ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಧರ್ಮಧ್ವಜ ತೆರವುಗೊಳಿಸಿದ ಪುರಸಭೆ ಹಾಗೂ ಪೊಲೀಸರ ನಡೆ ವಿರೋಧಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರವಾಸಿ ಮಂದಿರ ವೃತ್ತದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ವಿವಾದಕ್ಕೆ ಕಾರಣ:ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಧ್ವಜಸ್ತಂಭ ನಿರ್ಮಿಸಿ ಕಳೆದ 40 ವರ್ಷಗಳಿಂದಲೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಕೇಸರಿ ಬಣ್ಣದ ಭಗವಾಧ್ವಜವನ್ನು ಹಾರಿಸುತ್ತಿದ್ದರು. ಯಾವುದೇ ವಿವಾದವಿಲ್ಲದೆ ವೃತ್ತದಲ್ಲಿ ಧರ್ಮಧ್ವಜ ಹಾರಾಡುತ್ತಿತ್ತು.
ನಂತರ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಮತ್ತು ಪುರಸಭೆಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಗೆ ಮುಂದಾಗಿರಲಿಲ್ಲ. ಚುನಾವಣೆ ಮುಗಿದ ನಂತರವೂ ಕೆಲ ಕಾಲ ಹಿಂದೂಪರ ಸಂಘಟನೆಗಳ ಧರ್ಮಧ್ವಜ ಹಾಗೂ ಅದರ ನೆತ್ತಿಯ ಮೇಲೆ ನೀಲಿ ಧ್ವಜ ಹಾರಡುತ್ತಲೇ ಇತ್ತು.
ಇತ್ತೀಚೆಗೆ ಮಂಡ್ಯ ತಾಲೂಕು ಕೆರೆಗೂಡು ಗ್ರಾಮದಲ್ಲಿ ಉಂಟಾಗಿದ್ದ ಹನುಮಧ್ವಜ ವಿವಾದದಂತೆ ಕೆ.ಆರ್.ಪೇಟೆ ಪಟ್ಟಣದಲ್ಲಿಯೂ ಧ್ವಜ ದಂಗಲ್ ಆರಂಭಗೊಳ್ಳುವ ಸುಳಿವು ಅರಿತ ಪಟ್ಟಣ ಪೊಲೀಸರು ಪ್ರವಾಸಿ ಮಂದಿರ ವೃತ್ತದಲ್ಲಿ ಹಾರಾಡುತ್ತಿದ್ದ ಧರ್ಮಧ್ವಜವನ್ನು ಧ್ವಜಸ್ತಂಭದ ಸಮೇತ ತೆರವುಗೊಳಿಸಿ ವೃತ್ತದ ಸುತ್ತ ಬ್ಯಾರೀಕೆಡ್ ಹಾಕಿ ಯಾವುದೇ ಅಹಿತರ ಘಟನೆಗಳಿಗೆ ಆಸ್ಪದವಾಗದಂತೆ ಪರಿಸ್ಥಿತಿ ನಿಯಂತ್ರಿಸಿದ್ದರು.
ಧ್ವಜ ಸಂಬಂಧ ಯಾವುದೇ ವಿವಾದ ಉಂಟಾಗಬಾರದೆಂಬ ಕಾರಣದಿಂದ ಧ್ವಜಸ್ತಂಭದ ಕೆಳಭಾಗದಲ್ಲಿನ ಕಳಸ ಮಾದರಿಯ ನಿರ್ಮಾಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣ, ವೀರ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ನಾಡಪ್ರಭು ಕೆಂಪೇಗೌಡ, ಮಡಿವಾಳ ಮಾಚಿದೇವರು ಮುಂತಾದ ಮಹಾನ್ ನಾಯಕರು ಹಾಗೂ ದಾರ್ಶನಿಕರ ಭಾವಚಿತ್ರಗಳನ್ನು ಅಳವಡಿಸಿದ್ದರು.
ಧರ್ಮಧ್ವಜ ತೆರವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಹಾಗೂ ಪೊಲೀಸರ ನಡೆಯನ್ನು ಖಂಡಿಸಿ ಪ್ರವಾಸಿ ಮಂದಿರ ವೃತ್ತದಲ್ಲಿಯೇ ಪ್ರತಿಭಟನೆ ಆರಂಭಿಸಿದರು.
ಹಿಂದೂಪರ ಸಂಘಟನೆಗಳು ಪುರಸಭೆಗೆ ಅನುಮತಿ ಕೋರಿ ಮನವಿ ಸಲ್ಲಿಸಲಿ. ಪುರಸಭೆ ಅನುಮೋದಿಸಿದರೆ ಅದನ್ನು ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು. ಸರ್ಕಾರ ಅನುಮತಿ ನೀಡಿದರೆ ಪ್ರವಾಸಿ ಮಂದಿರ ವೃತ್ತದಲ್ಲಿ ಧರ್ಮಧ್ವಜ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ತಿಳಿಸಿದರು. ಆನಂತರ ಪ್ರತಿಭಟನೆಯನ್ನು ಕೈಬಿಟ್ಟ ಹಿಂದೂ ಕಾರ್ಯಕರ್ತರು ಭಗವಾಧ್ವಜ ಸ್ಥಂಭವನ್ನು ಟ್ರ್ಯಾಕ್ಟರ್ ಮೂಲಕ ತೆಗೆದುಕೊಂಡು ಹೋದರು.
ಪುರಸಭೆ ಮುಖ್ಯಾಧಿಕಾರಿ ರಾಜು ವಠಾರ, ಇನ್ಸ್ ಪೆಕ್ಟರ್ ಆನಂದೇಗೌಡ, ಪಿ.ಎಸ್.ಐಗಳಾದ ನವೀನ್, ಸುಬ್ಬಯ್ಯ ನೇತೃತ್ವದ ಪೊಲೀಸರ ತಂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿಬಂದೋಬಸ್ತ್ ಏರ್ಪಡಿಸಿತ್ತು.ಕಳೆದ 40 ವರ್ಷಗಳಿಂದ ಪ್ರವಾಸಿ ಮಂದಿರ ವೃತ್ತದಲ್ಲಿ ಭಗವಾಧ್ವಜ ಹಾರಾಡುತ್ತಿದೆ. ಇದಕ್ಕೆ ಯಾರು ವಿರೋಧ ಮಾಡಿಲ್ಲ. ಆದರೆ, ಈಗ ಕೆಲವರು ಉದ್ದೇಶ ಪೂರ್ವಕವಾಗಿ ವಿವಾದದ ಸ್ವರೂಪ ನೀಡುತ್ತಿದ್ದಾರೆ. ಹಿಂದೂ ಸಮುದಾಯಗಳ ನಡುವೆ ಭಿನ್ನಮತ ಹುಟ್ಟು ಹಾಕಲು ಕೇಸರಿ ಧ್ವಜ ತೆರವುಗೊಳಿಸಲು ರಾಜ್ಯ ಸರ್ಕಾರವೇ ಕೆಲವು ಸಂಘಟನೆಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ.
-ನಟರಾಜ್ , ಹಿಂದೂಪರ ಸಂಘಟನೆಗಳ ಮುಖಂಡ