ಕನ್ನಡಪ್ರಭ ವಾರ್ತೆ ಹಿರಿಯಡ್ಕ
ನವ ವಿಧ ಭಕ್ತಿಗಳಲ್ಲಿ ಭಜನೆಗೆ ವಿಶಿಷ್ಟ ಸ್ಥಾನವಿದೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಏಕಾಗ್ರತೆಯ ಜೊತೆಗೆ ಸಂಸ್ಕಾರದ ಸ್ಪರ್ಶ ನೀಡುವಲ್ಲಿ ಭಜನೆಯ ಪಾತ್ರ ಮಹತ್ವಪೂರ್ಣ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಹೇಳಿದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು, ಹಿರಿಯಡ್ಕ ವಲಯದ ನೇತೃತ್ವದಲ್ಲಿ ಇಲ್ಲಿನ ಮಹಾತೋಭಾರ ಶ್ರೀ ವೀರಭದ್ರ ದೇವಸ್ಥಾನ ಜು.28ರಿಂದ ಆ.25ರ ವರೆಗೆ ಪ್ರತೀ ಭಾನುವಾರ ನಡೆದ ಉಚಿತ ಭಜನಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು, ನಂತರ ಕುಣಿತ ಭಜನಾ ತರಬೇತುದಾರರಾದ ಪೂರ್ಣಿಮಾ ಪೆರ್ಡೂರು, ಪ್ರಕಾಶ್ ಮಂದಾರ್ತಿ, ನಿತ್ಯಾನಂದ ಕಬ್ಯಾಡಿ ಮತ್ತು ರೋಹಿತ್ ಕಬ್ಯಾಡಿ ಅವರನ್ನು ಸನ್ಮಾನಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಪುರೋಹಿತ ಸುಬ್ರಹ್ಮಣ್ಯ ಆಚಾರ್ಯ, ಭಜನೆ ಭಗವಂತನನ್ನು ಒಲಿಸಿಕೊಳ್ಳುವ ಸುಲಭ ವಿಧಾನ. ಭಜನೆ ಭಕ್ತ ಮತ್ತು ದೇವರ ನಡುವಿನ ಕೊಂಡಿಯಾಗಿದೆ. ಭಗವಂತನಿಗೆ ಅತಿ ಪ್ರಿಯವಾದ ಕುಣಿತದ ಭಜನೆಯ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ತಾಲೂಕು ಭಜನಾ ಪರಿಷತ್ ಸಾಧನೆ ಅಭಿನಂದನೀಯ ಎಂದರು.ಶ್ರೀ ಕ್ಷೇತ್ರ ಹಿರಿಯಡ್ಕದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಟರಾಜ್ ಹೆಗ್ದೆ, ಭಜನಾ ಪರಿಷತ್ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಪಿ., ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಇದ್ದರು.ಸಮಾರೋಪದ ಪೂರ್ವದಲ್ಲಿ ಶಿಬಿರಾರ್ಥಿಗಳಿಂದ ನಡೆದ ಕುಣಿತ ಭಜನಾ ಪ್ರಾತ್ಯಕ್ಷಿಕೆಗೆ ಶ್ರೀ ದೇವಳದ ಹಿರಿಯ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ತಂತ್ರಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ವಂದಿಸಿದರು. ಉಪನ್ಯಾಸಕಿ ನಳಿನಾ ಎಮ್.ಆರ್. ನಿರೂಪಿಸಿದರು.