ಭೀಮೆ ಅಬ್ಬರ: ಕೊಟ್ಟಿಗೆಗೆ ನೀರು; 40 ಹಸು ಸಾವು

KannadaprabhaNewsNetwork |  
Published : Sep 29, 2025, 01:02 AM IST

ಸಾರಾಂಶ

ಜಿಲ್ಲೆಯಲ್ಲಿ ಭೀಮಾ, ಕಾಗಿಣಾ, ಕಮಲಾವತಿ ಸೇರಿ ಹಲವು ನದಿಗಳಲ್ಲಿ ಪ್ರವಾಹ ಮುಂದುವರಿದಿದೆ. ಕಳೆದ 4 ದಿನದಿಂದಲೇ ಭಾರಿ ಮಹಾಪುರ ಬಂದು ಅಬ್ಬರಿಸುತ್ತಿರುವ ಭೀಮಾ ನದಿಯಲ್ಲಿ ಮತ್ತಷ್ಟು ನೀರಿನ ಪ್ರಮಾಣ ಹೆಚ್ಚಳವಾಗಿದೆ. ಮಹಾರಾಷ್ಟ್ರ ನೀರು ಹರಿಸೋದು ಮುಂದುವರಿಸಿದೆ. ಭೀಮಾ ಉಕ್ಕೇರಿದ್ದರಿಂದ ಆಫ್ಜಲಪುರ, ಕಲಬುರಗಿ, ಜೇವರ್ಗಿ, ಚಿಂಚೋಳಿ, ಚಿತ್ತಾಪುರ, ಕಾಳಗಿಯಲ್ಲಿ ಆತಂಕ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ ಭೀಮಾ, ಕಾಗಿಣಾ, ಕಮಲಾವತಿ ಸೇರಿ ಹಲವು ನದಿಗಳಲ್ಲಿ ಪ್ರವಾಹ ಮುಂದುವರಿದಿದೆ. ಕಳೆದ 4 ದಿನದಿಂದಲೇ ಭಾರಿ ಮಹಾಪುರ ಬಂದು ಅಬ್ಬರಿಸುತ್ತಿರುವ ಭೀಮಾ ನದಿಯಲ್ಲಿ ಮತ್ತಷ್ಟು ನೀರಿನ ಪ್ರಮಾಣ ಹೆಚ್ಚಳವಾಗಿದೆ. ಮಹಾರಾಷ್ಟ್ರ ನೀರು ಹರಿಸೋದು ಮುಂದುವರಿಸಿದೆ. ಭೀಮಾ ಉಕ್ಕೇರಿದ್ದರಿಂದ ಆಫ್ಜಲಪುರ, ಕಲಬುರಗಿ, ಜೇವರ್ಗಿ, ಚಿಂಚೋಳಿ, ಚಿತ್ತಾಪುರ, ಕಾಳಗಿಯಲ್ಲಿ ಆತಂಕ ಮುಂದುವರಿದಿದೆ.

ಕಟ್ಟಿ ಸಂಗಾವಿ ಸೇತುವೆ ಮುಳುಗಡೆಯಾಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದ ಬಳಿಯ ಸಂಪರ್ಕ ಸೇತುವೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೃಹತ್ ಸೇತುವೆಗೆ ಪ್ರವಾಹ ಅಡಚಣೆ, ಆತಂಕ, ಸವಾಲನ್ನು ಒಡ್ಡಿದೆ.

ಸೇತುವೆ ಮೇಲೆ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೆರಲಾಗಿದೆ. ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ಹೀಗಾಗಿ ಕಲಬುರಗಿ- ಬೆಂಗಳೂರು ಮಾರ್ಗದ ನೇರ ಸಂಪರ್ಕ ಕಡಿತಗೊಂಡಿದೆ.

ರೈಲು ವಿಳಂಬಗೊಂಡು ಬದಲಿ ಮಾರ್ಗದಲ್ಲಿ ಸಂಚರಿಸಲು ಪ್ರಯಾಣಿಕರು ಪರದಾಡುತ್ತಿದ್ದಾರೆ. ಸೇತುವೆ ಮುಳುಗಡೆ ಹಿನ್ನೆಲೆ ಒಂದುವರೆ ಕಿಲೋ ಮೀಟರ್ ರಾಜ್ಯ ಹೆದ್ದಾರಿವರೆಗೆ ಲಾರಿ ಸೇರಿ ವಾಹನಗಳು ಚಲಿಸಲಾಗಿದೆ ಗಂಟೆಗಟ್ಟಲೇ ಸ್ಥಳದಲ್ಲೇ ನಿಂತುಬಿಟ್ಟಿವೆ.

ಮುಂಜಾಗ್ರತಾ ಕ್ರಮವಾಗಿ ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಭೀಮಾ ನದಿ ಪ್ರವಾಹಕ್ಕೆ ಕೃಷಿ ಕಾರ್ಮಿಕ ಬಲಿ:

ಕಲಬುರಗಿ ತಾಲೂಕಿನ ಸೋಮನಾಥ ಹಳ್ಳಿಯಲ್ಲಿ ದನಗಳಿಗೆ ನೀರು ಕುಡಿಸಲು ಹೋಗಿ ನೀರು ನಿಂತ ಹೊಂಡದಲ್ಲಿ ಬಿದ್ದು ಕೃಷಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

ಅಶೋಕ ದೊಡ್ಡಮನಿ (50) ಮೃತ ದುರ್ದೈವಿ ಎಂದು ಹೇಳಲಾಗಿದೆ. ಸ್ಥಳಕ್ಕೆ ಕಲಬುರಗಿ ತಹಸೀಲ್ದಾರ ಸೇರಿದಂತೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಪತ್ನಿಯನ್ನು ಕಳೆದುಕೊಂಡಿರುವ ಅಶೋಕ, ಕಳೆದ ಕೆಲವು ವರ್ಷಗಳಿಂದ ತನ್ನ ನಾಲ್ಕು ಮಕ್ಕಳ ಪೋಷಣೆ ಮಾಡುತ್ತಿದ್ದ. ಆದರೆ ಈಗ ಅಶೋಕನ ದುರ್ಮರಣ ಆಗಿದೆ. ಈಗ ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.

ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಚಿಂಚೋಳಿ ಪ್ರವಾಹಕ್ಕೆ 40 ಜಾನುವಾರು ಬಲಿ:

ಚಂದ್ರಂಪಳ್ಳಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಚಿಂಚೋಳಿ ತಾಲೂಕಿನ ಜೆಟ್ಟೂರ ಗ್ರಾಮ ಜಲಾವೃತಗೊಂಡಿದೆ. ಅಪಾರ ಪ್ರಮಾಣದ ನೀರು ಮಧ್ಯ ರಾತ್ರಿ ಹರಿದು ಬಂದಿದ್ದರಿಂದ ಕೊಟ್ಟಿಗೆಯಲ್ಲಿ ಕಟ್ಟಿದ 110 ಹಸುಗಳ ಪೈಕಿ 40 ಹಸುಗಳು ಮೃತಪಟ್ಟಿವೆ.

ಹಳ್ಳದಲ್ಲಿ ಕೊಚ್ಚಿ ಹೋದ 10 ಹಸುಗಳು

ಜೆಟ್ಟೂರ ಗ್ರಾಮದ ಕೊಟ್ಟಿಗೆಯಲ್ಲಿ ರಾತ್ರಿ ನೀರು ಬಂತು. ದನಗಳ ಕೊಟ್ಟಿಗೆ ತುಂಬಾ ನಿರು ನುಗ್ಗಿ ಭಾರಿ ತೊಂದರೆ ಎದುರಾಗಿತ್ತು. ಕೊಟ್ಟಿಗೆಗೆ ನೀರು ನುಗ್ಗಿ ನೀರಿನಲ್ಲಿ ಮುಳುಗಿ ಅಲ್ಲಿ ಕಟ್ಟಲಾಗಿದ್ದ 110 ಹಸುಗಳ ಪೈಕಿ 40 ಹಸುಗಳು ಮೃತಪಟ್ಟಿವೆ. ಮೆಹಬೂಬ್ ನಗರ ಮಾಜಿ ಸಂಸದ ಶ್ರೀನಿವಾಸ ರೆಡ್ಡಿಗೆ ಸೇರಿದ ಹಸುಗಳು ಕೊಟ್ಟಿಗೆಯಿಂದ ಹೊರಬಂದು 60 ಅಧಿಕ ಹಸುಗಳು ಜೀವ ಉಳಿಸಿಕೊಂದಿವೆ. ಇನ್ನುಳಿದ 10 ಹಸುಗಳು ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.

ಸ್ವಾಮೀಜಿಯನ್ನು ರಕ್ಷಿಸಿದ ಭಕ್ತರು

ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿ ಆರ್ಭಟದ ಜತೆ ಜತೆಗೆ ಕಾಗಿಣಾ ನದಿ ಆರ್ಭಟ ಕೂಡ ಹೆಚ್ಚಾಗಿದೆ. ಶಹಬಾದ್-ಇಂಗಳಗಿ ಗ್ರಾಮದ ಮಧ್ಯೆ ಕಾಗಿಣ ನದಿ ಪ್ರವಾಹದಲ್ಲಿ ಸಿಲುಕಿದ್ದ ವಿಶ್ವರಾಧ್ಯ ತಪೋವನದ ಚಂದ್ರಶೇಖರ ಶರಣರನ್ನು ಗ್ರಾಮಸ್ಥರೇ ರಕ್ಷಣೆ ಮಾಡಿರುವ ಘಟನೆ ನಡೆದಿದೆ.

ಇಡೀ ಇಂಗಳಗಿ ಗ್ರಾಮದ ಜತೆ ತಪೋವನವನ್ನು ಕಾಗಿಣಾ ನದಿ ಆವರಿಸಿದ್ದು, ವಿಶ್ವರಾಧ್ಯ ತಪೋವನಕ್ಕೆ ನೀರು ನುಗ್ಗಿದೆ. ತಪೋವನದ ಒಳಗಡೆ ಚಂದ್ರಶೇಖರ ಶರಣರು ಸಿಲುಕಿದ್ದರು.

ಈ ವೇಳೆ ಗ್ರಾಮಸ್ಥರೇ ಡ್ರಮ್‌ಗಳಿಂದಲೇ ದೋಣಿ ಮಾಡಿ ಅದರ ಮೇಲೆ ಶ್ರೀಗಳನ್ನ ಕೂಡಿಸಿಕೊಂಡು ಪ್ರವಾಹದಿಂದ ಶ್ರೀಗಳನ್ನ ಸುರಕ್ಷಿತವಾಗಿ ಕರೆತಂದಿದ್ದಾರೆ.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ