ತಾಲೂಕಾ ಭಗವದ್ಗೀತಾ ಅಭಿಯಾನ ಉದ್ಘಾಟಿಸಿದ ಭಗವದ್ಗೀತಾ ಅಭಿಯಾನ ಸಮಿತಿಯ ಜಿಲ್ಲಾಧ್ಯಕ್ಷ
ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಉಂಟಾಗಲು, ಜೀವನ ಹೇಗೆ ನಿರ್ವಹಣೆ ಮಾಡಬೇಕು, ನಮ್ಮ ಕರ್ತವ್ಯಗಳೇನು ಎಂಬುದನ್ನು ಅರಿಯಲು ಇಂದಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪಠಣ ಅತ್ಯವಶ್ಯಕ ಎಂದು ಭಗವದ್ಗೀತಾ ಅಭಿಯಾನ ಸಮಿತಿಯ ಜಿಲ್ಲಾಧ್ಯಕ್ಷ ಮುರಳೀಧರ ಪ್ರಭು ಹೇಳಿದರು.
ಮಿರ್ಜಾನದ ಬಿಜಿಎಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಆಶ್ರಯದಲ್ಲಿ ಇತ್ತೀಚೆಗೆ ತಾಲೂಕಾ ಭಗವದ್ಗೀತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಬಿಜಿಎಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಭಗವದ್ಗೀತೆ ಶ್ಲೋಕ ಕಲಿಸುತ್ತಿರುವುದು ಶ್ಲಾಘನೀಯ ಎಂದರು.ಪ್ರಾಸ್ತಾವಿಕ ಮಾತನಾಡಿದ ಬಿಜಿಎಸ್ ಶೈಕ್ಷಣಿಕ ನಿರ್ದೇಶಕ ಎಂ.ಟಿ. ಗೌಡ, ಭಗವದ್ಗೀತೆಯ ಕರ್ಮ ಯೋಗ, ಭಕ್ತಿ ಯೋಗ ಮತ್ತು ಜ್ಞಾನ ಯೋಗದ ಮಹತ್ವ ವಿವರಿಸಿದರು.
ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕ ಗಣೇಶ ಭಟ್ ಭಗವದ್ಗೀತೆ ಪಠನ ನಡೆಸಿಕೊಟ್ಟರು. ಸಮಿತಿಯ ಉಪಾಧ್ಯಕ್ಷೆ ಸುಧಾ ಶಾನಭಾಗ, ಬಿಜಿಎಸ್ ಪ್ರಾಚಾರ್ಯೆ ಅರ್ಚನಾ ಭಟ್, ಉಪಪ್ರಾಚಾರ್ಯೆ ಅನುರಾಧ ಗುನಗ, ಶಿಕ್ಷಕ ಎಂ.ಜಿ. ಹಿರೇಕುಡಿ ಇನ್ನಿತರರು ಉಪಸ್ಥಿತರಿದ್ದರು.