್ಪ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ವೀರೇಂದ್ರ ಪಪ್ಪಿ ಅವರುಗಳು ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಲಿಫ್ಟ್ ಮಾಡುವ ಪಂಪ್ ಹೌಸ್ ಕಾಮಗಾರಿ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಭದ್ರೆ ಹರಿದು ಬರುವ ಕಾಲ ಮತ್ತಷ್ಟು ಸನ್ನಿಹಿತವಾಗಿದೆ. ಕಾಲುವೆಗೆ ಪ್ರಯೋಗಾರ್ಥ ನೀರು ಹರಿಸುವ ತವಕ ಜನ ಪ್ರತಿನಿಧಿಗಳಿಗಿಂತ ಹೆಚ್ಚಾಗಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಮುಖ್ಯ ಎಂಜಿನಿಯರ್ ಎಫ್‌.ಎಚ್.ಲಮಾಣಿ ಅವರಿಗಿದೆ. ಇವರಿಬ್ಬರೂ ಮೇ 30ಕ್ಕೆ ನಿವೃತ್ತರಾಗಲಿದ್ದು ಅಷ್ಟರೊಳಗೆ ಕಾಲುವೆಗೆ ನೀರು ಹಾಯಿಸಿ ಕಣ್ತುಂಬಿಕೊಂಡು ಮನೆ ಕಡೆ ಹೋಗುವ ಆಸೆ ಹೊಂದಿದ್ದಾರೆ. ಶಾಸಕ ಎಂ.ಚಂದ್ರಪ್ಪ ಹಾಗೂ ವೀರೇಂದ್ರ ಪಪ್ಪಿ ಅವರು ಕೂಡಾ ಗೋನೂರು ಕೆರೆವರೆಗೆ ನೀರು ಹರಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ಜಿಲ್ಲೆಯ ಶಾಸಕರಾದ ಬಿ.ಜಿ.ಗೋವಿಂದಪ್ಪ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ವೀರೇಂದ್ರ ಪಪ್ಪಿ ಹಾಗೂ ಮಾಜ ಸಂಸದ ಬಿ.ಎನ್.ಚಂದ್ರಪ್ಪ ಅವರುಗಳನ್ನೊಳಗೊಂಡ ಟೀಂ ಶನಿವಾರ ತುಂಗಾದಿಂದ ಭದ್ರೆಗೆ ನೀರು ಲಿಫ್ಟ್ ಮಾಡುವ ಎರಡು ಪಂಪ್ ಹೌಸ್ ಹಾಗೂ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪರಿಶೀಲಿಸಿತು. ವಾರದೊಳಗೆ ನೀರು ಹರಿಯುವ ಸಾಧ್ಯತೆ ಬಗ್ಗೆ ಚರ್ಚಿಸಿತು.

ತುಂಗಾ ಜಲಾಶಯದಿಂದ ಭದ್ರಾ ಜಲಾಶಯದವರೆಗೆ ಹಾಗೂ ಅಲ್ಲಿಂದ ಚಿತ್ರದುರ್ಗ ಶಾಖಾ ಕಾಲುವೆ, ವೈ-ಜಂಕ್ಷನ್ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ನಿಗದಿತ ಅವಧಿಯೊಳಗೆ ಭದ್ರಾ ನೀರು ಚಿತ್ರದುರ್ಗ ಸೇರಿದಂತೆ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಲು ಜನ ಪ್ರತಿನಿಧಿಗಳು ನಿರ್ದೇಶನ ನೀಡಿದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಹೊಳಲ್ಕೆರೆ ತಾಲೂಕಿನ 20 ಕೆರೆಗಳಿಗೆ ವಾರದೊಳಗೆ ನೀರು ಹಾಯಿಸಲೇಬೇಕು. ಇದಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಅಬ್ಬಿನಹೊಳಲು ಬಳಿ ಇದ್ದ ಅಡೆತಡೆ ಹೆಚ್ಚುಕಡಿಮೆ ಪೂರ್ಣಗೊಂಡಿದ್ದು ಪ್ರಯೋಗಾರ್ಥ ನೀರು ಹಾಯಿಸುವಂತೆ ಸೂಚಿಸಿದರು.

ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ, ಭದ್ರಾ ನೀರು ಗೋನೂರು ಕೆರೆವರೆಗೆ ಹರಿಸಲು ಸಚಿವ ಡಿ.ಸುಧಾಕರ್ ಅವರಿದ್ದಾಗಲೇ ತೀರ್ಮಾನಿಸಲಾಗಿತ್ತು. ಸರ್ಕಾರ ಕೂಡಾ ಅಗತ್ಯ ಅನುದಾನ ನೀಡಿದ್ದು ಭದ್ರಾ ನೀರು ಹರಿಯುವಿಕೆ ಕಾಣಲು ರೈತರು ಆಸೆಗಣ್ಣುಗಳ ತೆರೆದಿಟ್ಟುಕೊಂಡಿದ್ದಾರೆ. ಇಬ್ಬರು ಪ್ರಮುಖ ಇಂಜಿನಿಯರ್ ಗಳು ನಿವೃತ್ತಿಯಾಗುವುದರ ಒಳಗೆ ನೀರು ಹರಿಯಲಿ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ಅಧೀಕ್ಷಕ ಎಂಜಿನಿಯರ್ ಹರೀಶ್, ಉಪಮುಖ್ಯ ಅಧಿಕ್ಷಕ ಎಂಜಿನಿಯರ್ ಪುಷ್ಪಲತಾ, ಕಾರ್ಯಪಾಲಕ ಎಂಜಿನಿಯರ್ ಹರ್ಷ, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಕಿರಣ್ ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆಗೆ ಬೆಂಕಿ : ಲಕ್ಷಾಂತಕ ರು ನಷ್ಟ
50 ಮಿಲಿಯನ್ ಸಸಿಗಳ ನೆಡುವ ಅಭಿಯಾನ