ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಚಳ್ಳಕೆರೆ ರಸ್ತೆಯ ಬಾಲಾಜಿ ಲೇಔಟ್‍ನ ಮದರ್ ತೆರೆಸಾ ವಿದ್ಯಾಸಂಸ್ಥೆ ಕಟ್ಟಡದಲ್ಲಿ ಶನಿವಾರ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಭೋವಿ ಜನಾಂಗದ ನಿರುದ್ಯೋಗ ಯುವಕ, ಯುವತಿಯರಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಟೈಲರಿಂಗ್ ತರಬೇತಿ ಹಾಗೂ ಯಂತ್ರೋಪಕರಣ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಕೇವಲ ಮನೆಗೆ ಮಾತ್ರ ಸೀಮಿತವಾಗದೆ, ಹೊರಗಡೆ ಬಂದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಜನತೆಗೆ 5 ಗ್ಯಾರಂಟಿ ಯೋಜನೆಗಳನ್ನು ತಲುಪಿಸುತ್ತಿದ್ದಾರೆ. ಇದರೊಂದಿಗೆ ಭೋವಿ ನಿಗಮದ ವತಿಯಿಂದ ಹಸು ಸಾಕಾಣಿಕೆ ಸಾಲ, 1 ಲಕ್ಷ ರು. ನೇರ ಸಾಲ, ಗಂಗಾ ಕಲ್ಯಾಣ ಯೋಜನೆ, ಸಾರಥಿ ವಾಹನ ಸೌಲಭ್ಯ ಸಾಲ ಹಾಗೂ ಮಹಿಳಾ ಸಂಘಗಳಿಗೆ 5 ಲಕ್ಷ ರು. ವರೆಗೆ ಸಾಲ ಸೇರಿದಂತೆ ಒಟ್ಟು 6 ಭಾಗ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಈಗ 10 ವರ್ಷಗಳು ಪೂರೈಸುತ್ತಿದ್ದು, ದಶಮಾನೋತ್ಸವದ ಸಂಭ್ರಮದಲ್ಲಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.ತರಬೇತಿ ನಂತರ ನೀಡಲಾಗುವ ಪ್ರಮಾಣಪತ್ರ ಉದ್ಯೋಗ ಭದ್ರತೆ ಒದಗಿಸಲಿದೆ. ಒಂದು ವೇಳೆ ಉದ್ಯೋಗ ದೊರೆಯದಿದ್ದರೂ ಸಹ, ಸ್ವಯಂ ಉದ್ಯೋಗದ ಮೂಲಕ ನಿಮ್ಮ ಮನೆಗಳಲ್ಲೇ ಸ್ವತಂತ್ರವಾಗಿ ಕೆಲಸ ನಿರ್ವಹಿಸಬಹುದು. ತರಬೇತಿಗೆ ಬರುವಾಗ ಮತ್ತು ಹೋಗುವಾಗ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ನೀಡಬೇಕು ಹಾಗೂ ಸಹಿ ಮಾಡಬೇಕು. ದಿನನಿತ್ಯದ ಹಾಜರಾತಿಯನ್ನು ಜಿಪಿಎಸ್ ಫೋಟೋಗಳ ಮೂಲಕ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ. ತರಬೇತಿಯ ಹಾಜರಾತಿಯಲ್ಲಿ ಯಾವುದೇ ರೀತಿಯ ಪ್ರಭಾವ ಅಥವಾ ರಿಯಾಯಿತಿಗಳಿಗೆ ಅವಕಾಶವಿರುವುದಿಲ್ಲ ಎಂದರು.
ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರ ನಾಯ್ಕ್ ಮಾತನಾಡಿ, ಮಹಿಳೆಯರು ಪುರುಷ ಪ್ರಧಾನ ಸಮಾಜದಲ್ಲಿ ಸಮಾನ ಹಕ್ಕು, ಪ್ರಾತಿನಿಧ್ಯ ಪಡೆದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗಬೇಕು ಎನ್ನುವುದೇ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ.ರವಿಕುಮಾರ್, ಭೋವಿ ಸಮಾಜದ ಮುಖಂಡ ತಿಪ್ಪೇಸ್ವಾಮಿ ಇದ್ದರು.