ಚುನಾವಣಾಧಿಕಾರಿ ಹರೀಶ್ ಘೋಷಣೆ
ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಭಾರತಿ ಚಂದ್ರೇಗೌಡ ಅವಿರೋಧವಾಗಿ ಆಯ್ಕೆಗೊಂಡರು.
ತಾಲೂಕಿನ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಯಶೋಧ ಲೋಕೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಶುಕ್ರವಾರ ಚುನಾವಣೆ ನಿಗದಿ ಆಗಿತ್ತು. ಒಟ್ಟು ೧೭ ಜನ ಸದಸ್ಯರ ಬಲ ಹೊಂದಿರುವ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ೩ ಜನ ಸದಸ್ಯರು ಗೈರು ಹಾಜರಾಗಿದ್ದರು, ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ೧೪ ಜನ ಸದಸ್ಯರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಭಾರತಿ ಚಂದ್ರೇಗೌಡ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಭಾರತಿ ಚಂದ್ರೇಗೌಡ ನೂತನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಜಿ.ಆರ್.ಹರೀಶ್ ಘೋಷಣೆ ಮಾಡಿದರು.ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆಯನ್ನು ಸನ್ಮಾನಿಸಿ ಗೌರವಿಸಲಾಯಿತು, ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತಿ ಚಂದ್ರೇಗೌಡ, ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರ ಸಲಹೆ, ಸಹಕಾರ ಪಡೆದು ಗ್ರಾಮ ಪಂಚಾಯತಿಯ ಎಲ್ಲಾ ವಾರ್ಡ್‌ಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
‘ಇಂದು ನನ್ನನ್ನು ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ಆಗಲು ಸಹಕರಿಸಿದ ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ’ ಎಂದರು.ಈ ಸಂದರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಸುನಿಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಾಧಾ ಬಸವರಾಜ್, ನಿಕಟಪೂರ್ವ ಅಧ್ಯಕ್ಷರಾದ ಯಶೋಧ ಲೋಕೇಶ್ , ಗ್ರಾ.ಪಂ. ಸದಸ್ಯರಾದ ವಾಸು, ಚಂದ್ರಶೇಖರ್, ಸ್ವಾಮಿ, ಶಾಲಿನಿ ಬಾಹುಬಲಿ, ಸಂಜಿತಾ ರೂಪೇಶ, ಮೋಹನ್ ಕುಮಾರಿ, ಅಲ್ತಾಫ್, ಪಾಂಡು, ಯಶಸ್, ಕೃಷ್ಣಮೂರ್ತಿ, ಸುರೇಣ ಜಗದೀಶ್, ಪಿಡಿಒ ಬಸವರಾಜ್ ಸೇರಿದಂತೆ ಇತರರು ಹಾಜರಿದ್ದರು.ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಅವರೋಧವಾಗಿ ಆಯ್ಕೆಗೊಂಡ ಭಾರತಿ ಚಂದ್ರೇಗೌಡ ಅವರನ್ನು ಸದಸ್ಯರು ಹಾಗೂ ಬೆಂಬಲಿಗರು ಅಭಿನಂದಿಸಿದರು.