ಭಟ್ಕಳ: ಇತಿಹಾಸ ಪ್ರಸಿದ್ಧ ಮಾರಿಜಾತ್ರೆಯು ಆ. ೫ ಮತ್ತು ೬ರಂದು ವಿಜೃಂಭಣೆಯಿಂದ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರೆ ಯಶಸ್ವಿಗೊಳಿಸಬೇಕು ಎಂದು ಮಾರಿಕಾಂಬಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಪಾದ ಕಂಚುಗಾರ ತಿಳಿಸಿದರು.
ಪೂರ್ವಜರ ಕಾಲದಿಂದಲೂ ಮಾರಿ ಮೂರ್ತಿ ನಿರ್ಮಾಣದ ಸೇವೆ ಸಲ್ಲಿಸುತ್ತಿರುವ ಮಣ್ಣುಳಿ ಆಚಾರ್ಯರ ಮನೆತನದಲ್ಲಿ ಆ. ೪ರಂದು ಸಂಜೆ ಸುವಾಸಿನಿ ಪೂಜೆ ನಡೆಯಲಿದೆ. ಬಳಿಕ ಆ. ೫ರಂದು ಆಚಾರ್ಯ ಮನೆತನದವರು ಮಾರಿದೇವಿಯ ಮೂರ್ತಿಯನ್ನು ದೇವಸ್ಥಾನದ ಆಡಳಿತ ಮಂಡಳಿಗೆ ವಿಧಿವತ್ತಾಗಿ ಹಸ್ತಾಂತರಿಸಲಿದ್ದಾರೆ. ಅಲ್ಲಿಂದ ಮಣ್ಕುಳಿ ಮಾರಿ ತವರುಮನೆಯಿಂದ ರಘುನಾಥ ದೇವಸ್ಥಾನ ಬಸ್ತಿ ರಸ್ತೆ ರಥಬೀದಿ ಮಾರ್ಗವಾಗಿ ತಲೆಯ ಮೇಲೆ ಹೊತ್ತು ಭಕ್ತಿಪೂರ್ವಕ ಮೆರವಣಿಗೆಯಲ್ಲಿ ಮೂರ್ತಿಯನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಬೆಳಗ್ಗೆ ಸುಮಾರು ೫.೩೦ಕ್ಕೆ ದೇವಸ್ಥಾನದ ಗದ್ದುಗೆಯಲ್ಲಿ ಮಾರಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿಷ್ಠೆಯ ಬಳಿಕ ಜೈನ ಸಮುದಾಯದ ಅರ್ಚಕರು ಪ್ರಥಮ ಪೂಜೆ ನೆರವೇರಿಸುತ್ತಾರೆ. ಎರಡು ದಿನಗಳ ಜಾತ್ರೆಯಲ್ಲಿ ಭಟ್ಕಳ ತಾಲೂಕು ಸೇರಿದಂತೆ ನೆರೆಹೊರೆಯ ತಾಲೂಕುಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ, ಸರ್ವಸೇವೆ, ಕುಂಕುಮಾರ್ಚನೆ ಹಾಗೂ ಮಹಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆ. ೬ರಂದು ಸಂಜೆ ೪.೩೦ಕ್ಕೆ ಮಹಾ ಪ್ರಾರ್ಥನೆ ಹಾಗೂ ವಿಸರ್ಜನಾ ಪೂಜೆ ನಡೆಯಲಿದ್ದು, ಬಳಿಕ ದೇವಸ್ಥಾನದಿಂದ ಮುಸ್ಬಾ ಕ್ರಾಸ್, ಹಳೆಯ ಬಸ್ ನಿಲ್ದಾಣ, ಬಂದರು ರಸ್ತೆ, ಹನುಮಾನನಗರ ಹಾಗೂ ಜಾಲಿ ಕೋಡಿ ಮಾರ್ಗವಾಗಿ ಸುಮಾರು ೭ ಕಿಮೀ ಉದ್ದದ ಭವ್ಯ ವಿಸರ್ಜನಾ ಮೆರವಣಿಗೆ ಸಾಗಲಿದೆ. ಸಮುದ್ರ ತೀರದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ದೇವಿಯ ವಿಸರ್ಜನೆ ನೆರವೇರಲಿದ್ದು, ೨೫ ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಈ ವರ್ಷದಿಂದ ಭಕ್ತರು ಹರಕೆ ರೂಪದಲ್ಲಿ ಸಮರ್ಪಿಸುವ ಹಣ್ಣುಕಾಯಿಗೆ ಕುಂಕುಮ ಹಚ್ಚುವ ಪದ್ಧತಿಯ ಬದಲಾಗಿ, ಕುಂಕುಮ ಪ್ರಸಾದವನ್ನು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ವಿತರಿಸಲಾಗುವುದು. ಭಕ್ತರು ಈ ಹೊಸ ವ್ಯವಸ್ಥೆಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.ಸಮುದ್ರ ತೀರದಲ್ಲಿ ನಡೆಯುವ ವಿಸರ್ಜನಾ ಪೂಜೆಯ ನಂತರದ ಧಾರ್ಮಿಕ ವಿಧಿ-ವಿಧಾನಗಳು ಅತ್ಯಂತ ಪವಿತ್ರ ಹಾಗೂ ಸಂಪ್ರದಾಯಬದ್ಧವಾಗಿರುವ ಹಿನ್ನೆಲೆಯಲ್ಲಿ, ಆ ಸಂದರ್ಭದಲ್ಲಿ ಯಾವುದೇ ರೀತಿಯ ಫೋಟೋ, ವೀಡಿಯೊ ಅಥವಾ ಇತರ ಚಿತ್ರೀಕರಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜಾತ್ರೆಯ ಮೊದಲ ದಿನ ಬೆಳಗ್ಗೆ ೬ರಿಂದ ರಾತ್ರಿ ೯ರ ವರೆಗೆ ಹಾಗೂ ಎರಡನೇ ದಿನ ಬೆಳಗ್ಗೆ ೬ರಿಂದ ಸಂಜೆ ೪.೩೦ರ ವರೆಗೆ ಭಕ್ತರಿಗೆ ದೇವಿಯ ದರ್ಶನ ಹಾಗೂ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.