ಭಕ್ತಿಯು ಮುಕ್ತಿ ಸಾಧನೆಗೆ ದೊಡ್ಡ ಸೇತುವೆ: ಹಾರಕೂಡ ಶ್ರೀ

KannadaprabhaNewsNetwork | Published : Feb 4, 2024 1:31 AM

ಸಾರಾಂಶ

ಬಸವಕಲ್ಯಾಣದ ಯಳವಂತಗಿ ಗ್ರಾಮದಲ್ಲಿ ಬೇಡರ ಕಣ್ಣಪ್ಪ ದೇವಸ್ಥಾನದ ಭೂಮಿ ಪೂಜೆ ಸಮಾರಂಭವನ್ನು ಡಾ. ಚನ್ನವೀರ ಶಿವಾಚಾರ್ಯರು ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಭಕ್ತಿ ಎಂಬುದು ಮುಕ್ತಿ ಸಾಧನೆಗೆ ಬಹುದೊಡ್ಡ ಸೇತುವೆ ಒದಗಿಸುತ್ತದೆ ಎನ್ನುವಲ್ಲಿ ಎರಡು ಮಾತಿಲ್ಲ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

ತಾಲೂಕಿನ ಯಳವಂತಗಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಟ್ರಸ್ಟ್‌ನಿಂದ ಆಯೋಜಿಸಿದ ಶಿವಭಕ್ತ ಬೇಡರ ಕಣ್ಣಪ್ಪ ದೇವಸ್ಥಾನದ ಭೂಮಿ ಪೂಜೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಭಕ್ತಿಗೆ ಎಲ್ಲಿಲ್ಲದ ಪ್ರಾಧಾನ್ಯತೆ ಇದೆ. ದೃಢವಾದ ಭಕ್ತಿಗೆ ಮೆಚ್ಚಿ ದೇವರು ಸಾಕ್ಷಾತ್ಕಾರವಾಗಿರುವ ಅನೇಕ ನಿದರ್ಶನಗಳು ನಮ್ಮ ಭಾರತೀಯ ಪರಂಪರೆಯಲ್ಲಿ ಕಾಣಸಿಗುತ್ತವೆ ಎಂದರು.

ನಮ್ಮ ದೇಶದಲ್ಲಿ ಭಕ್ತಿ ಪರಂಪರೆ ಇಂದು ನಿನ್ನೆಯದಲ್ಲ, ಸನಾತನ ಕಾಲದಿಂದಲೂ ಧ್ಯಾನ, ತಪಸ್ಸು, ಭಕ್ತಿ, ಅಧ್ಯಾತ್ಮ ಸಾಧನೆ ಈ ನೆಲದ ದಿವ್ಯತೆಯನ್ನು ಹೆಚ್ಚಿಸಿವೆ. ದೇವರು ಭಕ್ತಿ ಪ್ರಿಯನು ಎನ್ನುವುದಕ್ಕೆ ಕಣ್ಣಪ್ಪ ನಮಗೆ ಇವತ್ತಿಗೂ ಸಾಕ್ಷಿಯಾಗಿ ನಿಲ್ಲುತ್ತಾನೆ.

ನಮ್ಮ ದೇಹದ ಪರಮಶ್ರೇಷ್ಠ ಅಂಗವಾದ ಕಕ್ಷುವನ್ನೆ ಭಗವಂತನಿಗೆ ಅರ್ಪಿಸಿದ ಕಣ್ಣಪ್ಪನ ತ್ಯಾಗ ಯಾರೂ ಅಲ್ಲಗಳೆಯುವಂತಿಲ್ಲ. ದೇವರು ಕರುಣಿಸಿದ ಕಾಯದ ಮೇಲಿನ ಮೋಹ ತೊರೆದು ನಿರ್ಮೋಹಿಯಾಗಿ ಯಾವ ತ್ಯಾಗಕ್ಕೂ ಸಿದ್ಧರಾದಾಗ ದೈವ ಸಾಕ್ಷಾತ್ಕಾರ ಸಾಧ್ಯ ಎಂಬುದು ಕಣ್ಣಪ್ಪ ತೋರಿಸಿ ಕೊಟ್ಟಿದ್ದಾರೆ.

ಹಿರನಾಗಾಂವಿನ ಜಯಶಾಂತಲಿಂಗ ಸ್ವಾಮಿ ನೇತೃತ್ವ ವಹಿಸಿ ಮಾತನಾಡಿ, ನಿಮ್ಮ ಜಾತಿ ಯಾವುದೇ ಆಗಿರಲಿ, ಭಕ್ತಿ ಮಾತ್ರ ಒಂದೇ ಇರಲಿ, ಜಾತಿ ಮತ ಪಂಥ ಭೇದವಿಲ್ಲದೆ ಗ್ರಾಮದ ಎಲ್ಲಾ ಸಮುದಾಯದ ಭಕ್ತರು ಒಂದಾಗಿ ಬೇಡರ ಕಣ್ಣಪ್ಪನ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.

ಕಲಬುರ್ಗಿಯ ಸಾವಿತ್ರಿ ಶರಣು ಸಲಗರ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜಕುಮಾರ ಸಿರಗಪೂರ, ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ನಂದಕುಮಾರ ಪಾಟೀಲ, ಪ್ರಾಂಶುಪಾಲ ರಾಮ ಭೋಸಲೆ, ಬೀದರ್‌ ಬೇಡರ ಸಮಾಜ ಜಿಲ್ಲಾಧ್ಯಕ್ಷ ದಶರಥ ಜಮಾದಾರ, ಚಿಕನಗಾಗಾಂವ ಗ್ರಾ.ಪಂ ಅಧ್ಯಕ್ಷರಾದ ಮಿಲಿಂದ ಕೊಳ್ಳದ, ಚೆನ್ನಪ್ಪ ಆರ್. ಸುರಪುರ, ಚಿಕನಗಾಗಾಂವ ಗ್ರಾಪಂ ಪಿಡಿಓ ಗಿರೀಶ, ಉಪನ್ಯಾಸಕರಾದ ಲಕ್ಷ್ಮಣ್ ಭೋಸಲೆ, ಶಿವರಾಜ ನಾಯಕ, ದೇವು ಎನ್. ಜಮಾದಾರ, ಶಂಕರ ಸುಬೇದಾರ, ಭೀಮಾಶಂಕರ ಮಾಲಿ ಪಾಟೀಲ, ಬಂಡಯ್ಯ ಸ್ವಾಮಿ ಮಠಪತಿ, ದಿಲೀಪ ಜಮಾದಾರ, ಚಂದ್ರಕಲಾ ಜಮಾದಾರ, ಸುವರ್ಣ ಸಾಗರ, ಚನ್ನವೀರ ಜಮಾದಾರ, ಗೋವಿಂದ ಮಂಡಲೆ, ಬಸವಲಿಂಗ ಸುಬೇದಾರ, ಗುಂಡಪ್ಪ ಪಾಟೀಲ, ಮಲ್ಲಿನಾಥ ಮಠಪತಿ, ಸುಭಾಷ ಸುಬೇದಾರ, ಅಂಬಾರಾಯ ಜಮಾದಾರ, ಭಿಮಶಾ ಇಟಗಿ, ಅಮರನಾಥ ನಾಯಕ ಇದ್ದರು.

Share this article